ಅಟ್ಲಾಂಟಿಕ್ ಮಹಾಸಾಗರದ ದೈತ್ಯ ಅಲೆಗಳಿಗೆ ಎದೆಯೊಡ್ಡಿದ ಧೀರ: ಒಂಟಿ ಬ್ಯಾರೆಲ್ ಪ್ರಯಾಣ!

By Web DeskFirst Published Apr 3, 2019, 7:42 PM IST
Highlights

ಬ್ಯಾರೆಲ್‌ನಲ್ಲಿ ಕುಳಿತು ಅಟ್ಲಾಂಟಿಕ್ ಮಹಾಸಾಗರದಲ್ಲಿ ಪ್ರಯಾಣ| ಅಟ್ಲಾಂಟಿಕ್ ಮಹಾಸಾಗರದ ದೈತ್ಯ ಅಲೆಗಳಿಗೆ ಎದೆಯೊಡ್ಡಿದ ಫ್ರಾನ್ಸ್ ನ ಜೀನ್ ಜಾಕಸ್ ಸ್ಯಾವಿನ್| ಮಹಾಸಾಗರದಲ್ಲಿ 100 ದಿನದಲ್ಲಿ 4 ಸಾವಿರ ಕಿ.ಮೀ ಪ್ರಯಾಣ| ಏಪ್ರಿಲ್ 20ರಂದು ತಮ್ಮ ಪ್ರಯಾಣ ಅಂತ್ಯಗೊಳಿಸಲಿರುವ ಜಾಕಸ್| ತಾವೇ ನಿರ್ಮಿಸಿದ ವಿಶೇಷ ಬ್ಯಾರೆಲ್‌ನಲ್ಲಿ ಮಹಾಸಾಗರದಲ್ಲಿ ಪ್ರಯಾಣ|   

ಫೋಟೋ ಕೃಪೆ: AFP

ಪ್ಯಾರಿಸ್(ಏ.03): ಮಾನವನಿಗೆ ಅಸಾಧ್ಯವಾದುದು ಯಾವುದಿದೆ ಹೇಳಿ?. ಸಾಧಿಸುವ ಛಲವೊಂದಿದ್ದರೆ ಸಾಕು ಅಸಾಧ್ಯವಾದುದನ್ನು ತುಂಬ ಸಲೀಸಾಗಿ ಸಾಧಿಸಬಲ್ಲ ಛಾತಿ ಆತನಿಗಿದೆ.

ಅದರಂತೆ ಫ್ರಾನ್ಸ್ ನ 72 ವರ್ಷದ ಜೀನ್ ಜಾಕಸ್ ಸ್ಯಾವಿನ್, ತಾವೇ ಸ್ವತಃ ತಯಾರಿಸಿದ ಬ್ಯಾರೆಲ್‌ನಲ್ಲಿ ಕುಳಿತು ಅಟ್ಲಾಂಟಿಕ್ ಮಹಾಸಾಗರದಲ್ಲಿ ಪ್ರಯಾಣಿಸುತ್ತಿದ್ದಾರೆ. 

ಹೌದು, ಫ್ರಾನ್ಸ್‌ನ ನಿವೃತ್ತ ಪ್ಯಾರಾಟ್ರೂಪರ್ ಜೀನ್ ಜಾಕಸ್ ಸ್ಯಾವಿನ್ ತಾವೇ ನಿರ್ಮಿಸಿದ್ದ ಬ್ಯಾರೆಲ್‌ನಲ್ಲಿ ಕುಳಿತು ಸುಮಾರು 100 ದಿನಗಳ ಕಾಲ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪ್ರಯಾಣಿಸಿದ್ದಾರೆ.

3 ಮೀಟರ್(10 ಅಡಿ) ಉದ್ದ, 2.10 ಮೀಟರ್ ಅಗಲವಿರುವ ಬ್ಯಾರೆಲ್ ಸಮುದ್ರದ ಭಾರೀ ಅಲೆಗಳ ಹೊಡೆತ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಸಂಭಾವ್ಯ ಶಾರ್ಕ್ ದಾಳಿಗೂ ಹಾನಿಗೊಳಪಡುವುದಿಲ್ಲ. ಒಟ್ಟು 450 ಕೆಜಿ ತೂಕವಿರುವ ಈ ಬ್ಯಾರೆಲ್‌ನಲ್ಲಿ, ಮಲಗುವ ಕೋಣೆ, ಅಡುಗೆಮನೆ ಮತ್ತು ಶೇಖರಣಾ ಕೋಣೆ ಇರುವುದು ವಿಶೇಷ.

ಕಳೆದ ಫೆಬ್ರವರಿಯಲ್ಲಿ ರಾತ್ರಿ ಸಮುಯದಲ್ಲಿ ವಾಣಿಜ್ಯ ಹಡಗೊಂದು ಜಾಕಸ್ ಬ್ಯಾರೆಲ್‌ಗೆ ಡಿಕ್ಕಿ ಹೊಡೆದಿದ್ದು, ಇದು ತಮ್ಮ ಪ್ರಯಾಣದ ಅತ್ಯಂತ ಭಯಾನಕ ಅನುಭವ ಎಂದು ಜಾಕಸ್ ಹೇಳಿದ್ದಾರೆ.

ಜಾಕಸ್ ಪ್ರಯಾಣ ಇನ್ನೂ ಮುಂದುವರೆದಿದ್ದು, ಮುಂದಿನ ಮೂರು ತಿಂಗಳಲ್ಲಿ ಜಾಕಸ್ ಕ್ಯಾರಿಬಿಯನ್ ದ್ವೀಪ ತಲುಪಲಿದ್ದಾರೆ. ಇದುವರೆಗೂ ಒಟ್ಟು 4 ಸಾವಿರ ಕಿ.ಮೀ(2,500 ಮೈಲು) ಪ್ರಯಾಣಿಸಿರುವ ಜಾಕಸ್, ಇನ್ನೂ 1 ಸಾವಿರ ಕಿ.ಮೀ ಪ್ರಯಾಣದ ಬಳಿಕ ಏಪ್ರಿಲ್ 20ರಂದು ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಲಿದ್ದಾರೆ.

ಇನ್ನು ಈ ಪ್ರಯಾಣದ ಬಳಿಕ ತಮ್ಮ ಮುಂದಿನ ಯೋಜನೆಯನ್ನು ಪ್ರಕಟಿಸಿರುವ ಜಾಕಸ್, ಅಟ್ಲಾಂಟಿಕ್ ಮಹಾಸಾಗರದ ತಮ್ಮ ಪ್ರಯಾಣದ ಅನುಭವದ ಕುರಿತು ಪುಸ್ತಕ ಬರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇಂಗ್ಲಿಷ್ ಚಾನೆಲ್‌ನ್ನು ಯಶಸ್ವಿಯಾಗಿ ಈಜುವ ಯೋಜನೆ ಹಾಕಿಕೊಂಡಿದ್ದಾರೆ.

click me!