
ಕೈರೋ(ಅ. 02): ಲಾಸ್ ವೆಗಾಸ್ ನಗರದಲ್ಲಿ ಬಂದೂಕುಧಾರಿಯೊಬ್ಬ ದಾಳಿ ನಡೆಸಿ 50ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಘಟನೆ ಅಮೆರಿಕನ್ನರನ್ನು ತಲ್ಲಣಗೊಳಿಸಿದೆ. ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ತನ್ನ ಕಡೆಯವನಿಂದ ಈ ಕೃತ್ಯ ನಡೆದಿದೆ ಎಂದು ಐಸಿಸ್'ನ ಸುದ್ದಿ ಸಂಸ್ಥೆ ಅಮಾಕ್ ಹೇಳಿಕೆ ನೀಡಿದೆ.
64 ವರ್ಷದ ಸ್ಟೀಫನ್ ಪ್ಯಾಡಕ್ ಈ ದಾಳಿ ನಡೆಸಿರುವ ಶಂಕೆ ಇದೆ. ಸಂಗೀತ ಕಾರ್ಯಕ್ರಮದಲ್ಲಿ ಸಾವಿರಾರು ಜನರು ನೆರೆದಿರುವ ವೇಳೆ ಆತ ಗುಂಡಿನ ದಾಳಿ ನಡೆಸಿದ್ದಾನೆ. ಹೋಟೆಲ್'ವೊಂದರ 32ನೇ ಮಹಡಿಯಲ್ಲಿರುವ ಕೊಠಡಿಯಿಂದ ಸ್ಟೀಫನ್ ಪ್ಯಾಡಕ್ ಮನಬಂದಂತೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸ್ಟೀಫನ್ ಪ್ಯಾಡಕ್ ಈ ಹಿಂದೆ ಯಾವುದೇ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಬಗ್ಗೆ ಮಾಹಿತಿ ಇಲ್ಲದ್ದರಿಂದ ಪೊಲೀಸರಿಗೆ ಗೊಂದಲವುಂಟಾಗಿತ್ತು. ಆದರೆ, ಐಸಿಸ್ ಇದೀಗ ಸ್ಟೀಫನ್ ಪ್ಯಾಡಕ್'ನನ್ನು ತನ್ನ ಕಡೆಯವನೆಂದು ಹೇಳಿಕೊಂಡಿರುವುದು ಗಮನಾರ್ಹ. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಪ್ರಕಾರ ಸ್ಟೀಫನ್ ಪ್ಯಾಡಕ್ ಇತ್ತೀಚೆಗಷ್ಟೇ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದ.
"ಇಸ್ಲಾಮಿಕ್ ಸ್ಟೇಟ್'ನ ಯೋಧನಿಂದ ಲಾಸ್ ವೆಗಾಸ್ ದಾಳಿ ನಡೆದಿದೆ. ಐಸಿಸ್ ವಿರುದ್ಧ ಯುದ್ಧ ಮಾಡುತ್ತಿರುವ ದೇಶಗಳನ್ನು ಟಾರ್ಗೆಟ್ ಮಾಡುವ ಆದೇಶವನ್ನು ಅವರು ಪಾಲಿಸಿದ್ದಾರೆ. ಅವರು ಕೆಲ ತಿಂಗಳ ಹಿಂದಷ್ಟೇ ಇಸ್ಲಾಮ್'ಗೆ ಮತಾಂತರವಾಗಿದ್ದರು," ಎಂದು ಅಮಾಕ್ ಸುದ್ದಿ ಸಂಸ್ಥೆ ತಿಳಿಸಿದೆ.
ಶೂಟೌಟ್ ಮೂಲಕ 50ಕ್ಕೂ ಹೆಚ್ಚು ಜನರನ್ನು ಬಲಿತೆಗೆದ ಸ್ಟೀಫನ್ ಪ್ಯಾಡಕ್'ನನ್ನು ಪೊಲೀಸರು ಹೊಡೆದುರುಳಿಸಿರುವ ಸುದ್ದಿ ಇದೆ. ಕೆಲ ಸುದ್ದಿಗಳ ಪ್ರಕಾರ, ಪ್ಯಾಡಕ್'ನೇ ಸ್ವಯಂ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟಿದ್ದಾನೆ. ಆತನ ರೂಮಿನಲ್ಲಿ ಪೊಲೀಸರಿಗೆ 10ಕ್ಕೂ ಹೆಚ್ಚು ರೈಫಲ್'ಗಳು ಸಿಕ್ಕಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.