
ಬೆಂಗಳೂರು (ಡಿ.30): ಉನ್ನತ ಶಿಕ್ಷಣ ಇಲಾಖೆಯು ಸಿಬ್ಬಂದಿಗೆ ಪಾವತಿಸಿರುವ ತುಟ್ಟಿಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಮರು ಪಾವತಿ ಮಾಡುವಂತೆ ಹೊರಡಿಸಿದ್ದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮೌಲ್ಯಮಾಪನ ಬಹಿಷ್ಕರಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಪ್ರಾಧ್ಯಾಪಕರು ಹಿಂಪಡೆದಿದ್ದಾರೆ. ಶನಿವಾರದಿಂದ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಪ್ರಾಧ್ಯಾಪಕರೊಂದಿಗೆ ನಡೆಸಿದ ಸಭೆಯಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದ್ದು, ಪ್ರಾಧ್ಯಾಪಕರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರೆಡ್ಡಿ, ತುಟ್ಟಿಭತ್ಯೆ ವಿಚಾರ ಆರ್ಥಿಕ ಇಲಾಖೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಪರಿಶೀಲನೆ ಹಂತದಲ್ಲಿದೆ.
ತುಟ್ಟಿ ಭತ್ಯೆ ವಸೂಲಾತಿ ಕ್ರಮವನ್ನು ಸರ್ಕಾರದ ಮುಂದಿನ ನಿರ್ದೇಶನದವರೆಗೆ ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸುವುದಾಗಿ ತಿಳಿಸಿದರು. ಸಚಿವರ ಭರವಸೆ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರು ಶನಿವಾರದಿಂದ ಮೌಲ್ಯಮಾಪನ ಆರಂಭಿಸಲಿದ್ದಾರೆ ಎಂದು ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.
2006 ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ 2006ರ ಜ.1ರಿಂದ 2009ರ ಸೆ.23ರ ವರೆಗೆ ಯುಜಿಸಿ ಹಿಂಬಾಕಿ ಮೊತ್ತದಲ್ಲಿ ಪಡೆದಿರುವ ತುಟ್ಟಿಭತ್ಯೆ ವಸೂಲಿ ಹಿಂಪಡೆಯಬೇಕೆಂಬ ಪ್ರಮುಖ ಬೇಡಿಕೆ ಮುಂದಿಟ್ಟುಕೊಂಡು ಪ್ರಾಧ್ಯಾಪಕರು ಡಿ.26ರಿಂದ ಪ್ರತಿಭಟನೆ ನಡೆಸುತ್ತಿದ್ದರು. ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಸಿ.ರಾಮಣ್ಣ, ಎಂ.ಆರ್. ಶಶಿಧರ್ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.