ಬಿಜೆಪಿಯಿಂದ ವಲಸೆ ಬಂದ ನಾಯಕಗೆ ಮಂತ್ರಿಗಿರಿ?

By Web DeskFirst Published Sep 20, 2018, 7:18 AM IST
Highlights

ಬೆಳಗಾವಿ ರಾಜಕಾರಣದಿಂದ ಡಿ.ಕೆ ಶಿವಕುಮಾರ್ ಅವರನ್ನು ದೂರವಿಡಲು ಯತ್ನಿಸಿದ ಬೆನ್ನಲ್ಲೇ ಇದೀಗ ಇಲ್ಲಿಂದಲೂ ಕೂಡ ಡಿ.ಕೆ. ಶಿವಕುಮಾರ್ ಅವರ ಕೊಂಡಿಯನ್ನು ಕಳಚುವ ಯತ್ನಗಳು ಜೋರಾಗಿದೆ. 

ನವದೆಹಲಿ :  ಬೆಳಗಾವಿ ಆಯ್ತು, ಇದೀಗ ಬಳ್ಳಾರಿ ಸರದಿ. ಬೆಳಗಾವಿ ಜಿಲ್ಲೆಯ ವ್ಯವಹಾರದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ‘ಮೂಗು ತೂರಿಸುವುದರ’ ವಿರುದ್ಧ ಜಾರಕಿಹೊಳಿ ಬ್ರದರ್ಸ್‌ ಸಿಡಿದೆದ್ದ ನಂತರ ಈಗ ಬಳ್ಳಾರಿ ಜಿಲ್ಲೆಗೆ ಬಳ್ಳಾರಿಯವರೇ ಆದ ಉಸ್ತುವಾರಿ ಸಚಿವರ ನೇಮಕಕ್ಕೆ ಪ್ರಯತ್ನ ಆರಂಭವಾಗಿದೆ. 

ಈ ಮೂಲಕ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನೂ ಹೊತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಕೊಂಡಿಯನ್ನು ಅಲ್ಲಿಂದಲೂ ಕಳಚುವ ಕಸರತ್ತಿಗೆ ಬಲ ದೊರೆತಿದೆ. ಒಂದೆಡೆ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ, ವಾಲ್ಮೀಕಿ ಸಮುದಾಯದ ಮುಖಂಡ, ಬಿಜೆಪಿಯಿಂದ ವಲಸೆ ಬಂದ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ಕೊಡಿಸಿ ಬಳ್ಳಾರಿ ಉಸ್ತುವಾರಿಯಾಗಿ ಪ್ರತಿಷ್ಠಾಪಿಸಲು ಜಾರಕಿಹೊಳಿ ಸೋದರರು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಬಳ್ಳಾರಿಯ ಇತರೆ ಕಾಂಗ್ರೆಸ್‌ ಶಾಸಕರು ತಮ್ಮ ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರಿಗೇ ಸಚಿವ ಸ್ಥಾನ ನೀಡಬೇಕೆಂದು ದಿಲ್ಲಿ ಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ. ಇದಕ್ಕಾಗಿ ಸಂಡೂರು ಶಾಸಕ ತುಕಾರಾಂ ನೇತೃತ್ವದ ಶಾಸಕರ ನಿಯೋಗವೂ ದೆಹಲಿ ತಲುಪಿದೆ.

ವಿಧಾನ ಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ ಸೇರಿರುವ ನಾಗೇಂದ್ರ ಅವರಿಗೆ ಯಾವ ಕಾರಣಕ್ಕೂ ಮಂತ್ರಿಸ್ಥಾನ ನೀಡಬಾರದು. ಹಾಗೆಯೇ ಬಳ್ಳಾರಿ ಕೋಟಾದಲ್ಲಿನ ಮಂತ್ರಿ ಸ್ಥಾನವನ್ನು ಆ ಜಿಲ್ಲೆಯಲ್ಲಿನ ಶಾಸಕರೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕೇ ಹೊರತು ಅನ್ಯ ಭಾಗದ ನಾಯಕರು ಹೇಳಿದವರನ್ನು ಮಂತ್ರಿ ಮಾಡಬಾರದು ಎಂಬುದು ಈ ಶಾಸಕರ ಒತ್ತಾಯವಾಗಿದೆ.

ತುಕಾರಾಂ ಅವರೊಂದಿಗೆ ಹಗರಿಬೊಮ್ಮನಹಳ್ಳಿಯ ಶಾಸಕ ಭೀಮಾ ನಾಯ್ಕ್, ಕಂಪ್ಲಿ ಶಾಸಕ ಗಣೇಶ್‌, ಕೂಡ್ಲಿಗಿಯ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಗುಜ್ಜಾಲ… ರಘು ಅವರೊಂದಿಗೆ ದೆಹಲಿಗೆ ಆಗಮಿಸಿದ್ದು ಸಿದ್ದರಾಮಯ್ಯ, ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಕೆ.ಸಿ.ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಪಕ್ಷಕ್ಕಾಗಿ ದಶಕಗಳ ಕಾಲ ದುಡಿದವರಿಗೆ ಮಂತ್ರಿಸ್ಥಾನ ನೀಡಬೇಕು ಎಂದು ಒತ್ತಡ ನಿರ್ಮಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ನಾಲ್ಕು ಬಾರಿ ಕಾಂಗ್ರೆಸ್‌ ಶಾಸಕರಾಗಿರುವ ಪಿ.ಟಿ.ಪರಮೇಶ್ವರ ನಾಯ್ಕ, ಸಂಡೂರಿನಿಂದ ಸತತ ಮೂರನೇ ಬಾರಿ ಗೆದ್ದಿರುವ ಇ.ತುಕಾರಾಂ ಮತ್ತು ಇತ್ತೀಚೆಗಷ್ಟೆಪಕ್ಷ ಸೇರಿದ್ದರೂ ಲಂಬಾಣಿ ಕೋಟಾದಲ್ಲಿ ಭೀಮಾ ನಾಯ್‌್ಕ ಅವರಲ್ಲಿ ಒಬ್ಬರನ್ನು ಮಂತ್ರಿ ಮಾಡಿದರೆ ನಮ್ಮ ತಕರಾರಿಲ್ಲ ಎಂಬುದು ಕಾಂಗ್ರೆಸ್‌ನ ಈ ಶಾಸಕರ ಅಹವಾಲು ಆಗಿದೆ.

ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಆದರೂ ಸಂಪುಟ ರಚನೆಯಲ್ಲಿ ಬಳ್ಳಾರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಇದೀಗ ಸಚಿವ ಸಂಪುಟ ವಿಸ್ತರಣೆ ಆಗುವ ಸಂದರ್ಭದಲ್ಲಿ ಬಳ್ಳಾರಿಗೆ ಮಣೆ ಹಾಕಬೇಕು. ಈ ಸಂದರ್ಭದಲ್ಲಿ ನಮ್ಮಲ್ಲಿ ಒಬ್ಬರನ್ನು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್‌ ಮುಂದೆ ಈ ಶಾಸಕರು ಇಡಲಿದ್ದಾರೆ.

ತುಕಾರಾಂ ತಕರಾರು: ಬಳ್ಳಾರಿ ಜಿಲ್ಲೆಯಲ್ಲಿ ಗೆದ್ದ ಕಾಂಗ್ರೆಸ್‌ ಶಾಸಕರಲ್ಲಿ ಸಚಿವರು ಯಾರಾಗಬೇಕು ಎಂಬುದನ್ನು ಹೊರಗಿನವರು(ಜಾರಕಿಹೊಳಿ ಬ್ರದರ್ಸ್‌) ನಿರ್ಧರಿಸುವುದು ಬೇಡ. ಪಕ್ಷದ ಶಾಸಕರ ಪೈಕಿ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡಲಿ ಎಂದು ಶಾಸಕ ತುಕಾರಾಂ ಆಗ್ರಹಿಸಿದ್ದಾರೆ. ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಮತ್ತು ಮೂಲ ಕಾಂಗ್ರೆಸಿಗನಾಗಿರುವ ನನಗೆ ಈ ಹಿಂದೆ ನನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಮುಂದಿನ ದಿನಗಳಲ್ಲಿ ಸಚಿವನನ್ನಾಗಿಸಲು ಪಕ್ಷ ಭರವಸೆ ನೀಡಿತ್ತು. ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಹೊರಗಿನವರೇ ಇಲ್ಲಿ ರಾಜಕೀಯ ಮಾಡಿದರೆ ನಮಗೆ ಕೂಡ ರಾಜಕೀಯ ಮಾಡುವುದು ಗೊತ್ತಿದೆ ಎಂದು ಶಾಸಕ ತುಕಾರಾಂ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಭೀಮಾನಾಯ್ಕ ಆಕಾಂಕ್ಷಿ:  ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು. ಜಿಲ್ಲೆಯಲ್ಲಿ ಆರು ಜನ ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದೇವೆ. ಈ ಪೈಕಿ ಎಸ್ಟಿಸಮುದಾಯಕ್ಕೆ ಹಾಗೂ ಬಂಜಾರ ಸಮುದಾಯಕ್ಕೊಂದು ಸಚಿವ ಸ್ಥಾನ ನೀಡಲಿ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಒತ್ತಾಯಿಸಿದರು.

ಲಾಡ್‌ಗೆ ಸ್ಥಾನಮಾನಕ್ಕೆ ಲಾಬಿ:  ಸಂಡೂರು ಶಾಸಕರಿಗೆ ಬೆಂಬಲವಾಗಿ ನಿಂತಿರುವ ಕಂಪ್ಲಿ ಶಾಸಕ ಗಣೇಶ್‌, ನಾನು ಶಾಸಕನಾಗಲು ಮಾಜಿ ಸಚಿವ ಸಂತೋಷ್‌ ಲಾಡ್‌ ಅವರ ಸಾಕಷ್ಟುಕೊಡುಗೆ ಹಾಗೂ ಪರಿಶ್ರಮವಿದೆ. ಹೀಗಾಗಿ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿಸಬೇಕು ಎಂದು ಮನವಿ ಮಾಡಿದರು.


ಹಿರಿಯ ಮತ್ತು ಮೂಲ ಕಾಂಗ್ರೆಸಿಗನಾಗಿರುವ ನನಗೆ ಈ ಹಿಂದೆ ನನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು. ಸದ್ಯ ನಡೆಯುತ್ತಿರುವ ಬೆಳವಣಿಗೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಹೊರಗಿನವರೇ ಇಲ್ಲಿ ರಾಜಕೀಯ ಮಾಡಿದರೆ ನಮಗೆ ಕೂಡ ರಾಜಕೀಯ ಮಾಡುವುದು ಗೊತ್ತಿದೆ.

- ಇ.ತುಕಾರಾಂ, ಸಂಡೂರು ಶಾಸಕ

ನಾನು ಮೂರು ಬಾರಿ ವಿಧಾನಸಭಾ ಸದಸ್ಯನಾಗಿ ಆಯ್ಕೆಗೊಂಡಿರುತ್ತೇನೆ. ಹಾಗಾಗಿ, ನಾನು ಸಹಜವಾಗಿಯೇ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡಿಕೊಂಡಿದ್ದೇನೆ. ಮುಂದಿನ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟವಿಚಾರವಾಗಿದೆ.

- ಬಿ.ನಾಗೇಂದ್ರ, ಬಳ್ಳಾರಿ ಗ್ರಾ. ಶಾಸಕ

click me!