ಇಳಿದ ಮಳೆ, ಇಳಿಯದ ನೆರೆ : ಮಲೆನಾಡು, ಕರಾವಳಿಗೆ ಬಿಸಿಲು ದರ್ಶನ

Published : Aug 12, 2019, 07:17 AM ISTUpdated : Aug 12, 2019, 07:21 AM IST
ಇಳಿದ ಮಳೆ, ಇಳಿಯದ ನೆರೆ :  ಮಲೆನಾಡು, ಕರಾವಳಿಗೆ ಬಿಸಿಲು ದರ್ಶನ

ಸಾರಾಂಶ

ರಾಜ್ಯದಲ್ಲಿ 8 ದಿನಗಳ ಕಾಲ ಅಬ್ಬರಿಸಿದ ಭಾರೀ ಮಳೆ ಹಲವೆಡೆ ಕೊಂಚ ಬಿಡುವು ನೀಡಿದೆ. ಆದರೆ ಮಳೆ ಇಳಿದರೂ ಕೂಡ ನೀರಿನ ಹರಿವು ಹೆಚ್ಚಿರುವ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಇಳಿಮುಖವಾಗಿಲ್ಲ. 

ಬೆಂಗಳೂರು (ಆ.12]:  ಕಳೆದೆರಡು ದಿನಗಳಿಂದ ಆತಂಕದಲ್ಲಿ ಮುಳುಗಿದ್ದ ರಾಜ್ಯದಲ್ಲಿ ಮಳೆ-ಪ್ರವಾಹದ ಅಬ್ಬರ ತಗ್ಗಿದ್ದು, ಹಲವು ದಿನಗಳ ಬಳಿಕ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲು ಗೋಚರಿಸಿದೆ. ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ತುಸು ತಗ್ಗಿದ್ದು, ಭೀಮಾನದಿ ವ್ಯಾಪ್ತಿಯಲ್ಲಿ ಪ್ರವಾಹಮಟ್ಟ12 ಅಡಿಯಷ್ಟುತಗ್ಗಿದೆ, ಇನ್ನು ಉತ್ತರ ಕರ್ನಾಟಕದ ಪ್ರಮುಖ ನದಿಯಾದ ಕೃಷ್ಣೆ, ಉಪನದಿಗಳ ಪಾತ್ರದಲ್ಲೂ ನೀರಿನಮಟ್ಟನಿಧಾನವಾಗಿ ಇಳಿಕೆಯಾಗುತ್ತಿದ್ದು, ಬೆಳಗಾವಿ ತಾಲೂಕು, ಗದಗ, ಧಾರವಾಡದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಹ ಇಳಿಕೆಯಾಗಿ ಹೊಸ ಬದುಕು ಕಟ್ಟಿಕೊಳ್ಳುವ ಆಶಾಕಿರಣದ ನಡುವೆಯೇ ಸಾಂಕ್ರಾಮಿಕ ರೋಗಗಳು ಹಬ್ಬುವ ಆತಂಕವೂ ಎದುರಾಗಿದೆ.

ಈ ಮಧ್ಯೆ, ಕೆಆರ್‌ಎಸ್‌, ತುಂಗಭದ್ರಾ ಜಲಾಶಯಗಳು ಬಹುತೇಕ ಭರ್ತಿಯಾಗಿದೆ. ಈ ಡ್ಯಾಂಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಮಂಡ್ಯ, ಕೊಪ್ಪಳ, ರಾಯಚೂರು, ಬಳ್ಳಾರಿಯ ಕೆಲವೆಡೆ ಪ್ರವಾಹದ ಆತಂಕವಿದೆ. ಮಳೆ-ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಾನುವಾರ ಮತ್ತೆ 7 ಮಂದಿ ಅಸುನೀಗಿದ್ದು ಕಳೆದ ಆರು ದಿನಗಳಿಂದ ಸಾವಿನ ಸಂಖ್ಯೆ53ಕ್ಕೇರಿದೆ.

ಮಳೆ ಬಿಡುವು ಕೊಟ್ಟಿರುವ ಹಿನ್ನೆಲೆಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಸೇರಿ ಹಲವೆಡೆ ಮತ್ತೆ ಕಾಪ್ಟರ್‌, ಬೋಟ್‌ ಬಳಸಿ ಸುಮಾರು 600ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಈವರೆಗೆ 3.45 ಲಕ್ಷ ಮಂದಿ ನಿರಾಶ್ರಿತರಾಗಿದ್ದು, ಒಟ್ಟಾರೆ ರಾಜ್ಯದಲ್ಲಿ ಈ ಪ್ರಮಾಣ 4 ಲಕ್ಷ ದಾಟಿದೆ.

ಕಳೆದ ಐದು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಬಿಡುವು ನೀಡುತ್ತಿದ್ದಂತೆ ಮಲೆನಾಡು, ಕರಾವಳಿಯಲ್ಲಿ ಹಲವು ದಿಗಳಿಂದ ಬಂದ್‌ ಆಗಿದ್ದ ಪ್ರಮುಖ ರಸ್ತೆಗಳು ಈಗ ನಿಧಾನವಾಗಿ ಸಂಚಾರಕ್ಕೆ ಮುಕ್ತವಾಗುತ್ತಿವೆ. ಅಂಕೋಲಾ-ಹುಬ್ಬಳ್ಳಿ, ಮಡಿಕೇರಿ-ಮಂಗಳೂರು, ಶಿರಾಡಿ, ಕುದುರೆಮುಖ, ಹೊರನಾಡು, ಶೃಂಗೇರಿ ರಸ್ತೆಗಳಲ್ಲಿ ವಾಹನ ಸಂಚಾರ ಆರಂಭಗೊಂಡಿದೆ. ಉತ್ತರ ಕನ್ನಡ ಭಾನ್ಕುಳಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಉಳಿದಂತೆ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಮತ್ತೆ ಒಂದಷ್ಟುಕಡೆ ಗುಡ್ಡಕುಸಿಯುವ ಆತಂಕ ಹೆಚ್ಚುತ್ತಿದೆ.

ಹೊಸಬದುಕು: ಧಾರವಾಡ, ಗದಗದಲ್ಲಿ ಮಲಪ್ರಭಾ, ಬೆಣ್ಣಿಹಳ್ಳದ ಅಬ್ಬರ ಇಳಿಮುಖವಾಗುತ್ತಿದ್ದಂತೆ ಬಹುತೇಕ ಗಂಜಿಕೇಂದ್ರಗಳಿಂದ ನಿರಾಶ್ರಿತರು ತಮ್ಮ ಮನೆಯತ್ತ ತೆರಳುತ್ತಿದ್ದಾರೆ. ಪ್ರವಾಹದ ನೀರು ನುಗ್ಗಿದ ಮನೆಯಲ್ಲಿ ಹೊಸಬದುಕು ಕಟ್ಟುವ ಪ್ರಯತ್ನ ಶುರುಮಾಡಿದ್ದಾರೆ. ಬೆಳಗಾವಿ ತಾಲೂಕು, ಸವದತ್ತಿ, ರಾಮದುರ್ಗ, ಗೋಕಾಕದಲ್ಲಿ ಪ್ರವಾಹಮಟ್ಟಬಹುತೇಕ ಇಳಿಮುಖವಾಗಿದೆ. ಅಥಣಿ, ಚಿಕ್ಕೋಡಿ, ರಾಯಭಾಗ, ಬಾಗಲಕೋಟೆಯ ಜಮಖಂಡಿ, ಹುನಗುಂದದಲ್ಲಿ ನೆರೆ ಪ್ರಮಾಣ ಕುಂಠಿತವಾಗಿದೆ. ಆದರೆ, ಆಲಮಟ್ಟಿಹಾಗೂ ಬಸವಸಾಗರ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ 5 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಅಥಣಿ, ಯಾದಗಿರಿಯ ಕೃಷ್ಣಾನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು