
ಬೆಂಗಳೂರು(ಫೆ.03): ನೋಟ್ ಬ್ಯಾನ್ ನಂತರ ಬಂಧನಕ್ಕೊಳಗಾಗಿರುವ ಜಯಚಂದ್ರನಿಗೆ ಸೇರಿದ 25 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇದು ಆತನ ಅಕ್ರಮದ ಕೇವಲ 10 ಪರ್ಸೆಂಟ್ ಮಾತ್ರ, ಅಕ್ರಮ ಆಸ್ತಿಯ ಮೌಲ್ಯವೇ 250 ಕೋಟಿ ಎನ್ನುತ್ತಿದೆ ತನಿಖೆ. ಇನ್ನು ಚಿಕ್ಕರಾಯಪ್ಪ ತನ್ನ ಅಮಾನತು ಆದೇಶ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ.
ನೋಟು ನಿಷೇಧ ಬಳಿಕ ಐಟಿ ಅಧಿಕಾರಿಗಳು ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಯಚಂದ್ರ ಮತ್ತು ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ ಮನೆ ಮೇಲೆ ದಾಳಿ ನಡೆಸಿದ್ದರು. 152 ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಇಡಿ ಜಯಚಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಅಷ್ಟೇ ಅಲ್ಲ, ಜಯಚಂದ್ರಗೆ ಸೇರಿದ 25 ಕೋಟಿ ಮೌಲ್ಯದ 17 ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಐವತ್ತು ಕೋಟಿ ಆಸ್ತಿ ವಶಕ್ಕೆ ಇಡಿ ತಯಾರಿ!
ತನಿಖಾಧಿಕಾರಿಯೊಬ್ಬರು ಹೇಳುವ ಪ್ರಕಾರ ಈಗ ಮುಟ್ಟುಗೋಲು ಹಾಕಿಕೊಂಡಿದ್ದು ಕೇವಲ 10 ಪರ್ಸೆಂಟ್. ಆತ 250 ಕೋಟಿಗೂ ಅಧಿಕ ಆಸ್ತಿ ಸಂಪಾದಿಸಿದ್ದಾನೆ ಎನ್ನಲಾಗುತ್ತಿದೆ. ಇನ್ನೂ 50 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮುಟ್ಟುಗೋಲಿಗೆ ದೆಹಲಿಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡು, ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ತಾನು ಅಮಾಯಕನೆಂದು ಹೇಳಿಕೊಂಡ ಚಿಕ್ಕರಾಯಪ್ಪ : ಅಮಾನತು ಆದೇಶ ಹಿಂಪಡೆಯಲು ಸರ್ಕಾರಕ್ಕೆ ಪತ್ರ
ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವಾಗಲೇ ಕಳಂಕಿತ ಅಧಿಕಾರಿ ಚಿಕ್ಕರಾಯಪ್ಪ ಸರ್ಕಾರಕ್ಕೆ ಬರೆದ ಲೆಟರ್ ಸುವರ್ಣ ನ್ಯೂಸ್'ಗೆ ಲಭ್ಯವಾಗಿದೆ. ತನ್ನ ವಿರುದ್ಧ ಎಸಿಬಿ ದಾಖಲಿಸಿರುವ ಪ್ರಕರಣಕ್ಕೆ ಕೋರ್ಟ್ ತಡೆ ನೀಡಿದೆ. ನಿರೀಕ್ಷಣಾ ಜಾಮೀನು ಸಹ ನೀಡಿದೆ. ಹೀಗಾಗಿ ತಾನೊಬ್ಬ ಅಮಾಯಕ ಎನ್ನುವ ಅರ್ಥದಲ್ಲಿ ತನ್ನ ಅಮಾನತು ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಚಿಕ್ಕರಾಯಪ್ಪ ಮನವಿ ಮಾಡಿಕೊಂಡಿದ್ದಾನೆ.
ಸಿದ್ದರಾಮಯ್ಯ ಸರ್ಕಾರ ಚಿಕ್ಕರಾಯಪ್ಪ ಮನವಿಗೆ ಮನ್ನಣೆ ನೀಡಿದರೂ ಆಶ್ಚರ್ಯವಿಲ್ಲ. ಇತ್ತ ಜಯಚಂದ್ರ ಆಸ್ತಿ ಕತೆ ಏನಾಗುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.