ರಾಜ್ಯದ ಮುಂದಿನ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ?

By Suvarna Web DeskFirst Published Jan 9, 2017, 11:21 AM IST
Highlights

1944ರಲ್ಲಿ ಜನಿಸಿದ ನ್ಯಾ| ವಿಶ್ವನಾಥ್ ಶೆಟ್ಟಿ ಮೂಲತಃ ಉಡುಪಿಯವರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್'ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು(ಜ. 09): ರಾಜ್ಯದಲ್ಲಿ ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಮೂವರು ಹೆಸರುಗಳು ಲೋಕಾಯುಕ್ತ ಸ್ಥಾನಕ್ಕೆ ಪ್ರಸ್ತಾಪವಾಗಿದೆ. ಲೋಕಾಯುಕ್ತ ನೇಮಕಾತಿ ಉನ್ನತ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ನ್ಯಾ| ವಿಶ್ವನಾಥ ಶೆಟ್ಟಿ, ನ್ಯಾ| ಎನ್.ಕೆ.ಕುಮಾರ್ ಮತ್ತು ನ್ಯಾ| ಆನಂದ್ ಬೈರಾರೆಡ್ಡಿ ಅವರುಗಳನ್ನು ಲೋಕಾಯುಕ್ತ ಸ್ಥಾನಕ್ಕೆ ಪರಿಗಣಿಸಲಾಗಿದೆ. ಸಭೆಯಲ್ಲಿ ಈ ಮೂವರ ಹೆಸರನ್ನು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೂಚಿಸಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಈ ಮೂವರು ಹೆಸರಿಗೆ ಬೆಂಬಲ ಸೂಚಿಸಿದರು. ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಕೂಡ ಈ ಮೂವರಲ್ಲಿ ಯಾರೇ ಆದರೂ ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಮೂವರ ಪೈಕಿ ನ್ಯಾ| ವಿಶ್ವನಾಥ್ ಶೆಟ್ಟಿಯವರ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೆಟ್ಟಿಯವರ ನೇಮಕಾತಿಗೆ ಆಸಕ್ತಿ ತೋರಿದ್ದಾರೆ. ಇಂದು ಸಂಜೆಯೊಳಗೆ ನ್ಯಾ| ವಿಶ್ವನಾಥ ಶೆಟ್ಟಿಯವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ನಿರೀಕ್ಷೆ ಇದೆ. ಎಲ್ಲವೂ ಓಕೆ ಆದರೆ, ಒಂದು ವರ್ಷದ ನಂತರ ರಾಜ್ಯಕ್ಕೆ ಲೋಕಾಯುಕ್ತರು ಬಂದಂತಾಗುತ್ತದೆ.

ಯಾರು ಈ ನ್ಯಾ| ಶೆಟ್ಟಿ?
1944ರಲ್ಲಿ ಜನಿಸಿದ ನ್ಯಾ| ವಿಶ್ವನಾಥ್ ಶೆಟ್ಟಿ ಮೂಲತಃ ಉಡುಪಿಯವರು. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್'ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ, ರಾಜ್ಯ ಹೈಕೋರ್ಟ್'ನ ಕಾನೂನು ಸೇವಾ ಘಟಕದ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ.

click me!