
ಬೆಂಗಳೂರು(ಡಿ.30): ವರ್ಷಾಂತ್ಯಕ್ಕೆ ಅಲಿಖಿತ ಸಂಪ್ರದಾಯವಾಗಿ ನಡೆದು ಬಂದಿರುವ ಹಿರಿಯ ಐಪಿಎಸ್ ಅಧಿಕಾರಿಗಳ ಮುಂಬಡ್ತಿ ಹಾಗೂ ವರ್ಗಾವಣೆಗೆ ಗೃಹ ಇಲಾಖೆಯ ಕಾರಿಡಾರ್‌ನಲ್ಲಿ ರೆಕ್ಕೆಪುಕ್ಕ ಲಭಿಸಿದ್ದು, ಪ್ರಸಕ್ತ ವರ್ಷವೂ ರಾಜಧಾನಿ ಸೇರಿದಂತೆ ಆಯಕಟ್ಟಿನ ಸ್ಥಾನದ ಹುದ್ದೆಗಳ ಬದಲಾವಣೆಗೆ ಇಲಾಖೆ ಸಿದ್ಧತೆ ನಡೆಸಿದೆ.
ಸೇವಾ ಹಿರಿತನ ಆಧಾರದಡಿ ನಾಲ್ವರು ಐಜಿಪಿ, ಇಬ್ಬರು ಡಿಐಜಿ ಹಾಗೂ ಆರು ಮಂದಿ ಎಸ್ಪಿಗಳಿಗೆ ಮುಂಬಡ್ತಿ, ಬೆಳಗಾವಿ ಮತ್ತು ಕಲಬುರಗಿ ನಗರಗಳಿಗೆ ಹೊಸ ಆಯುಕ್ತರ ನೇಮಕಾತಿ ನಡೆಯಲಿದೆ. ಹಾಗೆ ಒಂದು ವರ್ಷ ಅವಧಿ ಪೂರೈಸಿರುವ ಬೆಂಗಳೂರಿನ ನಾಲ್ವರು ಡಿಸಿಪಿಗಳು ಹಾಗೂ ೧೦ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾ ವರಿಷ್ಠಾಧಿಕಾರಿಗಳು ಬದಲಾಗುವ ಸಾಧ್ಯತೆಗಳಿವೆ.
ಪ್ರತಿ ವರ್ಷ ಡಿಸೆಂಬರ್ ಅಂತ್ಯದ ವೇಳೆ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ಮತ್ತು ವರ್ಗಾವಣೆ ಸಾಮಾನ್ಯವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ವರ್ಷದ ವರ್ಗಾವರ್ಗಿ ಪ್ರಾಮುಖ್ಯತೆ ಪಡೆದಿದೆ. ಈ ಸಾಲಿನಲ್ಲೂ ಸಹ ಬೆಂಗಳೂರಿನ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ಸ್ಥಾನ ಪಲ್ಲಟವಾಗಲಿದೆ. ಅಲ್ಲದೆ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಅಪರಾಧ ತನಿಖಾ ದಳಗಳಿಗೆ (ಸಿಐಡಿ) ಹೊಸ ಸಾರಥಿಗಳು ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.
ಇನ್ನು ಡಿ.೩೧ರಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಗಗನ್ ದೀಪ್ ಹಾಗೂ ವರ್ಣರಂಜಿತ ಅಧಿಕಾರಿ ಎಂದೇ ಕರೆಯಲ್ಪಡುವ ಕೆಎಸ್‌ಆರ್‌ಟಿಸಿ ಭದ್ರತಾ ಜಾಗೃತ ದಳದ ನಿರ್ದೇಶಕ ಬಿ.ಎನ್.ಎಸ್. ರೆಡ್ಡಿ ನಿವೃತ್ತರಾಗಲಿದ್ದು, ಇಬ್ಬರು ಅಧಿಕಾರಿಗಳಿಗೆ ಶನಿವಾರವೇ ಸಿಬ್ಬಂದಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದಾರೆ ಎನ್ನಲಾಗಿದೆ.
ಮಹಿಳೆ ಸೇರಿ ೪ ನೂತನ ಎಡಿಜಿಪಿ: ಸೇವಾ ಹಿರಿತನ ಆಧಾರದಡಿ ಬೆಂಗಳೂರು ನಗರದ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣ ಮೂರ್ತಿ, ಉತ್ತರ ವಲಯ ಐಜಿಪಿ ರಾಮಚಂದ್ರರಾವ್, ಪೂರ್ವ ವಲಯ ಐಜಿಪಿ ಡಾ.ಎಂ.ಎ.ಸಲೀಂ ಹಾಗೂ ಲೋಕಾಯುಕ್ತ ಎಸ್ ಐಟಿ ಮುಖ್ಯಸ್ಥ, ಕೆಎಸ್‌ಆರ್‌ಪಿ ಐಜಿಪಿ ಚರಣ್ ರೆಡ್ಡಿ ಅವರು ಎಡಿಜಿಪಿ ಹುದ್ದೆಗೆ ಮುಂಬಡ್ತಿ ಹೊಂದಲಿದ್ದಾರೆ.
ಅದೇ ರೀತಿ ರಾಜ್ಯ ಕಾರಾಗೃಹ ಇಲಾಖೆ ಅಕ್ರಮ ಪ್ರಕರಣದ ಮೂಲಕ ಸಾರ್ವಜನಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಡಿಐಜಿ ಡಿ.ರೂಪಾ, ಮುಖ್ಯಮಂತ್ರಿಗಳ ಭದ್ರತಾ ವಿಭಾಗ ಉಸ್ತುವಾರಿ ಹೊತ್ತಿರುವ ಡಿಐಜಿ ಶಿವಪ್ರಸಾದ್ ಅವರು ಐಜಿಪಿ ಹುದ್ದೆಗೆ ಬಡ್ತಿ ಪಡೆಯಲಿದ್ದಾರೆ. ಇನ್ನುಳಿದಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ, ಗುಪ್ತದಳದ ಎಸ್ಪಿ ಸಂದೀಪ್ ಪಾಟೀಲ್, ಕೇಂದ್ರ ಸೇವೆಯಲ್ಲಿರುವ ಲಾಬೂರಾಮ್, ಎಸ್‌ಐಟಿ ಎಸ್ಪಿ ಮಂಜುನಾಥ್ ಅಣ್ಣಿಗೇರಿ, ಆರ್.ಆರ್.ನಾಯ್ಕ್ ಹಾಗೂ ಎಸಿಬಿ ಎಸ್ಪಿ ಟಿ.ಡಿ.ಪವಾರ್ ಅವರು ಡಿಐಜಿ ಹುದ್ದೆಗೇರಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.
ಡಿಸಿಪಿ, ಎಸ್ಪಿಗಳ ವರ್ಗಾವಣೆ ಸಾಧ್ಯತೆ: ಒಂದು ವರ್ಷದ ಅವಧಿ ಮುಗಿಸಿರುವ ಬೆಂಗಳೂರು ಪಶ್ಚಿಮ, ದಕ್ಷಿಣ, ಆಗ್ನೇಯ, ಕೇಂದ್ರ ಹಾಗೂ ಪೂರ್ವ (ಸಂಚಾರ) ವಿಭಾಗದ ಡಿಸಿಪಿಗಳು ಹಾಗೂ ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಬೆಳಗಾವಿ, ಚಾಮರಾಜನಗರ, ಮಂಡ್ಯ ಸೇರಿದಂತೆ ಮತ್ತಿತರ ಜಿಲ್ಲೆಗಳ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್ಪಿಗಳು) ವರ್ಗಾವಣೆಗೊಳ್ಳುವ ಸಂಭವನೀಯರ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.