
ನೈಸರ್ಗಿಕ ವಿಕೋಪಕ್ಕೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳು ನಲುಗಿಹೋಗಿವೆ. ನೆರೆ ವೇಳೆ ಉಟ್ಟಬಟ್ಟೆಯಲ್ಲೇ ಮನೆ ಬಿಟ್ಟು ಬಂದು ಲಕ್ಷಾಂತರ ಜನರು ಸರ್ಕಾರದ ಪರಿಹಾರ ಗೂಡು ಸೇರಿಕೊಂಡರು. ಇನ್ನೂ ಕೆಲವರು ತಮ್ಮ ಸಂಬಂಧಿಕರಿಂದ ಆಶ್ರಯ ಪಡೆದುಕೊಂಡರು. ನೆರೆ ತಹಬದಿಗೆ ಬಂದ ನಂತರ ವಾಪಸ್ ತಮ್ಮ ತಮ್ಮ ಮನೆಗಳತ್ತ ಸಂತ್ರಸ್ತರು ಕಾಲಿಟ್ಟಾಗ ಅವರಿಗಾದ ನೋವು, ಸಂಕಟ ಅಷ್ಟಿಷ್ಟಲ್ಲ. ಹಲವಾರು ವರ್ಷಗಳಿಂದ ಬಾಳಿ ಬದುಕಿದ ಮನೆ ನೆಲಕಚ್ಚಿದ್ದವು.
ಚಕ್ರವರ್ತಿಯನ್ನು ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದ ಗೌಡ್ರನ್ನು ಹಿಗ್ಗಾಮುಗ್ಗ ಜಡಿಸಿದ ಬಿಜೆಪಿ ನಾಯಕ
ಹೊಲದಲ್ಲಿ ಬೆವರು ಸುರಿಸಿ ಬೆಳೆದ ಬೆಳೆಗಳು ಕೊಚ್ಚಿಹೋಗಿದ್ದವು. ಸಂಗ್ರಹಿಸಿಟ್ಟಿದ್ದ ಆಹಾರ ಸಾಮಗ್ರಿಗಳು ಕೊಳೆತು ನಾರುತ್ತಿದ್ದವು. ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳು ಗುರುತೇ ಸಿಗದಂತಾಗಿದ್ದವು. ಕಾಗದ, ಪತ್ರಗಳು, ಪುಸ್ತಕಗಳು ನೀರಿನಲ್ಲಿ ನೆನೆದು ತಮ್ಮ ಅಕ್ಷರದ ಅಸ್ತಿತ್ವವನ್ನೇ ಕಳೆದುಕೊಂಡಿದ್ದವು. ಇನ್ನೂ ಕೆಲವರಿಗೆ ತಮ್ಮ ಮನೆ ಇಲ್ಲಿಯೇ ಇತ್ತು ಎಂದು ಇತಿಹಾಸ ನೆನಪಿಸಿಕೊಂಡಂತೆ ಭಾಸ ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿತ್ತು. ಇಂತಹ ನೆರೆ ಉಂಟಾದಾಗ ರಾಜ್ಯದ ಜನರು, ಸಂಘ ಸಂಸ್ಥೆಗಳು, ಸಮಿತಿಗಳು, ಮಾಧ್ಯಮಗಳು, ಉದ್ಯಮಿಗಳು, ಹೋರಾಟಗಾರರು ಸಂತ್ರಸ್ತರಿಗೆ ಸ್ಪಂದಿಸಿದ ಮಾನವೀಯತೆ ಮನಮಿಡಿಯುವಂತಹದ್ದು. ಇದೆಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳು, ರಕ್ಷಣಾ ತಂಡಗಳು (ರಾಜ್ಯ ಮತ್ತು ಕೇಂದ್ರ), ಅಧಿಕಾರಿಗಳು ನಿರ್ವಹಿಸಿದ ರೀತಿ, ಕಾರ್ಯ, ಸಾಹಸಕ್ಕೆ ಬೆಲೆ ಕಟ್ಟಲಾಗದು.
ಪರಿಹಾರ ಎಲ್ಲ ಸಂತ್ರಸ್ತರನ್ನು ತಲುಪಿದೆಯೇ?
ಆದರೆ ದಾನ ಹಾಗೂ ಮಾನವೀಯತೆ ರೂಪದಲ್ಲಿ ಬಂದ ಪರಿಹಾರ ಸಾಮಗ್ರಿಗಳು ಸಂತ್ರಸ್ತರಿಗೆ ಎಷ್ಟುದಿನಗಳವರೆಗೆ ಬರುತ್ತವೆ? ಇದುವೇ ಅವರಿಗೆ ಶಾಶ್ವತ ಪರಿಹಾರವಾಗುತ್ತದೆಯೆ? ಸರ್ಕಾರ ತಾತ್ಕಾಲಿಕ ಮತ್ತು ಶಾಶ್ವತ ಎಂಬ ಹೆಸರಿನಲ್ಲಿ ನೀಡುತ್ತಿರುವ ಪರಿಹಾರದಲ್ಲಿ ಸಂತ್ರಸ್ತರು ಎಷ್ಟುದಿನ ಬದುಕಲು ಸಾಧ್ಯ? ಅದು ನೆರೆಬಾಧಿತವಾಗಿರುವ ಎಲ್ಲಾ ಸಂತ್ರಸ್ತರನ್ನು ತಲುಪಲು ಸಾಧ್ಯವೆ? ಇಂತಹ ಹಲವಾರು ಪ್ರಶ್ನೆಗಳು ನೆರೆ ಬಾಧಿತರ ಮನದಲ್ಲಿವೆ.
ಒಂದು ಯೋಚಿಸಬೇಕಿದೆ. ಬಾಡಿಗೆ ಮನೆಯಲ್ಲಿರುವ ವ್ಯಕ್ತಿಗೆ ಮನೆ ಮಾಲೀಕ ತಕ್ಷಣವೇ ಮನೆ ಖಾಲಿ ಮಾಡಿ ಎಂದು ಹೇಳಿದಾಗ ಬಾಡಿಗೆದಾರರ ಮನದಲ್ಲಿ ಆಕ್ರೋಶ ಪುಟಿದೇಳುತ್ತದೆ. ಏಕೆಂದರೆ, ಮಕ್ಕಳು, ಪತ್ನಿ, ತಂದೆ, ತಾಯಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು? ಯಾರೂ ಪರಿಚಯಸ್ಥರೇ ಇಲ್ಲದ ಊರಿನಲ್ಲಿ ಯಾರ ಮನೆಯ ಆಶ್ರಯ ಕೇಳಬೇಕು? ಎಂಬ ಯೋಚನೆ ಸಹಜವಾಗಿ ಮನದಲ್ಲಿ ಮೂಡುತ್ತದೆ. ಇನ್ನು ಪ್ರವಾಹ ಬಂದು ನೆತ್ತಿಯ ಮೇಲಿದ್ದ ಸೂರು ನೆಲಕ್ಕೆ ಬಿದ್ದು, ತೊಟ್ಟಿದ್ದ ಬಟ್ಟೆಗಳು ಕೊಚ್ಚಿಕೊಂಡು ಹೋಗಿ, ಕೈಯಲ್ಲಿದ್ದ ಹಣವೆಲ್ಲ ನೀರುಪಾಲಾಗಿ, ಬೆವರು ಸುರಿಸಿ ಸಂಪಾದಿಸಿದ ಕಾಳು, ಬೇಳೆಗಳು, ಆಹಾರ ಸಾಮಗ್ರಿಗಳು ಸರ್ವನಾಶವಾಗಿ ಅಕ್ಷರಶಃ ಸಂತ್ರಸ್ತನಾಗಿ, ಹೆಂಡತಿ, ಮಕ್ಕಳು, ವೃದ್ಧ ತಂದೆ ತಾಯಿ, ದನಕರುಗಳೊಟ್ಟಿಗೆ ಬೀದಿಗೆ ಬಿದ್ದವರ ಬದುಕಿನ ಬಗ್ಗೆ ಸ್ವಲ್ಪ ಯೋಚಿಸಬೇಕಿದೆ.
ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್ ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!
ಪರಿಹಾರದ ಜೊತೆಗೆ ಇನ್ನೇನು ಬೇಕು?
ಇಂತಹ ಸಂತ್ರಸ್ತರಿಗೆ ಸರ್ಕಾರ ಕೇವಲ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ (ತಾತ್ಕಾಲಿಕ ಒಂದು ಕುಟುಂಬಕ್ಕೆ .10 ಸಾವಿರ ಜತೆಗೆ ಹತ್ತು ತಿಂಗಳು .5 ಸಾವಿರ ಮತ್ತು ಶಾಶ್ವತ ಪರಿಹಾರವಾಗಿ ಮನೆ ಕಟ್ಟಲು .5 ಲಕ್ಷ) ನೀಡಿ ಕೈ ತೊಳೆದುಕೊಂಡರೆ ಸಾಲದು. ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ. ಅವರ ಬದುಕನ್ನು ಮರುಹಳಿಗೆ ತರುವ ಕೆಲಸ ಮಾಡಬೇಕಿದೆ. ಹೊಲ, ಮನೆ, ಬದುಕು, ಸೂರು ಕಳೆದುಕೊಂಡವರಲ್ಲಿ ಆರ್ಥಿಕ ಚೈತನ್ಯ ತುಂಬಬೇಕಿದೆ.
ಇಷ್ಟೆಲ್ಲ ಮಾಡಬೇಕಾದರೆ ಸರ್ಕಾರ ಈಗ ಕೊಡುತ್ತಿರುವ ಪರಿಹಾರವನ್ನು ಎರಡು ಪಟ್ಟು, ಮೂರು ಪಟ್ಟು, ನಾಲ್ಕು ಪಟ್ಟು ಹೆಚ್ಚು ಮಾಡಬೇಕಾ ಎಂಬ ಪ್ರಶ್ನೆ ಸಹಜ. ಆದರೆ, ಇಲ್ಲಿ ನೆನಪಿಡಬೇಕಾದ ಒಂದು ಪ್ರಮುಖ ಅಂಶ ಎಂದರೆ, ಸರ್ಕಾರ ನೀಡುವ (ಶಾಶ್ವತವಾಗಲಿ ಅಥವಾ ತಾತ್ಕಾಲಿಕವಾಗಲಿ) ಪರಿಹಾರವೊಂದರಿಂದಲೇ ಸಂತ್ರಸ್ತರ ಬದುಕನ್ನು ಸರಿ ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ನೀಡಿದರೂ ಅಷ್ಟೊಂದು ಹಣ ಹೊಂದಿಸುವುದು ಎಷ್ಟುಕಷ್ಟಇದೆ ಎಂಬುದುವುದು ಸರ್ಕಾರಕ್ಕೂ ಗೊತ್ತಿದೆ.
ಹಾಗಾದರೆ ಸರ್ಕಾರ, ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಸಮಿತಿಗಳು ಇಂತಹ ಸಂದರ್ಭದಲ್ಲಿ ಪ್ರವಾಹಪೀಡಿತ ಪ್ರದೇಶಗಳ ಮರು ನಿರ್ಮಾಣದಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಲು ಸಾಧ್ಯವಿದೆ? ಯಾವ ರೂಪದಲ್ಲಿ ಇವರೆಲ್ಲ ಇಂತಹ ಸಂತ್ರಸ್ತರನ್ನು ಸರಿದಾರಿಗೆ ತರಲು ಸಾಧ್ಯವಿದೆ ಎಂಬುವುದರ ಬಗ್ಗೆ ಚಿಂತಿಸಬೇಕಾದ ತುರ್ತು ಇದೆ. ಇದರ ಜೊತೆಗೆ ಸರ್ಕಾರ ಪ್ರವಾಹಬಾಧಿತ ಪ್ರದೇಶಗಳಲ್ಲಿ ಕೆಲವು ಅಗತ್ಯ, ದಿಟ್ಟಕ್ರಮ ಕೈಗೊಳ್ಳಬೇಕು. ಸಂತ್ರಸ್ತರ ಆರ್ಥಿಕ ಚೇತರಿಕೆಗೆ ಕೆಲವು ಉತ್ತೇಜಿತ ಕಾರ್ಯಕ್ರಮಗಳನ್ನು ಘೋಷಿಸಬೇಕು. ಅವು ನೈಜ ಸಂತ್ರಸ್ತರ ಪಾಲಾಗಬೇಕು. ಈ ರೀತಿ ನೀತಿ ನಿರೂಪಣೆಗಳ ರಚನೆಯಲ್ಲಿ ಸರ್ಕಾರ ತೊಡಗಬಹುದು.
ನೊಂದ ರೈತರಿಗೆ ನೆರವಾಗಲಿ
ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಹಾನಿಯಾಗಿರುವ ಕುರಿತು ಈಗಾಗಲೇ ಅಧಿಕಾರಿಗಳು ಸಮೀಕ್ಷೆ ಕೈಗೊಂಡಿದ್ದಾರೆ. ಹಾಗಾಗಿ ಯಾರು ನೈಜ ಸಂತ್ರಸ್ತರು ಎಂಬುವುದು ಇದರಿಂದ ವೇದ್ಯವಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಬೆಳೆಹಾನಿಯಾಗಿರುವ ರೈತರಿಗೆ ವಿಮಾ ಕಂಪನಿಗಳಿಂದ ಬೇಗನೆ ಪರಿಹಾರ ಕೊಡಿಸುವ ವ್ಯವಸ್ಥೆಯಾಗಬೇಕು. ಮಾತ್ರವಲ್ಲ, ಮುಂದಿನ ಎರಡು ಅಥವಾ ಮೂರು ವರ್ಷಗಳವರೆಗೆ ರೈತರಿಗೆ ಅವರು ಬೆಳೆಯುವ ಬಿತ್ತನೆ ಬೀಜಗಳನ್ನು ಸರ್ಕಾರ ಉಚಿತವಾಗಿ ಪೂರೈಸಬೇಕು.
ಪ್ರವಾಹಬಾಧಿತ ಪ್ರದೇಶಗಳಲ್ಲಿ ಗೊಬ್ಬರ ಕೊಳ್ಳುವ ಸಂತ್ರಸ್ತರಿಗೆ ತೆರಿಗೆರಹಿತ (ಜಿಎಸ್‌ಟಿ) ದರದಲ್ಲಿ ಗೊಬ್ಬರ ನೀಡುವ ವ್ಯವಸ್ಥೆಯಾಗಬೇಕು. ಪ್ರವಾಹಬಾಧಿತ ಪ್ರದೇಶಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸರಳ ಸಾಲ ಸಿಗುವಂತೆ ಮಾಡಬೇಕು. ಮಾತ್ರವಲ್ಲ, ಈಗಾಗಲೇ ಸಾಲ ಪಡೆದಿರುವ ರೈತರಿದ್ದಲ್ಲಿ, ಸಾಲಮನ್ನಾ ವ್ಯಾಪ್ತಿಗೆ ಒಳಪಡುತ್ತಿದ್ದರೆ, ಅವರಿಗೆ ತಕ್ಷಣವೇ ಋುಣಮುಕ್ತ ಪ್ರಮಾಣ ಪತ್ರ ಕೊಡಿಸುವ ವ್ಯವಸ್ಥೆಯಾಗಬೇಕು. ಸಂತ್ರಸ್ತ ರೈತರು ಬೆಳೆದ ಬೆಳೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಇದಕ್ಕಾಗಿ ಸೂಕ್ತ ನೀತಿ, ನಿರೂಪಣೆ ಮಾಡಬೇಕು. ಏಕೆಂದರೆ, ಸಂತ್ರಸ್ತರಲ್ಲದ ರೈತರು ಕೂಡ ಇದರ ಫಲಾನುಭವಿಗಳಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಮನೆ ಕಟ್ಟಿಕೊಳ್ಳಲು ಪ್ರೋತ್ಸಾಹಿಸಿ
ಪ್ರವಾಹದಲ್ಲಿ ಭಾಗಶಃ ಹಾಗೂ ಸಂಪೂರ್ಣ ಮನೆ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿವೆ. ಇಂತಹ ಸಂತ್ರಸ್ತರಿಗೆ ಈಗಾಗಲೇ ಸರ್ಕಾರ ಸೂರು ಕಟ್ಟಿಕೊಳ್ಳಲು .5 ಲಕ್ಷ ಪರಿಹಾರ ಧನ ಘೋಷಿಸಿದೆ. ಇದರೊಟ್ಟಿಗೆ ಇನ್ನೂ ಹೆಚ್ಚು ಹಣ ಬೇಕು ಎಂದವರಿಗೆ ಅವರ ಆರ್ಥಿಕ ಸಂಪನ್ಮೂಲದ ಆಧಾರದ ಮೇಲಿಂದ ಸಾಲ ಕೊಡಿಸಲು ಸರ್ಕಾರವೇ ಮುಂದಾಗಬೇಕು. ಇವರಿಗೂ ಕೂಡ ಎರಡ್ಮೂರು ವರ್ಷಗಳ ಕಾಲ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಬ್ಯಾಂಕ್‌ಗಳು ಕೂಡ ಇಂತಹ ಸಂದರ್ಭದಲ್ಲಿ ಮಾನವೀಯತೆ ಮೆರೆಯಬೇಕು.
ಮನೆ ಕಟ್ಟಲು ಮರಳು ಅಗತ್ಯ ಸಾಮಗ್ರಿ. ಇಂತಹ ಪ್ರದೇಶಗಳಿಗೆ ಸರ್ಕಾರ ಮರಳು ಪೂರೈಸಲು ಅದು ದುರುಪಯೋಗವಾಗದ ಹಾಗೆ ನಿಯಮಗಳನ್ನು ಸರಳೀಕರಣ ಮಾಡಬೇಕು. ಇದರೊಟ್ಟಿಗೆ ಸಿಮೆಂಟ್, ಕಬ್ಬಿಣ, ಟೈಲ್ಸ್, ವಿದ್ಯುತ್ ವೈರ್‌ಗಳು, ವಿದ್ಯುತ್ ಸಂಪರ್ಕ ಸೇರಿದಂತೆ ಒಂದು ಮನೆ ಕಟ್ಟಲು ಬೇಕಾಗುವ ಸಾಮಗ್ರಿಗಳಿಗೆ ಸರ್ಕಾರ ವಿಧಿಸುವ ಜಿಎಸ್‌ಟಿ (ತೆರಿಗೆ)ಯನ್ನು ಇಲ್ಲಿ ಕೆಲವು ದಿನಗಳ ಕಾಲ ತೆರವುಗೊಳಿಸಬೇಕು. ಇದರಿಂದ ಆರ್ಥಿಕ ಹೊರೆ ಕಡಿಮೆಯಾಗುವುದರಿಂದ ಸಂತ್ರಸ್ತರು ಕಡಿಮೆ ವೆಚ್ಚದಲ್ಲಿ ಸೂರು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ನೆರೆಯಲ್ಲಿ ಸಾರ್ವಜನಿಕ ಆಸ್ತಿಗಳಾದ ಶಾಲೆ, ಸಮುದಾಯ ಭವನ, ರಸ್ತೆ, ಕೆರೆಗಳು, ಕಾಲುವೆಗಳು, ದೇವಸ್ಥಾನಗಳಿಗೂ ಹಾನಿಯಾಗಿದೆ. ಕೆಲವೆಡೆ ಸಂಪೂರ್ಣ ನಾಶ ಕೂಡ ಆಗಿವೆ. ವಿಶೇಷವಾಗಿ ಶಾಲೆ, ರಸ್ತೆಗಳ ಮರುನಿರ್ಮಾಣ ಸಂದರ್ಭದಲ್ಲಿ ಸರ್ಕಾರ ಆಯಾ ಸ್ಥಳೀಯ ಸಂತ್ರಸ್ತರಿಗೆ ಕೆಲಸ ನೀಡಬೇಕು. ಇದರಿಂದ ಅವರಿಗೆ ಕೆಲಸವೂ ಸಿಕ್ಕಂತಾಗುತ್ತದೆ. ಜೊತೆಗೆ ಅವರು ಸ್ಥಳೀಯವಾಗಿ ಕೆಲಸ ಮಾಡುವುದರಿಂದ ಬೇಗನೆ ಕೈಗೆ ಸಿಗುತ್ತಾರೆ. ಇದರಿಂದ ಬೇಗನೆ ಕೆಲಸವೂ ಮುಗಿದು ಸಾರ್ವಜನಿಕರ ಉಪಯೋಗಕ್ಕೂ ದಾರಿ ಮಾಡಕೊಟ್ಟಂತಾಗುತ್ತದೆ.
ಶಿಕ್ಷಣಕ್ಕೆ ಸಹಾಯಹಸ್ತವಿರಲಿ
ಈಗಾಗಲೇ ನೆರೆ ಬಂದು ಮನೆ, ಬೆಳೆ, ವ್ಯಾಪಾರ, ಸಾಮಾನು, ಸರಂಜಾಮುಗಳನ್ನು ಕಳೆದುಕೊಂಡು ಕಂಗಾಲಾಗಿರುವ ಸಂತ್ರಸ್ತರು ಅಕ್ಷರಶಃ ಬರಿಗೈಯಲ್ಲಿದ್ದಾರೆ. ಇಂತಹ ಸಂತ್ರಸ್ತರ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಕಷ್ಟಸಾಧ್ಯ. ಹೀಗಾಗಿ ಅವರ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಿದೆ. ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳಿಗೆ, ಇನ್ನು ಉತ್ತಮ ರಾರಯಂಕ್ ಪಡೆದು ವೈದ್ಯಕೀಯ, ಎಂಜಿನಿಯರ್ ಸೇರಿದಂತೆ ಇನ್ನಿತರೆ ವೃತ್ತಪರ ಕೋರ್ಸ್‌ಗಳನ್ನು ಕಲಿಯಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಶುಲ್ಕ ವಿನಾಯಿತಿ ನೀಡಬೇಕು. ಶಸಕ್ತವಾಗಿರುವ ಕಂಪನಿಗಳು, ಉದ್ಯಮಿಗಳು, ವ್ಯಾಪಾರಿಗಳು ಇಂತಹ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಂಡರೆ, ಅಂತಹವರಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಲು ಸರ್ಕಾರ ಆಲೋಚಿಸಬೇಕಿದೆ. ಇದರಿಂದ ಸರ್ಕಾರದ ಹೊಣೆಯೂ ವಿಕೇಂದ್ರೀಕರಣವಾದಂತಾಗುತ್ತದೆ.
ಪ್ರವಾಹಬಾಧಿತ ಪ್ರದೇಶಗಳಲ್ಲಿನ ಜನರ ಆರೋಗ್ಯ ಕೂಡ ಸರ್ಕಾರದ ಆದ್ಯತೆಗಳಲ್ಲಿ ಒಂದು. ಹೀಗಾಗಿ ನೆರೆಬಾಧಿತ ಪ್ರದೇಶಗಳಲ್ಲಿ ವಿಶೇಷ ವೈದ್ಯರ ನೇಮಕ, ತ್ವರಿತ ಔಷಧೋಪಚಾರಕ್ಕೆ ಆದ್ಯತೆ ನೀಡಬೇಕು. ಇವೆಲ್ಲದರ ಜೊತೆಗೆ ಸಂತ್ರಸ್ತರನ್ನೇ ಆದ್ಯತೆಯಾಗಿಟ್ಟುಕೊಂಡು ಸರ್ಕಾರ ಕಾರ್ಯರೂಪಕ್ಕೆ ತರುವ ಯೋಜನೆಗಳು ನೈಜ ಫಲಾನುಭವಿಗಳಿಗೇ ತಲುಪಬೇಕು. ಹೀಗಾದಲ್ಲಿ ಮಾತ್ರ ಯೋಜನೆಗಳಿಗೆ ಉಪಯುಕ್ತತೆ ಆಗುವುದರೊಟ್ಟಿಗೆ ಸಂತ್ರಸ್ತರು ಕೆಲವೇ ವರ್ಷಗಳಲ್ಲಿ ತಮ್ಮ ನೋವನ್ನು ಮರೆಯಲು ಸಾಧ್ಯ.
- ಬ್ರಹ್ಮಾನಂದ ಎನ್ ಹಡಗಲಿ, ಬೆಳಗಾವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.