
ನವದೆಹಲಿ : ಮಹದಾಯಿ ನದಿ ನ್ಯಾಯಾಧಿಕರಣದ ಮುಂದೆ ನಡೆಯುತ್ತಿರುವ ಅಂತಿಮ ವಿಚಾರಣೆಯಲ್ಲಿ ಕರ್ನಾಟಕ ತನ್ನ ವಾದ ಮಂಡನೆ ಪ್ರಾರಂಭಿಸಿದೆ. ಮಂಗಳವಾರದಂದು ರಾಜ್ಯದ ಪರ ವಾದ ಪ್ರಾರಂಭಿಸಿದ ವಕೀಲ ಮೋಹನ್ ಕಾತರಕಿ, ಗೋವಾದ ತಕರಾರಿಗೆ ಯಾವುದೇ ಕಾನೂನಾತ್ಮಕ ಮನ್ನಣೆಯೇ ಇಲ್ಲ ಎಂದು ಹೇಳಿದ್ದಾರೆ.
ಮಹದಾಯಿ ಪಾತ್ರದಲ್ಲಿನ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರವನ್ನು ಬಾಡಿಗೆ ಮನೆಗೆ ಹೋಲಿಸಿ ವಾದಿಸಿದ ಕಾತರಕಿ, ಒಂದು ವೇಳೆ ಯಾವುದೇ ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾನಿಯಾದರೆ ವ್ಯಾಜ್ಯವಾಗುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಹಾನಿಯಾಗಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕ ತನ್ನ ಪಾಲಿನ ನೀರನ್ನು ಇತರ ರಾಜ್ಯಗಳಿಗೆ ಹಾನಿಗೊಳಿಸಲು ಬಳಸುತ್ತಿಲ್ಲ. ಮಹದಾಯಿ ನದಿ ನೀರನ್ನು ಬಳಸುವ, ತಿರುಗಿಸುವ ಮತ್ತು ನಿಯಂತ್ರಿಸುವ ವಿಷಯದಲ್ಲಿ ಕರ್ನಾಟಕ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ. ಆದಾಗ್ಯೂ ಗೋವಾ ಪೂರ್ವಗ್ರಹದಿಂದ ದೂರನ್ನು ನೀಡಿದ್ದು ಇಂತಹ ದೂರುಗಳಿಗೆ ಅಂತಾರಾಜ್ಯ ಜಲಕಾಯ್ದೆಯಲ್ಲಿ ಅವಕಾಶವಿಲ್ಲ. ಆದ್ದರಿಂದ ಗೋವಾದ ದೂರನ್ನು ತಳ್ಳಿ ಹಾಕಬೇಕು ಎಂದು ವಾದಿಸಿದರು.
ಕಳವಳ ಅನಗತ್ಯ: ಕರ್ನಾಟಕ ಸರ್ಕಾರವು ಶಾಸನಬದ್ಧ ಸಂಸ್ಥೆಗಳಿಂದ ಕಾನೂನಾತ್ಮಕ ಅನುಮತಿ ಪಡೆಯದೇ ಕಾಮಗಾರಿ ನಡೆಸಿದೆ ಎಂದು ಗೋವಾ ಆರೋಪಿಸಿದ್ದು ಈ ಬಗ್ಗೆ ನ್ಯಾಯಾಧಿಕರಣ ಕಳವಳ ಹೊಂದುವ ಅಗತ್ಯವಿಲ್ಲ ಎಂದು ಕಾತರಕಿ ವಾದ ಮಂಡನೆಯ ಸಂದರ್ಭದಲ್ಲಿ ಹೇಳಿದರು.
ತಕ್ಷಣವೇ ಮಧ್ಯಪ್ರವೇಶಿಸಿದ ನ್ಯಾಯಾಧಿಕರಣದ ಮುಖ್ಯಸ್ಥ ನ್ಯಾ.ಜೆ.ಎಂ. ಪಾಂಚಾಳ್, ಏಕೆ ಕಳವಳ ಹೊಂದಬಾರದು? ನೀವು ಶಾಸನಬದ್ಧ ಸಂಸ್ಥೆಗಳಿಂದ ಅನುಮತಿ ಪಡೆದಿದ್ದೀರೋ, ಇಲ್ಲವೋ ಎಂಬುದರ ಬಗ್ಗೆ ನಮಗೆ ಕಳವಳವಿದೆ ಎಂದು ಸ್ಪಷ್ಟಪಡಿಸಿದರು.
ಆಗ ಕಾತರಕಿ, ನಾವು ಅನುಮತಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ನ್ಯಾ.ಪಾಂಚಾಳ್, ನೀವು ಅನುಮತಿ ಕೋರಿರಬಹುದು. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪು ಈ ಬಗ್ಗೆ ಸ್ಪಷ್ಟವಾಗಿಯೇ ಇದೆ. ಸೂಕ್ತ ಅನುಮತಿ ಪಡೆದೇ ಮುಂದುವರಿಯಬೇಕು ಎಂದು ನ್ಯಾ.ಪಾಂಚಾಳ್ ಹೇಳಿದರು.
ಗೋವಾ ಇಲ್ಲಿ ಪ್ರಸ್ತಾಪಿಸಿರುವ ಅನೇಕ ವಿಷಯಗಳು ನ್ಯಾಯಾಧಿಕರಣದ ವ್ಯಾಪ್ತಿಯನ್ನು ಮೀರಿವೆ. ಮಲಪ್ರಭ ಕೊಳ್ಳದಲ್ಲಿ ಹೆಚ್ಚಿನ ನೀರಿದೆ ಎಂದು ಗೋವಾ ತನ್ನ ಅರ್ಜಿಯಲ್ಲಿ ಎಲ್ಲಿಯೂ ಹೇಳಿಲ್ಲ. ನದಿ ಕೊಳ್ಳದಲ್ಲಿ ಮೇಲಿನ ರಾಜ್ಯಗಳಿಗೂ ನೀರಿನಲ್ಲಿ ನ್ಯಾಯಯುತ ಹಕ್ಕಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಕಾನೂನು, ನಿಯಮಗಳಿವೆ ಎಂದು ಕರ್ನಾಟಕ ಪ್ರತಿಪಾದಿಸಿದೆ.
ಜನ ತಕರಾರು ತೆಗೆಯಬೇಕು, ಗೋವಾವಲ್ಲ: ಒಂದು ವೇಳೆ ಕರ್ನಾಟಕದ ಯೋಜನೆಗಳಲ್ಲಿ, ನೀರಿನ ಹಂಚಿಕೆಯಲ್ಲಿ ಸಮಸ್ಯೆಗಳಿದ್ದಲ್ಲಿ ಕರ್ನಾಟಕದ ಜನರು ತಕರಾರು ತೆಗೆಯಬೇಕೆ ಹೊರತು ಗೋವಾವಲ್ಲ. ಅಂತರ್ ನದಿ ಪಾತ್ರಗಳಿಗೆ ನೀರಿನ ತಿರುವಿಗೆ ಅವಕಾಶ ನೀಡಲಾಗಿದೆ. ಗೋವಾ 2002ರಲ್ಲಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದ ದೂರು ಮತ್ತು ಸಾಕ್ಷಿಗಳಿಗೂ ಇದೀಗ ನ್ಯಾಯಾಧಿಕರಣದ ಮುಂದೆ ಮಂಡಿಸಿರುವ ತಕರಾರಿಗೂ ತಾಳೆ ಆಗುತ್ತಿಲ್ಲ. ಕರ್ನಾಟಕ ತನ್ನ ಪಾಲಿನ ನೀರನ್ನು ಪಡೆಯುವುದರಿಂದ ಗೋವಾಕ್ಕೆ ಧಕ್ಕೆ ಆಗುವುದಿಲ್ಲ ಎಂದು ಕಾತರಕಿ ವಾದಿಸಿದರು. ಗುರುವಾರ ರಾಜ್ಯ ತನ್ನ ವಾದ ಮುಂದುವರಿಸಲಿದೆ.
ಬೆಳಗ್ಗೆ ಗೋವಾದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ… ಆತ್ಮಾರಾಮ ನಾಡಕರ್ಣಿ, ಸುರಾಲ ಮತ್ತು ಮಹದಾಯಿ ನದಿಯಲ್ಲಿ ಮಾತ್ರ ಮಾನ್ಸೂನ್ ನಂತರವೂ ನೀರು ಹರಿಯುತ್ತದೆ. ಮಾಧವ್ ಗಾಡ್ಗಿಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಕೂಡ ಮಹದಾಯಿ ಕೊಳ್ಳದ ಸೂಕ್ಷ್ಮತೆಯ ಬಗ್ಗೆ ಉಲ್ಲೇಖಿಸಿವೆ. ಅಷ್ಟೇ ಅಲ್ಲದೆ ಅಭಯಾರಣ್ಯಗಳು ಕೂಡ ಮಹದಾಯಿ ಕೊಳ್ಳದಲ್ಲಿವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.