ಚುನಾವಣೆಯಲ್ಲಿ ಬಿಜೆಪಿ ಗುರಿಯೀಗ 106

By Web Desk  |  First Published May 1, 2019, 9:29 AM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಇದೀಗ ಮತ್ತೊಂದು ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಹಲವು ರೀತಿಯ ಬೆಳವಣಿಗೆಗಳಾಗುತ್ತಿವೆ. 


ಬೆಂಗಳೂರು :  ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿನ ಆಡಳಿತಾರೂಢ ಪಕ್ಷಗಳಲ್ಲಿನ ಶಾಸಕರ ಅಸಮಾಧಾನ ಸ್ಫೋಟಗೊಂಡು ಪರ್ಯಾಯ ಸರ್ಕಾರ ಸರ್ಕಾರ ರಚನೆಯ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಪ್ರತಿಪಕ್ಷ ಬಿಜೆಪಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿ ಗೆಲುವು ಪಡೆದುಕೊಳ್ಳಬೇಕು. ಆ ಮೂಲಕ ವಿಧಾನಸಭೆಯಲ್ಲಿ ಪಕ್ಷದ ಶಾಸಕರ ಸಂಖ್ಯಾ ಬಲವನ್ನು 104ರಿಂದ 106ಕ್ಕೆ ಹೆಚ್ಚಿಸಿಕೊಳ್ಳಬೇಕು ಎಂಬ ನಿಲುವಿಗೆ ಬಂದಿರುವ ರಾಜ್ಯ ನಾಯಕರು ಪಕ್ಷದ ಎಲ್ಲ ಹಂತದ ಮುಖಂಡರನ್ನೂ ಪ್ರಚಾರ ತಂತ್ರಕ್ಕಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

Latest Videos

undefined

ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ ವಶದಲ್ಲಿದ್ದವು. ಇದೀಗ ತೆರವಾಗಿರುವುದರಿಂದ ಅವುಗಳನ್ನು ವಶಪಡಿಸಿಕೊಳ್ಳಲು ಒಂದು ಅವಕಾಶ ಸೃಷ್ಟಿಯಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಸರ್ಕಾರ ರಚನೆಗೆ ಬೇಕಾದ ಮ್ಯಾಜಿಕ್‌ ಸಂಖ್ಯೆಗೆ ಇನ್ನಷ್ಟುಸಮೀಪವಾಗಬಹುದು. ಮುಂದೆ ಅಂಥ ಪರಿಸ್ಥಿತಿ ಎದುರಾದಾಗ ಹಾದಿ ಸುಗಮವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿದೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ತನ್ನ ಸಚಿವರು, ಶಾಸಕರು ಹಾಗೂ ಮುಖಂಡರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಸ್ತುವಾರಿಗಳನ್ನಾಗಿ ನೇಮಿಸುವುದರ ಜೊತೆಗೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಕ್ಷೇತ್ರವಾರು ಜವಾಬ್ದಾರಿಯನ್ನು ಹಂಚಿದೆ. ಇದೀಗ ಬಿಜೆಪಿ ಕೂಡ ಆಯಾ ಕ್ಷೇತ್ರಗಳ ಸುತ್ತಲಿನ ಜಿಲ್ಲೆಗಳ ಶಾಸಕರನ್ನು ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಕ್ಷೇತ್ರವಾರು ಜವಾಬ್ದಾರಿ ವಹಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಚಿಂಚೋಳಿ ಕ್ಷೇತ್ರಕ್ಕೆ ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಹಾಗೂ ಕುಂದಗೋಳ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ವಿವಿಧ ಹಿರಿಯ ಮುಖಂಡರನ್ನು ಒಳಗೊಂಡ ಉಸ್ತುವಾರಿ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳ ಜೊತೆಗೆ ಇತರ ಶಾಸಕರು ಹಾಗೂ ಮುಖಂಡರು ಕೈಜೋಡಿಸಿ ಆಯಾ ಜಾತಿ ಮತ್ತು ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ಮತ ಸೆಳೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೋಲುವ ಭಯ ಉಂಟಾಗಿದೆ. ಅದಕ್ಕಾಗಿ ಸಚಿವರನ್ನು ಉಸ್ತುವಾರಿಗಳನ್ನು ನೇಮಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಕೆಲಸ ಮಾಡಿದ್ದರೆ ಇಷ್ಟೊಂದು ಸಂಖ್ಯೆಯಲ್ಲಿ ಸಚಿವರು, ಶಾಸಕರನ್ನು ಎರಡೂ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸುವ ಅಗತ್ಯವಿರಲಿಲ್ಲ. ಆದರೆ, ಬಿಜೆಪಿ ಪ್ರತಿಪಕ್ಷವಾಗಿ ಈ ಎರಡೂ ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಿದೆ. ಅಕ್ಕಪಕ್ಕದ ಜಿಲ್ಲೆಗಳ ಶಾಸಕರು ಹಾಗೂ ಮುಖಂಡರನ್ನು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

click me!