ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರನ್ನು ಕೊನೆಗೂ ಸಿಎಂ ಬಿಎಸ್ ಯಡಿಯೂರಪ್ಪ ಕೈಹಿಡಿದಿದ್ದು, ಸಂಪುಟ ದರ್ಜೆಯ ಸ್ಥಾನ ನೀಡಿ ಸಮಾಧಾನಪಡಿಸಿದ್ದಾರೆ.
ಬೆಂಗಳೂರು, [ಸೆ.06]: ಸಚಿವ ಸ್ಥಾನ ಸಿಗದಿದ್ದಕ್ಕೆ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಮುನಿಸಿಕೊಂಡಿದ್ದ ಶಾಸಕ ಎಂ.ಪಿ.ರೇಣುಕಾರ್ಚಾ ಅವರಿಗೆ ಕೊನೆಗೂ ಸಚಿವ ಸಂಪುಟ ಸ್ಥಾನಮಾನದ ಹುದ್ದೆ ನೀಡಲಾಗಿದೆ.
ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ರೇಣುಕಾಚಾರ್ಯ ಅವರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಇಂದು [ಶುಕ್ರವಾರ] ಆದೇಶ ಹೊರಡಿಸಿದೆ.
ಸಂಪುಟ ದರ್ಜೆ ಸ್ಥಾನಮಾನದೊಂದಿಗೆ, ಸಂಪುಟ ದರ್ಜೆಯ ಸಚಿವರಿಗೆ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಆದೇಶಿಸಿದೆ.
ಬಿಎಸ್ ವೈ ಸಂಪುಟದಲ್ಲಿ ಮಂತ್ರಿಗಿರಿ ಸಿಗದಿದಕ್ಕೆ ಮುನಿಸಿಕೊಂಡಿದ್ದ ರೇಣುಕಾಚಾರ್ಯ ಅವರು ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದ್ರೆ ಇದೀಗ ಸಂಪುಟ ದರ್ಜೆಯ ಸ್ಥಾನಮಾನ ಹುದ್ದೆ ನೀಡಿ ಅವರನ್ನು ಸಮಾಧಾನಪಡಿಸಲಾಗಿದೆ.
ಸಾಮಾನ್ಯವಾಗಿ ಸಿಎಂ ಅವರು ತಮ್ಮ ರಾಜಕೀಯ ಕಾರ್ಯದರ್ಶಿಯನ್ನಾಗಿ ತಮ್ಮದೇ ಪಕ್ಷದ ಶಾಸಕರೊಬ್ಬರನ್ನು ನೇಮಿಸಿಕೊಳ್ಳುವುದು ಹಿಂದಿನಿಂದಲೂ ಬಂದಿರುವ ಪರಿಪಾಠವಾಗಿದೆ.