ಮಾಧ್ಯಮ ಮೌಲ್ಯ ಕಾಪಾಡಲು ಚರ್ಚೆ ಅಗತ್ಯ

By Web DeskFirst Published Dec 24, 2018, 1:24 PM IST
Highlights

ನಗರದ ಉತ್ಥಾನ ಮಾಸ ಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ  ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅವರು ಮಾತನಾಡಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಎಲ್ಲ ಸಂಪಾದಕರು ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದರು.

ಬೆಂಗಳೂರು : ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ಹಲವು ಕಾರಣಗಳಲ್ಲಿ ಮಾಧ್ಯಮದ ಪಾತ್ರವೂ ಒಂದು. ಹೀಗಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಎಲ್ಲ ಸಂಪಾದಕರು ಒಂದೆಡೆ ಸೇರಿ ಸಮಾಜಕ್ಕೆ ಎಂತಹ ಸುದ್ದಿಗಳನ್ನು ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕರಾದ ರವಿ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಉತ್ಥಾನ ಮಾಸ ಪತ್ರಿಕೆಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಮೌಲ್ಯಗಳು ಕುಸಿಯಲು ಇರುವ ಕಾರಣಗಳಲ್ಲಿ ಮಾಧ್ಯಮ ಪಾತ್ರವೂ ಒಂದು. ಹೀಗಾಗಿ ಇದನ್ನು ಬದಲಿಸಲು ಮಾಧ್ಯಮಗಳ ಪ್ರಮುಖರು ಒಂದುಗೂಡಿ ಎಂತಹ ಸುದ್ದಿಗಳನ್ನು ಸಮಾಜಕ್ಕೆ ನೀಡಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಿದೆ ಎಂದು ಹೇಳಿದರು. ನಾವು ವೈಚಾರಿಕತೆ, ಸಂಶೋಧನೆ ಯಿಂದ ಪ್ರಾರಂಭಿಸಿ ಆರೋಗ್ಯದ ತನಕ ಎಲ್ಲ ವಿಷಯಗಳನ್ನೂ ವಿದೇಶಿ ಮಾನದಂಡಗಳ ಆಧಾರದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆದರೆ ಇದು ದೇಶ-ಕಾಲಕ್ಕೆ ಭಿನ್ನವಾಗಿರುತ್ತದೆ. ಈ ವಾಸ್ತವವನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಸಂಶೋಧನೆಗಳು ನಡೆಯಬೇಕಿದೆ ಎಂದು ರವಿ ಹೆಗಡೆ ಸಲಹೆ ನೀಡಿದರು.

ಕನ್ನಡ ಭಾಷೆ ವಿಷಯಕ್ಕೆ ಬಂದರೆ ಕನ್ನಡದ ಸಮಸ್ಯೆ ಇದರ ಆರ್ಥಿಕ ಮೌಲ್ಯ. ಪ್ರತಿಯೊಂದು ಭಾಷೆಗೂ ಒಂದು ಆರ್ಥಿಕ ಮೌಲ್ಯವಿರುತ್ತದೆ. ಉದಾಹರಣೆಗೆ ಹಾಲಿವುಡ್, ಬಾಲಿವುಡ್ ಅಥವಾ ಟಾಲಿವುಡ್ ಸಿನಿಮಾಗಳ ಮಾರುಕಟ್ಟೆ ದೊಡ್ಡದಿರುತ್ತದೆ. ಹೀಗಾಗಿ ಅವರ ಖರ್ಚಿಗಿಂತ ಒಂದೆರಡು ಪಟ್ಟು ಹೆಚ್ಚು ಗಳಿಕೆ ಮಾಡಬಲ್ಲದು. ಆದರೆ ಕನ್ನಡದ ಪರಿಸ್ಥಿತಿ ಆ ರೀತಿ ಇಲ್ಲ. ನಮ್ಮಲ್ಲಿ  ಗರಿಷ್ಠ ಖರ್ಚಿನ ಮುಕ್ಕಾಲು ಭಾಗ ಗಳಿಕೆ ಮಾಡಬಹುದು ಅಷ್ಟೇ. ಜತೆಗೆ ದಕ್ಷಿಣ ಕರ್ನಾಟಕದ ಸಿನಿಮಾ ಉತ್ತರ ಕರ್ನಾಟಕದಲ್ಲಿ ಪ್ರದರ್ಶನ ಕಾಣುವುದಿಲ್ಲ. ಇದು ಬದಲಾಗಬೇಕು ಎಂದರು.

ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ನೆಹರು ಮೆಮೋರಿಯಲ್ ಕಾಲೇಜಿನ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಸುಶ್ಮಿತಾ ಕೆ.ವೈ. ಪ್ರಥಮ ಸ್ಥಾನ, ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಥಮ ಬಿ.ಎಸ್ಸಿ. ವಿದ್ಯಾರ್ಥಿನಿ ಭಾಗ್ಯಲಕ್ಷ್ಮೀ ದ್ವಿತೀಯ ಸ್ಥಾನ ಹಾಗೂ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಾನಸಾ ಎಂ.ಹೆಗಡೆ ತೃತೀಯ ಸ್ಥಾನ ಪಡೆದರು. ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಶರಣ್ಯ ಎಸ್. ಹಾಗೂ ಕಾರ್ಕಳದ ಭುವನೇಂದ್ರ ಕಾಲೇಜಿನ ಕೆ.ಸುಷ್ಮಾ ಮೆಚ್ಚುಗೆಯ ಬಹುಮಾನ ಗಳಿಸಿದರು. ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ, ಆಡಳಿತ ಮಂಡಳಿ ಸದಸ್ಯ ಕೆ.ಎಸ್.ನಾರಾಯಣ, ಉತ್ಥಾನದ ಸಂಪಾದಕ ಕಾ.ಕೇಶವಭಟ್, ಆರೆಸ್ಸೆಸ್ ಪ್ರಚಾರ ವಿಭಾಗದ ರಾಧಾಕೃಷ್ಣ ಹೊಳ್ಳ ಉಪಸ್ಥಿತರಿದ್ದರು. 

click me!