12 ಗಂಟೆಯೊಳಗೆ ವಾಪಸ್ ಬರೋದಾದ್ರೆ ಟೋಲ್ ಕಟ್ಟೋದೇ ಬೇಡ ?

By Web DeskFirst Published Dec 24, 2018, 1:21 PM IST
Highlights

12 ಗಂಟೆಯೊಳಗೆ ಬರೋದಾದ್ರೆ ಟೋಲ್ ಫ್ರೀ | ಹೀಗೊಂದು ಹೊಸ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ 12 ಗಂಟೆಯ ಅವಧಿಯೊಳಗೆ ಹಿಂದಿರುಗಿದಲ್ಲಿ ಟೋಲ್‌ಬೂತ್‌ಗಳಲ್ಲಿ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು
ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರು ಹೇಳಿದ್ದಾರೆ. 

ಬೆಂಗಳೂರು (ಡಿ.24): ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ 12 ಗಂಟೆಯ ಅವಧಿಯೊಳಗೆ ಹಿಂದಿರುಗಿದಲ್ಲಿ ಟೋಲ್‌ಬೂತ್‌ಗಳಲ್ಲಿ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿ ಅವರು ಹೇಳಿದ್ದಾರೆ ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂದೇಶದಲ್ಲಿ ‘ಟೋಲ್‌ಬೂತ್‌ಗಳಲ್ಲಿ ಒಂದು ಕಡೆ ಪ್ರಯಾಣಕ್ಕೆ ಮಾತ್ರ ತೆರಿಗೆ ಕಟ್ಟುತ್ತೀರಾ, ಇಲ್ಲ ಎರಡೂ ಕಡೆ ತೆರಿಗೆ ಕಟ್ಟುವಿರಾ ಎಂದು ಕೇಳಿದಾಗ 12 ಗಂಟೆಗೆ ತೆರಿಗೆ ಪಾವತಿಸುತ್ತೇವೆ ಎಂದು ಹೇಳಿ. ನೀವು 12  ಗಂಟೆ ಒಳಗೆ ಹಿಂದಿರುಗಿ ಬಂದರೆ ಯಾವುದೇ ಟೋಲ್ ಇಲ್ಲ. ಟಿಕೆಟ್‌ನಲ್ಲಿಯೇ ಸಮಯ ನಮೂದಾಗಿರುತ್ತದೆ. ಜನರಿಗೆ ಈ ಅರಿವು ಇಲ್ಲದ ಕಾರಣ ಟೋಲ್ ಅಧಿಕಾರಿಗಳು ಲಕ್ಷಾಂತರ ರು. ಮೋಸ ಮಾಡುತ್ತಿದ್ದಾರೆ. ದಯವಿಟ್ಟು ನಿಮ್ಮ ಪರಿಚಿತರಿಗೆಲ್ಲಾ ಈ ಬಗ್ಗೆ ತಿಳುವಳಿಕೆ ಮೂಡಿಸಿ- ನಿತಿನ್ ಗಡ್ಕರಿ, ಭಾರತ ಸರ್ಕಾರ’ ಎಂದು ಬರೆಯಲಾಗಿದೆ.

ಸದ್ಯ ಈ ಸಂದೇಶ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ 12 ಗಂಟೆ ಒಳಗೆ ವಾಪಸ್ಸಾದರೆ ಟೋಲ್ ಪಾವತಿಸಬೇಕಿಲ್ಲವೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ. ಏಕೆಂದರೆ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ಬೂತ್‌ಗಳಲ್ಲಿನ ದರದ ಬಗ್ಗೆ ಪತ್ರವೊಂದನ್ನು ಪ್ರಕಟಿಸಿದ್ದು ಅದರಲ್ಲಿ , ಸಿಂಗಲ್ ಜರ್ನಿ, ರಿಟರ್ನ್ ಜರ್ನಿ, ಒಂದು ದಿನ ಮತ್ತು ತಿಂಗಳು ಎಂಬ ವರ್ಗೀಕರಣವಿದೆಯೇ ವಿನಃ 12 ಗಂಟೆ ಎಂದು ಎಲ್ಲೂ ಇಲ್ಲ.

ಈ ಬಗ್ಗೆ ಎನ್‌ಎಚ್‌ಎಐ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟೀಕರಣ ನೀಡಿದ್ದು, ‘ವೈರಲ್ ಆಗಿರುವ ಸಂದೇಶ ಸಂಪೂರ್ಣ ಸುಳ್ಳು. ಟೋಲ್ ಬೂತ್‌ಗಳಲ್ಲಿ 12 ಗಂಟೆ ಎಂಬ ಆಯ್ಕೆಯೇ ಇಲ್ಲ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ 24 ಗಂಟೆಯೊಳಗೆ ವಾಪಸ್ಸಾದರೆ ರಿಟರ್ನ್ ಜರ್ನಿ ಮೇಲೆ ಶೇ.66 ರಷ್ಟು ರಿಯಾಯಿತಿ ಲಭಿಸುತ್ತದೆಯಷ್ಟೆ ಎಂದು ಹೇಳಿದ್ದಾರೆ’

-ವೈರಲ್ ಚೆಕ್ 

click me!