
ಬೆಂಗಳೂರು (ಜ. 06): 84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯ ಚರ್ಚಾಗೋಷ್ಠಿಯೊಂದು ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಸಹಿಷ್ಣುತೆ ಕುರಿತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿದ್ದಕ್ಕೆ ಕೆಲ ಪ್ರೇಕ್ಷಕರು ವಿರೋಧಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಗೋಷ್ಠಿಯನ್ನು ನಡೆಸಲಾಯಿತು.
ನಂತರ ಪೊಲೀಸ್ ಭದ್ರತೆಯಲ್ಲೇ ಮಾಳವಿಕಾ ಅವರು ಸಮ್ಮೇಳನಾಂಗಣದಿಂದ ನಿರ್ಗಮಿಸಿದರು. ಪ್ರಭುತ್ವ ಮತ್ತು ಅಸಹಿಷ್ಣುತೆ ವಿಷಯವಾಗಿ ಮಾತನಾಡಿದ ಮಾಳವಿಕಾ ಅವಿನಾಶ್ ಅವರು ಶಬರಿಮಲೆಗೆ ಸ್ತ್ರೀಯರ ಪ್ರವೇಶ, ಪರೇಶ್
ಮೇಸ್ತ ಕೊಲೆ ಹಾಗೂ ಆರ್‌ಎಸ್‌ಎಸ್ ನಾಯಕ ರುದ್ರೇಶ್ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದರು. ಆಗ ವೇದಿಕೆಯ ಕೆಳಗಿದ್ದ ಕೆಲ ಯುವಕರು ‘ಇಲ್ಲಿ ರಾಜಕೀಯದ ಮಾತನಾಡಬೇಡಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಗ ಮಾಳವಿಕಾ ಸಿಟ್ಟುಗೊಂಡು ಮಾತು ನಿಲ್ಲಿಸಿ ವೇದಿಕೆಯ ಮೇಲೆ ಕುಳಿತರು. ಆದರೆ, ಇನ್ನುಳಿದ ಪ್ರೇಕ್ಷಕರು ಮಾಳವಿಕಾ ಮಾತು ಮುಂದುವರಿಸಬೇಕೆಂದೂ, ಅವರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕೆಂದೂ ಆಗ್ರಹಿಸಿದರು. ಆಗ ಪೊಲೀಸ್ ಭದ್ರತೆಯಲ್ಲಿ ಮಾಳವಿಕಾ ಮಾತು ಮುಂದುವರೆಸಿದರು. ಆದರೆ, ವಿಷಯಾಂತರ ಮಾಡಿ ಕನ್ನಡ ಮಾಧ್ಯಮ ಬಗ್ಗೆ ಮಾತನಾಡಿದರು.
ಏಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕು?
ವೈಚಾರಿಕತೆ ಮತ್ತು ಅಸಹಿಷ್ಣುತೆ ಗೋಷ್ಠಿಯ ಆರಂಭದಲ್ಲಿ ವಿಚಾರ ಮಂಡಿಸಿದ ಮಾಳವಿಕಾ ಅವಿನಾಶ್, ನೂರಾರು ವರ್ಷಗಳಿಂದ ನಮ್ಮ ದೇಶದ ಜನತೆಯ ಮೇಲೆ ಸಾಕಷ್ಟು ರೀತಿಯ ದೌರ್ಜನ್ಯಗಳನ್ನು ಮುಸ್ಲಿಂ ರಾಜರು,
ಬ್ರಿಟಿಷರು, ಡಚ್ಚರು ಹೀಗೆ ಎಲ್ಲರೂ ಮಾಡುತ್ತಲೇ ಬಂದಿದ್ದಾರೆ. ಅದನ್ನೆಲ್ಲಾ ಹಿಂದುಗಳು ಸಹಿಸಿಕೊಂಡೇ ಬಂದಿದ್ದೇವೆ. ಎಂದಿಗೂ ನಾವು ಯಾರ ಮೇಲೂ ದಂಡೆತ್ತಿ ಹೋಗಿಲ್ಲ. ಹಾಗಿರುವಾಗ ನಾವು ಸಹಿಷ್ಣುಗಳಲ್ಲವೇ? ಹಿಂದಿನ ಸರ್ಕಾರದ
ಅವಧಿಯಲ್ಲಿ ಪರೇಶ್ ಮೇಸ್ತಾ, ರುದ್ರೇಶ್ ಸೇರಿದಂತೆ ಹಲವರ ಹತ್ಯೆಗಳು ನಡೆದಾಗಲೂ ಇವರಿಗೆ ಅಸಹಿಷ್ಣುತೆ ಕಾಣಲಿಲ್ಲ. ಇದನ್ನೆಲ್ಲಾ ಇನ್ನಿತರರು ಸಹಿಸಿಕೊಳ್ಳಬೇಕು, ಇನ್ನುಳಿದವರು ಏನೇ ಹೆಜ್ಜೆ ಇಟ್ಟರೂ ಅದನ್ನ ಅಸಹಿಷ್ಣುತೆ ಎನ್ನುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಪ್ರೇಕ್ಷಕರಿಂದ ವಿರೋಧ: ಈ ವೇಳೆ, ಮಾಳವಿಕಾ ಅವರು ಶಬರಿಮಲೆ, ಪರೇಶ್ ಮೇಸ್ತ, ರುದ್ರೇಶ್ ಪ್ರಕರಣಗಳನ್ನು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಪ್ರೇಕ್ಷಕರು, ನೀವು ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದೀರಿ. ಸಾಹಿತ್ಯದ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ರಾಜಕೀಯ ಮಾಡಬೇಡಿ ಎಂದು ಹೇಳಿದರು. ಆಗ ಮಾಳವಿಕಾ ವಾದಕ್ಕೆ ನಿಂತರು. ಈ ವೇಳೆ ಗದ್ದಲ ಏರ್ಪಟ್ಟಿದ್ದರಿಂದ 30-40 ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಮಾಳವಿಕಾ ಮಾತು ನಿಲ್ಲಿಸಿ ಕುರ್ಚಿ ಮೇಲೆ ಕುಳಿತರು. ಆದರೆ, ಮಾಳವಿಕಾ ಪರ ನೂರಕ್ಕೂ ಹೆಚ್ಚು ಪ್ರೇಕ್ಷಕರು ಎದ್ದುನಿಂತು, ನೀವು ಮಾತನಾಡಲೇಬೇಕು, ನಿಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಬೆಂಬಲ ನೀಡಿದರು.
ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾದ ಮಾಳವಿಕಾ ಮತ್ತೆ ಮಾತಿಗೆ ನಿಂತು, ನಿಮಗೆ ನನ್ನ ಮಾತು ಕೇಳುವ ತಾಳ್ಮೆ ಇಲ್ಲ ಎಂದಾದಲ್ಲಿ ಇದಕ್ಕಿಂತ ದೊಡ್ಡ ಅಸಹಿಷ್ಣುತೆ ಮತ್ತೊಂದಿಲ್ಲ. ಇದೇ ಉತ್ತಮ ಉದಾಹರಣೆ ಎಂದಾಗ ಸಭೆಯಲ್ಲಿ ಜೋರಾದ ಚಪ್ಪಾಳೆ ಕೇಳಿ ಬಂದವು. ಗೋಷ್ಠಿ ಮುಗಿದ ನಂತರ ಪೊಲೀಸ್ ಭದ್ರತೆಯಲ್ಲೇ ಮಾಳವಿಕಾ ಹೊರಬಂದರು.
- ಶಿವಕುಮಾರ ಕುಷ್ಟಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.