ನನಗೆ 2 ದಿನ ಗೃಹ ಬಂಧನದ ಅನುಭವ : ಶಿವಣ್ಣ

By Web DeskFirst Published Jan 6, 2019, 10:15 AM IST
Highlights

ಚಂದನವನದ ಸ್ಟಾರ್ ಗಳ ಮೇಲೆ ಐಟಿ ದಾಳಿ ನಡೆದಿದ್ದು, ಈ ಬಗ್ಗೆ ನಟ ಶಿವಣ್ಣ ಪ್ರತಿಕ್ರಿಯಿಸಿ ನನಗೆ ಈ ವೇಳೆ ಗೃಹ ಬಂಧನದ ಅನುಭವವವಾಯಿತು ಎಂದು ಹೇಳಿದ್ದಾರೆ.

ಬೆಂಗಳೂರು :  ‘ಎರಡು ದಿನ ಮನೆಯಿಂದ ಆಚೆಗೆ ಹೋಗಲಿಲ್ಲ. ಒಂದು ರೀತಿಯಲ್ಲಿ ಗೃಹ ಬಂಧನದ ಅನುಭವ ಆಯಿತು. ಇದು ನನಗೆ ಐಟಿ ದಾಳಿಯಿಂದ ಆದ ಅನುಭವ’ ಎಂದು ನಟ ಶಿವರಾಜ್‌ಕುಮಾರ್‌ ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಐಟಿ ರೇಡ್‌ ಮುಕ್ತಾಯವಾದ ಮೇಲೆ ಶನಿವಾರ ಮಾಧ್ಯಮಗಳ ಮುಂದೆ ಬಂದು ಮಾತನಾಡಿದ ಶಿವರಾಜ್‌ ಕುಮಾರ್‌, ‘ಯಾವ ಕಾರಣಕ್ಕೆ ಐಟಿ ರೈಡ್‌ ಮಾಡಿದ್ದಾರೆ ಅಂತ ನಾನು ನಿರ್ದಿಷ್ಟವಾಗಿ ಹೇಳಲಾರೆ’ ಎಂದರು.

‘ದಿ ವಿಲನ್‌ ದೊಡ್ಡ ಸಿನಿಮಾ. ಅದರಲ್ಲಿ ನಾನೂ ನಟಿಸಿದ್ದೇನೆ. ಇನ್ನೂ ಕಿರುತೆರೆಯಲ್ಲಿ ಧಾರಾವಾಹಿಗಳನ್ನೂ ನಮ್ಮ ಸಂಸ್ಥೆಯಿಂದ ನಿರ್ಮಿಸಲಾಗುತ್ತಿದೆ. ಆದರೆ, ಯಾವ ಕಾರಣವನ್ನು ಮುಂದಿಟ್ಟುಕೊಂಡು ರೈಡ್‌ ಮಾಡಿದರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಆಗಲಿ ಅದೊಂದು ಕಾನೂನು ಪ್ರಕ್ರಿಯೆ. ಅದಕ್ಕೆ ನಾನು ಸ್ಪಂದಿಸಬೇಕು’ ಎಂದರು.

‘ನಿಜ, ಕೊಂಚ ಸಮಸ್ಯೆ ಆಯಿತು. ಬೆಳಗ್ಗೆ ಎದ್ದು ವಾಕಿಂಗ್‌ ಹೋಗಲಿಕ್ಕೆ ಆಗಲಿಲ್ಲ. ಮನೆ ಬಿಟ್ಟು ಆಚೆ ಹೋಗುವುದಕ್ಕೆ ಆಗಲಿಲ್ಲ. ಗೃಹ ಬಂಧನದ ಅನುಭವ ಆಯಿತು. ಆದರೂ ಕಾನೂನಿಗೆ ನಾವು ಗೌರವ ಕೊಡಬೇಕು. ನಿರ್ಮಾಣ ಸಂಸ್ಥೆ, ಚುನಾವಣೆಗೆ ನಿಂತಿದ್ದರ ಬಗ್ಗೆ ಪ್ರಶ್ನೆ ಮಾಡಿದ್ದರು ತೆರಿಗೆ ಇಲಾಖೆ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇವೆ’ ಎಂದರು.

‘ನಾನು ವಾಸ ಮಾಡುತ್ತಿರುವ ಈ ಮನೆ ತುಂಬಾ ದೊಡ್ಡದು. ಯಾಕೆಂದರೆ ಅಭಿಮಾನಿಗಳು ಹಾಗೂ ನಿರ್ಮಾಪಕರು ಕೊಟ್ಟಿದ್ದು. ಅವರ ಪ್ರೀತಿಯ ಮನೆ ಇದು. ಹೀಗಾಗಿ ಇಷ್ಟುದೊಡ್ಡ ಮನೆಯಲ್ಲಿ ಹುಡುಕಾಟ ಮಾಡುವುದಕ್ಕೆ ಸಮಯ ಬೇಕಾಯಿತು’ ಎಂದು ನಗುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವರಾಜ್‌ಕುಮಾರ್‌, ಅಧಿಕಾರಿಗಳು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನಾನು ಐಟಿ ರಿಟನ್ಸ್‌ರ್‍ ಸಲ್ಲಿಸಿದ್ದೇನೆ. ನಮಗೆ ಯಾವುದೇ ಭಯವಿಲ್ಲ’ ಎಂದರು

‘ಮತ್ತೆ ವಿಚಾರಣೆಗೆ ಖಂಡಿತ ಹೋಗುತ್ತೇನೆ. ನನಗೇ ಈ ಐಟಿ ರೈಡ್‌ ಮೊದಲ ಅನುಭವ. ಆದರೆ, ನಾವು ಚೆನ್ನೈನಲ್ಲಿದ್ದಾಗ ಆಗಿತ್ತು. 1984-85ರಲ್ಲಿ ಆಗಿತ್ತು ಅನಿಸುತ್ತದೆ. ಆಗ ನಾನು ಕಾಲೇಜು ಓದುತ್ತಿದ್ದೆ. ಅದು ಬಿಟ್ಟರೆ ಮತ್ತೆ ನಮ್ಮ ಮನೆಯಲ್ಲಿ ಐಟಿ ಅಧಿಕಾರಿಗಳನ್ನು ನೋಡಿದ್ದು ಇದೇ ಮೊದಲು’ ಎಂದು ತಿಳಿದರು.

ಪತ್ನಿ, ಮಗಳನ್ನು ನೋಡಕ್ಕಾಗಲಿಲ್ಲ: ಯಶ್‌

ಬೆಂಗಳೂರು: ನಟ ಯಶ್‌ ಕೂಡ ತಮ್ಮ ನಿವಾಸದ ಮೇಲೆ ನಡೆದ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಬಗ್ಗೆ ಮಾತನಾಡಿ, ‘ಎರಡು ದಿನ ಮಗಳು ಮತ್ತು ಪತ್ನಿಯನ್ನು ನೋಡಲಿಕ್ಕೆ ಆಗಲಿಲ್ಲ ಎನ್ನುವ ಬೇಸರ ಆಗಿದ್ದು ನಿಜ. ಹೊರಗಿದ್ದ ಅಭಿಮಾನಿಗಳನ್ನು ಮಾತನಾಡಿಸಕ್ಕೆ ಆಗಲಿಲ್ಲ. ಐಟಿ ರೇಡ್‌ ಬಗ್ಗೆ ತಕ್ಷಣ ಗೊತ್ತಾದಾಗ ಕೊಂಚ ಟೆನ್ಷನ್‌ ಆಯಿತು. ಯಾಕೆಂದರೆ ಅಲ್ಲಿ ಏನಾಗುತ್ತಿದೆ ಗೊತ್ತಿಲ್ಲ. ಸಹಜವಾಗಿ ಒತ್ತಡಕ್ಕೆ ಒಳಗಾಗಿದ್ದೆ. ಆದರೆ, ಕಾನೂನಿನ ಪ್ರಕ್ರಿಯೆಯನ್ನು ಎಲ್ಲರು ಗೌರವಿಸಬೇಕು. ಆ ಕಾರಣಕ್ಕೆ ಅಧಿಕಾರಿಗಳಿಗೆ ನಾವು ಸ್ಪಂದಿಸಿದ್ದೇವೆ ಎಂದರು.

ಆದರೆ, ಐಟಿ ರೇಡ್‌ ಸುತ್ತ ಕೆಲವು ಸುಳ್ಳು ಸುದ್ದಿಗಳು ಬರುತ್ತಿವೆ. ಯಾರೂ ಯಾವುದನ್ನೂ ನಂಬಬೇಡಿ. ಇಂಥ ಇಲ್ಲಸಲ್ಲದ ಊಹಾ ಪೋಹಗಳನ್ನು ಯಾರೂ ಹಬ್ಬಿಸಬೇಡಿ. ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ. ನಾವೂ ಕೂಡ ನಮ್ಮ ಕೆಲಸ ಮಾಡುತ್ತೇವೆ. ಇದಕ್ಕೆ ಬೇರೆ ರೀತಿಯ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದು ನಟ ಯಶ್‌ ಸ್ಪಷ್ಟಪಡಿಸಿದ್ದಾರೆ.

ನನ್ನ ವ್ಯವಹಾರ ಲೆಕ್ಕಬದ್ಧ

ತೆರಿಗೆ ಇಲಾಖೆ ಅಧಿಕಾರಿಗಳ ಈ ದಾಳಿಯಿಂದ ನನಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಯಾಕೆಂದರೆ ಇದು ಕಾನೂನು ಬದ್ಧ ಕೆಲಸ. ಅದನ್ನು ನಾವು ಒಪ್ಪಿಕೊಳ್ಳಬೇಕು. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ನನ್ನ ಎಲ್ಲ ವ್ಯವಹಾರ ಲೆಕ್ಕಬದ್ಧವಾಗಿದೆ. ಈಗ ‘ನಟಸಾರ್ವಭೌಮ’ ಆಡಿಯೋ ಬಿಡುಗಡೆಗೆ ಹೋಗುತ್ತಿದ್ದೇನೆ. ಅಭಿಮಾನಿಗಳ ಜತೆಗೆ ಆಡಿಯೋ ಬಿಡುಗಡೆ ಮಾಡಿಕೊಳ್ಳುತ್ತಿದ್ದೇವೆ.

- ಪುನೀತ್‌ರಾಜ್‌ಕುಮಾರ್‌, ನಟ

ತಲೆ ಕೆಡಿಸಿಕೊಳ್ಳಲ್ಲ

ಕೆಜಿಎಫ್‌ ದೊಡ್ಡ ಬಜೆಟ್‌ನ ದೊಡ್ಡ ಸಿನಿಮಾ. ಅದು ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾಗಳ ದಾಖಲೆ ಪರಿಶೀಲನೆ ಮಾಡಿದ್ದಾರೆ. ಹೀಗಾಗಿ ತಲೆ ಕಡೆಸಿಕೊಳ್ಳುವಂತದ್ದೇನು ಇಲ್ಲ. ಹೌದು, ಕೆಲವು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವಿಚಾರಣೆ ಮಾಡುತ್ತಾರೆ. ವಿಚಾರಣೆಗೆ ಹಾಜರಾಗುತ್ತೇನೆ. ಆದರೆ, ಕೆಜಿಎಫ್‌ ಸಿನಿಮಾ ಮೂರನೇ ವಾರ ಪ್ರದರ್ಶನಕ್ಕೆ ಪ್ರಚಾರಕ್ಕೆ ಪ್ಲಾನ್‌ ಮಾಡಿಕೊಂಡಿದ್ದಾಗಲೇ ಈ ದಾಳಿ ಆಗಿರುವುದರಿಂದ ಬೇಸರ ಆಗಿದೆ.

- ವಿಜಯ್‌ ಕಿರಗಂದೂರು, ನಿರ್ಮಾಪಕ

click me!