
ಚೆನ್ನೈ(ಆ.19): ಕಳೆದ ಕೆಲ ತಿಂಗಳಿಂದ ರಾಜಕೀಯ ಹೇಳಿಕೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಸುದ್ದಿಯಲ್ಲಿದ್ದ ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಅವರು ಯಾವುದಾದರೂ ರಾಜಕೀಯ ಪಕ್ಷ ಸೇರಬಹುದು ಎಂಬ ಊಹೆ ಸುಳ್ಳಾಗಿದ್ದು, ಅವರು ಸ್ವತಃ ತಮ್ಮದೇ ಆದ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ. ಶೀಘ್ರವೇ ಈ ಕುರಿತು ಪ್ರಕಟಣೆ ಹೊರಬೀಳಲಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಇನ್ನೊಬ್ಬ ಸೂಪರ್‌ಸ್ಟಾರ್ ರಜನೀಕಾಂತ್ ಕೂಡ ರಾಜಕೀಯ ಪಕ್ಷ ಸ್ಥಾಪಿಸುವ ಸುಳಿವು ಇತ್ತೀಚೆಗೆ ದೊರೆತಿತ್ತು. ಆದರೆ ರಜನಿಗೂ ಮುನ್ನವೇ ಕಮಲ್ ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎನ್ನಲಾಗಿದೆ. ಈವರೆಗೆ ಡಿಎಂಕೆ ಹಾಗೂ ಅಣ್ಣಾ ಡಿಎಂಕೆ ಮಾತ್ರ ರಾಜ್ಯದಲ್ಲಿ ಮುಖ್ಯ ಪ್ರತಿಸ್ಪರ್ಧಿಗಳಾಗಿದ್ದವು. ಈಗ ಕಮಲ್ ಪ್ರವೇಶದೊಂದಿಗೆ ರಾಜ್ಯ ರಾಜಕೀಯ ರಂಗೇರಲಿದ್ದು, ಹೊಸ ತಿರುವು ಪಡೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದರ ಜತೆಗೆ ಕಾಂಗ್ರೆಸ್, ಬಿಜೆಪಿ, ಡಿಎಂಡಿಕೆ, ಎಂಡಿಎಂಕೆ, ಪಿಎಂಕೆ ಕೂಡ ಕಣಕ್ಕಿಳಿಯಲಿದ್ದು, ಬಹುಕೋನ ಸ್ಪರ್ಧೆ ಏರ್ಪಡಲಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆದರೆ ತಮಿಳ್ನಾಡಿನ ಎಐಎಡಿಎಂಕೆ ಸರ್ಕಾರವು ಆಂತರಿಕ ಕಲಹದ ಕಾರಣ ಪತನಗೊಳ್ಳುವ ಭೀತಿ ಇದೆ. ಹೀಗಾಗಿ ಈಗಲೇ ರಾಜಕೀಯ ಪಕ್ಷ ಸ್ಥಾಪಿಸಿ ನೆಲೆ ಗಟ್ಟಿ ಮಾಡಿಕೊಳ್ಳಲು ಕಮಲ್ ಹಾಸನ್ ಆಲೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಮಲ್ ರಾಜ್ಯ ಸರ್ಕಾರದ ವಿರುದ್ಧ ಸತತ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಡಿಎಂಕೆಯ ಮುಖವಾಣಿ ಪತ್ರಿಕೆಯ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.