ಮೋದಿ ‘ಸಿಗ್ಲಿಲ್ಲಾ’ ಅಂತಾ ವೊಲ್ವೊ ಬಸ್‌ಗೆ ಬೆಂಕಿ ಇಟ್ಟ ಮಹಿಳೆ!

By Web DeskFirst Published Sep 19, 2018, 8:02 PM IST
Highlights

ಪ್ರಧಾನಿ ಮೋದಿ ಭೇಟಿಗೆ ಸಿಗದ ಅವಕಾಶ! ಉದ್ರಿಕ್ತ ಮಹಿಳೆಯಿಂದ ಬಸ್‌ಗೆ ಬೆಂಕಿ! ಉತ್ತರಪ್ರದೇಶದ ವಾರಣಾಸಿಯಲ್ಲಿ ಘಟನೆ! ಪ್ರತ್ಯೇಕ ಪೂರ್ವಾಂಚಲ ರಾಜ್ಯ ರಚನೆಗೆ ಆಗ್ರಹ! ವೊಲ್ವೊ ಬಸ್‌ಗೆ ಬೆಂಕಿ ಹಚ್ಚಿದ ವಂದನಾ ರಘುವಂಶಿ 
 

ವಾರಣಾಸಿ(ಸೆ.19): ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ವೊಲ್ವೊ ಬಸ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಾರಣಾಸಿಯಲ್ಲಿ ನಡೆದಿದೆ.

ವಂದನಾ ರಘುವಂಶಿ ಎಂಬ ಮಹಿಳೆ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ವೊಲ್ವೊ ಬಸ್ ಗೆ ಬೆಂಕಿ ಹಚ್ಚಿದ್ದು, ಬೆಂಕಿ ಬಸ್‌ಗೆ ಆವರಿಸುವ ಮುನ್ನ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌ಗೆ ಬೆಂಕಿ ಹಚ್ಚಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಉತ್ತರ ಪ್ರದೇಶದಿಂದ ಪ್ರತ್ಯೇಕ ಪೂರ್ವಾಂಚಲ ರಾಜ್ಯ ರಚನೆ ಮಾಡಬೇಕು ಎಂದು ವಂದನಾ ರಘುವಂಶಿ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಕಾಂಟೋನ್ಮೆಂಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಬಸ್‌ಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಆಗಸ್ಟ್ 15ರಿಂದ ಪ್ರತ್ಯೇಕ ರಾಜ್ಯಕ್ಕಾಗಿ ವಂದನಾ ರಘುವಂಶಿ ಉಪವಾಸ ಮಾಡುತ್ತಿದ್ದು, ವಾರಣಾಸಿ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಯತ್ನಿಸಿದ್ದರು. ಆದರೆ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ವಾರಣಾಸಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

click me!