ಶುಭ ಸುದ್ದಿ ನೀಡಿದ ಸಿಎಂ ಕುಮಾರಸ್ವಾಮಿ

By Web DeskFirst Published Sep 29, 2018, 10:56 AM IST
Highlights

ಚುನಾವಣೆ ವೇಳೆಯ ಎರಡು ತಿಂಗಳು ಹೊರತುಪಡಿಸಿದರೆ ಈಗ ತೆರಿಗೆ ಸಂಗ್ರಹ ಉತ್ತಮವಾಗಿದೆ ಎಂದರು.ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು :  ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿದೆ ಹಣಕಾಸು ಖಾತೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆ ವೇಳೆಯ ಎರಡು ತಿಂಗಳು ಹೊರತುಪಡಿಸಿದರೆ ಈಗ ತೆರಿಗೆ ಸಂಗ್ರಹ ಉತ್ತಮವಾಗಿದೆ ಎಂದರು.

ಸೆಪ್ಟೆಂಬರ್‌ ತಿಂಗಳಿಂದ ತೆರಿಗೆ ಸಂಗ್ರಹ ಚೆನ್ನಾಗಿದೆ. ಶೇ.34ರಷ್ಟುತೆರಿಗೆ ಸಂಗ್ರಹವಾಗಿದೆ. ಕಳೆದ ಹಣಕಾಸು ವರ್ಷ ಚುನಾವಣಾ ವರ್ಷವಾಗಿದ್ದ ಕಾರಣ ತೆರಿಗೆ ಸಂಗ್ರಹದಲ್ಲಿ ಸ್ವಲ್ಪ ಕುಂಠಿತವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಅನೇಕರು ಈ ಸರ್ಕಾರ ಇನ್ನೂ ಟೇಕಾಫ್‌ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಅತ್ಯಂತ ಗಂಭೀರ, ಸಮರ್ಪಕ ಹಾಗೂ ಕಾಲಮಿತಿಯಲ್ಲಿ ಕಾರ್ಯಕ್ರಮ ಜಾರಿಗೆ ತರುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರೈತರ ಸಾಲ ಮನ್ನಾಕ್ಕೂ, ಆಯವ್ಯಯದಲ್ಲಿ ವಿವಿಧ ಯೋಜನೆಗಳಿಗೆ ಹಂಚಿಕೆಯಾದ ಹಣಕ್ಕೂ ಸಂಬಂಧವೇ ಇಲ್ಲ. ಸರ್ಕಾರದ ಯೋಜನೆ ಜಾರಿಗೆ ಯಾವುದೇ ತೊಂದರೆ ಇಲ್ಲ. ಈ ವರ್ಷ ಸಾಲ ಮನ್ನಾ ಸಂಬಂಧ 6,500 ಕೋಟಿ ರು.ಗಳನ್ನು ಇಡಲಾಗಿದೆ ಎಂದು ಹೇಳಿದರು.

ಯಾವುದೇ ಸರ್ಕಾರ ಬಂದಾಗಲೂ ವಿವಿಧ ಕಾಮಗಾರಿಗಳ ಬಿಲ್‌ ಬಾಕಿ ಇರುವುದು ಮಾಮೂಲಿ. ಎರಡರಿಂದ ಮೂರು ಸಾವಿರ ಕೋಟಿ ಬಿಲ್‌ ಬಾಕಿ ಇದ್ದೇ ಇರುತ್ತದೆ. ಈ ರೀತಿ ಬಾಕಿ ಇರುವ ಹಣವನ್ನು ಸರ್ಕಾರ ಪಾವತಿ ಮಾಡಲು ಬದ್ಧವಾಗಿದೆ ಎಂದು ಅವರು ಹೇಳಿದರು.

ಇಂದು ಉದ್ಯೋಗ ಮೇಳ:

ತಾವು ಕೈಗೊಳ್ಳುವ ‘ಜನತಾದರ್ಶನ’ದಲ್ಲಿ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದ ಅಂಗವಿಕಲರು ಹಾಗೂ ಪದವೀಧರರಿಗೆ ಉದ್ಯೋಗ ಒದಗಿಸಲು ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ತಾಂತ್ರಿಕ ಶಿಕ್ಷಣ ಪಡೆಯದ 2335 ಹಾಗೂ 863 ತಾಂತ್ರಿಕ ಶಿಕ್ಷಣ ಪಡೆದ ನಿರುದ್ಯೋಗಿಗಳು ತಮಗೆ ಅರ್ಜಿ ಸಲ್ಲಿಸಿದ್ದರು. ಈ ಎಲ್ಲರಿಗೂ ಉದ್ಯೋಗ ಮೇಳದಲ್ಲಿ ಉದ್ಯೋಗ ಒದಗಿಸಲಾಗುವುದು. ಜೊತೆಗೆ ಮೇಳದಲ್ಲಿ ಅರ್ಜಿ ಸಲ್ಲಿಸಿದವರಿಗೂ ಮುಂದಿನ ದಿನಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು ಎಂದರು.

click me!