ಸುರಕ್ಷಿತವಾಗಿವೆಯಾ ರಾಜ್ಯದ ಅಣೆಕಟ್ಟುಗಳು ?

By Web DeskFirst Published Aug 24, 2018, 9:40 AM IST
Highlights

ರಾಜ್ಯದ ಅಣೆಕಟ್ಟುಗಳಲ್ಲಿ ನೀರು ಭರ್ತಿಯಾಗಿದ್ದು  ಅವುಗಳ ಸುರಕ್ಷತೆ ಬಗ್ಗೆ ಈಗ ಎಲ್ಲೆಡೆ ಆತಂಕ ಎದುರಾಗಿದೆ. ಆದರೆ ರಾಜ್ಯದ ಎಲ್ಲಾ ಅಣೆಕಟ್ಟುಗಳೂ ಕೂಡ ಸುರಕ್ಷಿತವಾಗಿವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು :  ರಾಜ್ಯದ ಎಲ್ಲ ಅಣೆಕಟ್ಟುಗಳು ಸುಭದ್ರವಾಗಿದ್ದು, ಯಾವುದೇ ರೀತಿಯಲ್ಲೂ ಹಾನಿಯಾಗಿಲ್ಲ. ಅತಿಯಾದ ಮಳೆಯಿಂದಾಗಿ ಅಣೆಕಟ್ಟುಗಳಿಗೆ ಹಾನಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹರಡುವವರ ಪತ್ತೆಗೆ ಸೈಬರ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ

ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಲೆನಾಡು ಮತ್ತು ಕರಾವಳಿ ಭಾಗ ಸೇರಿದಂತೆ ರಾಜ್ಯದ ಎಲ್ಲಾ ಅಣೆಕಟ್ಟುಗಳು ಸುಭದ್ರವಾಗಿವೆ. ಯಾವುದೇ ರೀತಿಯಲ್ಲಿಯೂ ಹಾನಿಯಾಗಿಲ್ಲ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟು ಪ್ರದೇಶದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಕೆರೆ ಕೋಡಿ ಬಳಿಯೂ ವಾಹನಗಳ ಸಂಚಾರ ಮಾಡದಂತೆ ಸೂಚಿಸಲಾಗಿದೆ. ಅಣೆಕಟ್ಟಿನ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳು ವರದಿ ಕೇಳಿದ್ದು, ಅಧಿಕಾರಿಗಳು ತಪಾಸಣೆ ನಡೆಸಿ ವರದಿಯನ್ನು ನೀಡಲಿದ್ದಾರೆ ಎಂದು ಹೇಳಿದರು.

ಹಾರಂಗಿ ಜಲಾಶಯ ಸೇರಿದಂತೆ ಇತರೆ ಅಣೆಕಟ್ಟುಗಳ ಬಗ್ಗೆ ಇಲ್ಲ-ಸಲ್ಲದ ವದಂತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ವದಂತಿಗಳನ್ನು ಹರಡಿರುವ ಮೂಲ ವ್ಯಕ್ತಿ ಯಾರು ಎಂಬುದನ್ನು ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಣೆಕಟ್ಟು ನದಿ ಪಾತ್ರದ ಹಿನ್ನೀರಿನ ಅಂತಿಮ ಪ್ರದೇಶದವರೆಗೆ ಡ್ರೋನ್‌, ವಿಡಿಯೋ ಮತ್ತು ಫೋಟೋಗ್ರಫಿಗಳ ಮೂಲಕ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರತಿಯೊಂದನ್ನು ದಾಖಲೆ ಮಾಡಿಕೊಳ್ಳಲಾಗುತ್ತಿದೆ. ರೈತರ ಭೂಮಿ, ಬೆಳೆ ನಾಶವಾದರೆ ಪತ್ತೆ ಕಾರ್ಯವು ಸುಲಭವಾಗಲಿದೆ. ರೈತರಿಗೆ ಪರಿಹಾರ ನೀಡುವಲ್ಲಿ ಮೋಸವಾಗಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಅನುಸರಿಸಲು ಮುಂದಾಗಿದ್ದೇವೆ. ಮೊದಲು ನಕ್ಷೆ ಇದ್ದಿದ್ದನ್ನು ಈಗ ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಹಿನ್ನೀರು ಕಡಿಮೆಯಾದ ಬಳಿಕ ಆ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಮಾಡದಿರುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೆರೆ ತುಂಬಿಸುವ ಕೆಲಸ ಕೈಗೊಳ್ಳಲಾಗಿದೆ. ಎಲ್ಲ ಕಣಿವೆಗಳಿಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವು ಕಣಿವೆಗಳಲ್ಲಿ ಹೂಳು ತುಂಬಿರುವ ಕಾರಣ ಸಾರಾಗವಾಗಿ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೂಳು ತೆಗೆದು ಕೆರೆಗಳಿಗೆ ನೀರು ತುಂಬಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶೀಘ್ರದಲ್ಲಿಯೇ ಮೇಲ್ಮನವಿ ಸಲ್ಲಿಕೆ:  ಮಹದಾಯಿ ನ್ಯಾಯಾಧಿಕರಣ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಸುಪ್ರೀಂಕೋರ್ಟ್‌ಗೆ ಶೀಘ್ರದಲ್ಲಿಯೇ ಮೇಲ್ಮನವಿ ಸಲ್ಲಿಸಲಾಗುವುದು. ಯಾವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕುಡಿಯುವ ನೀರು ಮತ್ತು ವಿದ್ಯುತ್‌ ಉತ್ಪಾದನೆಗೆ ರಾಜ್ಯವು ಕೇಳಿರುವ ನೀರಿನ ಪ್ರಮಾಣಕ್ಕಿಂತ ಕಡಿಮೆ ನೀಡಲಾಗಿದೆ. ವಿದ್ಯುತ್‌ ಉತ್ಪಾದನೆ ನಂತರದ ಹೆಚ್ಚುವರಿ ನೀರು ಸಹ ಗೋವಾಕ್ಕೆ ಹರಿದು ಹೋಗುತ್ತದೆ. ಗೋವಾ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಸಹ ಪತ್ರವೊಂದನ್ನು ಬರೆಯಲಿದ್ದಾರೆ. ಕಳಸಾ ಬಂಡೂರಿಯಲ್ಲಿ ಯಾವುದೇ ರೀತಿಯಲ್ಲಿಯೂ ಕಾಮಗಾರಿ ಕೈಗೊಂಡಿಲ್ಲ. ನ್ಯಾಯಾಲಯದ ಆದೇಶವನ್ನು ರಾಜ್ಯವು ಯಾವುದೇ ರೀತಿಯಲ್ಲಿಯೂ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ಸಂಭ್ರಮಾಚರಣೆ ಮಾಡುತ್ತಿದೆ. ರಾಜ್ಯಕ್ಕೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎಂಬುದರ ಬಗ್ಗೆ ಬಿಜೆಪಿ ಜನತೆಗೆ ಮನವರಿಕೆ ಮಾಡಿಕೊಡಬೇಕು ಎಂದು ತಿರುಗೇಟು ನೀಡಿದರು.

click me!