ಹೊಸ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?

By Kannadaprabha NewsFirst Published Aug 22, 2019, 7:21 AM IST
Highlights

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾತ್ರ ಬಾಕಿ ಇದೆ. ಈ ಪ್ರಕ್ರಿಯೆಯೂ ಇಂದು ಪೂರ್ಣವಾಗುವ ಸಾಧ್ಯತೆ ಇದೆ.

ಬೆಂಗಳೂರು [ಆ.22]:  ಬಿಜೆಪಿ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ನಡೆದು ಎರಡು ದಿನವಾದರೂ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ನಡೆದಿಲ್ಲ. ಬಹುತೇಕ ಗುರುವಾರ ಖಾತೆಗಳು ಹಂಚಿಕೆಯಾಗುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 17 ನೂತನ ಸಚಿವರಿಗೆ ಯಾವ ಯಾವ ಖಾತೆ ನೀಡಬಹುದು ಎಂಬುದರ ಬಗ್ಗೆ ಪಟ್ಟಿಸಿದ್ಧಪಡಿಸಿ ಇಟ್ಟುಕೊಂಡಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಅಂತಿಮಗೊಳಿಸುವುದಕ್ಕೆ ಕಾಯುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅಥವಾ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪೈಕಿ ಒಬ್ಬರು ಮಾತನಾಡಿ ಹಸಿರು ನಿಶಾನೆ ತೋರಿದ ತಕ್ಷಣ ಯಡಿಯೂರಪ್ಪ ಅವರು ಖಾತೆಗಳ ಹಂಚಿಕೆಯ ಪಟ್ಟಿಯನ್ನು ರಾಜ್ಯಪಾಲರ ಅನುಮೋದನೆಗೆ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ: ನಿಮ್ ಸಚಿವರ ರೂಮ್ ಸಂಖ್ಯೆ ತಿಳ್ಕೊಳ್ಳಿ

ಗುರುವಾರ ಅಥವಾ ಶುಕ್ರವಾರದ ಹೊತ್ತಿಗೆ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಾಗುವುದು ಎಂದು ಖುದ್ದು ಯಡಿಯೂರಪ್ಪ ಅವರೇ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಬಹುತೇಕ ಹಿಂದಿನಂತೆ ಹಣಕಾಸು ಖಾತೆಯನ್ನು ತಮ್ಮ ಬಳಿ ಉಳಿಸಿಕೊಳ್ಳಲಿರುವ ಯಡಿಯೂರಪ್ಪ ಅವರು ಇತರ ಪ್ರಮುಖ ಖಾತೆಗಳನ್ನು ಹಿರಿಯ ಸಚಿವರಿಗೆ ನೀಡಲಿದ್ದಾರೆ. ತಮ್ಮ ಆಪ್ತರಿಗೆ ಪ್ರಮುಖ ಖಾತೆಗಳನ್ನು ನೀಡುವ ಬಯಕೆ ಹೊಂದಿದ್ದರೂ ಅದಕ್ಕೆ ವರಿಷ್ಠರು ಒಪ್ಪಿಕೊಳ್ಳುತ್ತಾರೆಯೋ ಅಥವಾ ಇಲ್ಲವೋ ಎಂಬುದು ಮಾತ್ರ ಕುತೂಹಲಕರವಾಗಿದೆ.

ಇದೇ ವೇಳೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮುಖ್ಯ ಕಾರಣವಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‌ನಿಂದ ಪರಿಹಾರ ಸಿಕ್ಕ ಕೂಡಲೇ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕಾಗಿದೆ. ಅವರ ಪೈಕಿ ರಮೇಶ್‌ ಜಾರಕಿಹೊಳಿ, ಎಚ್‌.ವಿಶ್ವನಾಥ್‌ ಮತ್ತಿತರ ಕೆಲವರಿಗೆ ಪ್ರಮುಖ ಖಾತೆಗಳನ್ನು ನೀಡುವ ಭರವಸೆಯನ್ನೂ ನೀಡಲಾಗಿದೆ. ಹೀಗಾಗಿ, ಈ ಬಗ್ಗೆಯೂ ವರಿಷ್ಠರೊಂದಿಗೆ ಸಮಾಲೋಚಿಸಿಯೇ ತಮ್ಮ ಪಕ್ಷದ ಸಚಿವರಿಗೆ ಖಾತೆಗಳನ್ನು ನೀಡುವ ಅನಿವಾರ್ಯತೆಯೂ ಯಡಿಯೂರಪ್ಪ ಅವರಿಗಿದೆ. ಎಲ್ಲವನ್ನೂ ಸರಿದೂಗಿಸಿ ಅಂತಿಮಗೊಳಿಸಬೇಕಾಗಿರುವುದರಿಂದಲೇ ತುಸು ವಿಳಂಬವಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಯಾರಿಗೆ ಯಾವ ಖಾತೆ ಸಾಧ್ಯತೆ?

ಹಿರಿಯ ಸಚಿವರಿಗೆ ಪ್ರಮುಖ ಖಾತೆಗಳೇ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ಗೃಹ, ಕಂದಾಯ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಜಲಸಂಪನ್ಮೂಲ, ಸಮಾಜ ಕಲ್ಯಾಣ, ಬೆಂಗಳೂರು ನಗರಾಭಿವೃದ್ಧಿಯಂಥ ಪ್ರಮುಖ ಖಾತೆಗಳನ್ನು ಹಿರಿಯ ಸಚಿವರಿಗೇ ನೀಡಲು ಯಡಿಯೂರಪ್ಪ ಒಲವು ಹೊಂದಿದ್ದಾರೆ.

ಗೃಹ ಖಾತೆ, ಲೋಕೋಪಯೋಗಿ ಖಾತೆಗಳನ್ನು ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌ ಮತ್ತು ಗೋವಿಂದ ಕಾರಜೋಳ ಅವರ ಪೈಕಿ ಇಬ್ಬರಿಗೆ ನೀಡುವ ಸಾಧ್ಯತೆಯಿದೆ. ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆಗಳ ಪೈಕಿ ಒಂದು ಜಗದೀಶ್‌ ಶೆಟ್ಟರ್‌ ಅವರ ಪಾಲಾಗಬಹುದು. ಸಮಾಜ ಕಲ್ಯಾಣ ಖಾತೆ ಬಿ.ಶ್ರೀರಾಮುಲು ಅವರಿಗೆ ಸಿಗಬಹುದು. ಜಲಸಂಪನ್ಮೂಲ ಅಥವಾ ಕೈಗಾರಿಕಾ ಖಾತೆಗಳ ಪೈಕಿ ಒಂದು ಬಸವರಾಜ ಬೊಮ್ಮಾಯಿ ಅವರಿಗೆ, ನಗರಾಭಿವೃದ್ಧಿ ಅಥವಾ ವಸತಿ ಖಾತೆಗಳ ಪೈಕಿ ಒಂದನ್ನು ವಿ.ಸೋಮಣ್ಣ ಅವರಿಗೆ ನೀಡಬಹುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ, ಕಾರ್ಮಿಕ ಅಥವಾ ಸಣ್ಣ ಕೈಗಾರಿಕೆ ಖಾತೆ ಎಚ್‌.ನಾಗೇಶ್‌ ಅವರಿಗೆ, ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಮಾಧುಸ್ವಾಮಿ ಅವರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಂಚಿಕೆ ಮಾಡಬಹುದು ಎನ್ನಲಾಗುತ್ತಿದೆ.

click me!