
ನೋಟು ಅಮಾನ್ಯದಿಂದ ನಿಮ್ಮ ಅಲ್ಪಾವಧಿ, ಮಧ್ಯಮ ಹಾಗೂ ದೀರ್ಘಾವಧಿ ಹೂಡಿಕೆ, ಬಂಡವಾಳ, ಉಳಿತಾಯ, ವ್ಯಾಪಾರ ಹಾಗೂ ವಹಿವಾಟುಗಳಲ್ಲಿ ಏನಾದರೂ ವ್ಯತ್ಯಾಸ ಕಂಡು ಬರುತ್ತಿ ದೆಯೇ? ನಷ್ಟವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಪರಿಹಾರವೇನು, ಮುಂದೇನು ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಎಂಬೆಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಈ ಎಲ್ಲ ಪ್ರಶ್ನೆಗಳಿಗೆ ಸ್ವಲ್ಪ ಮಟ್ಟಿಗಿನ ಪರಿಹಾರ ಇಲ್ಲಿದೆ.
ಷೇರುಗಳು/ ಇಕ್ವಿಟಿ: ನಿಮ್ಮ ಸಂಪತ್ತು ವ್ಯರ್ಥವಾಗದೆ, ಲಾಭ ಬರಬೇಕೆಂದರೆ ಷೇರುಪೇಟೆಯಲ್ಲಿ ಯೋಜನಾಬದ್ಧವಾಗಿ ಹೂಡಿಕೆ ಮಾಡಿ. ನೋಟುಗಳ ಅಮಾನ್ಯವು ದೇಶದ ಜಿಡಿಪಿ ದರ ಹಾಗೂ ಜಾಗತಿಕ ಮಾರುಕಟ್ಟೆಯ ಮೇಲೆ ಅಗಾಧ ಪರಿಣಾಮ ಬೀರಿದೆ. ಇಂಥ ಪರಿಸ್ಥಿತಿಯಲ್ಲಿ, ಷೇರುಪೇಟೆಯಲ್ಲಿ ಹಣ ತೊಡಗಿಸುವುದು ದೀರ್ಘಾವಧಿಯಲ್ಲಿ ದೊಡ್ಡ ಲಾಭ ತಂದು ಕೊಡಬಹುದು.
* 2017ರಲ್ಲಿ ನಿಮ್ಮ ಹಣ ದೀರ್ಘಾವಧಿಯಲ್ಲಿ ಉತ್ತಮ ಲಾಭ ತಂದು ಕೊಡುವಂತೆ ಷೇರುಮಾರುಕಟ್ಟೆಯಲ್ಲಿ ನಡೆಯುತ್ತಿರುವ ಏರಿಳಿತಗಳನ್ನು ಗಮನದಲ್ಲಿ ಇರಿಸಿಕೊಂಡು ಹೂಡಿಕೆ ಮಾಡಿ.
* ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಗಳಿಂದ ಸುಲಭವಾಗಿ ಷೇರುಪೇಟೆಯಲ್ಲಿ ಹಣ ತೊಡಗಿಸಲು ಸಾಧ್ಯ.
* ಡಿಜಿಟಲೀಕರಣದಿಂದಾಗಿ ನಿಮ್ಮ ಎಲ್ಲ ದಾಖಲೆಗಳು, ವಹಿವಾಟುಗಳು ಇಲ್ಲಿ ಕಾಗದ ಆಧರಿತ ವ್ಯವಹಾರದಿಂದ ಮುಕ್ತವಾಗಿರುತ್ತದೆ. ಜೊತೆಗೆ ದಾಖಲೆæಗಳಲ್ಲಿ ಗೊಂದಲವಿಲ್ಲದೆ ಡಿಜಿಟಲ್ ರೂಪದಲ್ಲಿ ಟ್ರ್ಯಾಕ್ ಮಾಡಬಹುದು.
* ಮ್ಯೂಚುಯಲ್ ಫಂಡ್ ಸೇರಿದಂತೆ ಷೇರು ವ್ಯವಹಾರಗಳು ಪ್ರಬಲವಾದ ಕೆವೈಸಿ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಹೀಗಾಗಿ, ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವ ಮತ್ತು ಇತರೆ ಖಾತೆಗಳಿಗೆ ವರ್ಗಾಯಿಸುವ, ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕ ಹಾಕುವ ಹಾಗೂ ಆದಾಯ ತೆರಿಗೆ ಇಲಾಖೆ ಕೇಳುವ ಯಾವುದೇ ಪ್ರಶ್ನೆಗಳಿಗೆ ಸುಲಭವಾಗಿ ಸೂಕ್ತ ಉತ್ತರ ನೀಡುವ ಅವಕಾಶವಿರುತ್ತದೆ.
* ದೀರ್ಘಕಾಲದ ಲಾಭವನ್ನು ತಂದುಕೊಡುವ ಮತ್ತು ತೆರಿಗೆ ಮುಕ್ತ ಸೌಲಭ್ಯ ಒದಗಿಸುವ ಷೇರುಪೇಟೆ ಹೂಡಿಕೆಯ ಅನುಕೂಲತೆ ಒಂದು ವರ್ಷದ ಬಳಿಕವೂ ಮುಂದುವರಿಯುತ್ತದೆ. ಆದರೆ, ಇತರೆ ಹೂಡಿಕೆಗಳಲ್ಲಿ ಇದು ಸಾಧ್ಯವಿಲ್ಲ.
ನಿಶ್ಚಿತ ಠೇವಣಿ: ನೋಟುಗಳ ಅಮಾನ್ಯದಿಂದಾಗಿ ಬ್ಯಾಂಕುಗಳಿಗೆ ಹಣದ ಪ್ರವಾಹವೇ ಹರಿದು ಬಂದಿದೆ. ನೀವು ಅಲ್ಪಾವಧಿ ಹಣ ಠೇವಣಿಯಿಡಲು ಹವಣಿಸುತ್ತಿರುವವರಾದರೆ, ಕೂಡಲೇ ಅದನ್ನು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಇಡಿ. ಇದಲ್ಲದೇ, ಮ್ಯೂಚುವಲ್ ಫಂಡ್ ಮೂಲಕವೂ ಹಣ ಹೂಡಿಕೆ ಮಾಡಬಹುದು. ಆದಾಯ ತೆರಿಗೆ ದೃಷ್ಟಿಕೋನದಿಂದ ಇದು ಉತ್ತಮ
* ಬಡ್ಡಿ ದರ ಇನ್ನಷ್ಟುಕಡಿಮೆಯಾದರೆ, ದೀರ್ಘಾವಧಿಯ ಗಿಲ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ.
* ನಿಶ್ಚಿತ ಠೇವಣಿ ಮತ್ತು ಅಂಚೆ ಕಚೇರಿಯ ಯೋಜನೆಗಳಿಗೆ ಉತ್ತಮ ಪರ್ಯಾಯ ಮಾರ್ಗವೆಂದರೆ, ಲಿಕ್ವಿಡ್ ಫಂಡ್ ಮತ್ತು ಅಲ್ಪಾವಧಿಯ ನಿಧಿಗಳಲ್ಲಿ ಹೂಡಿಕೆ ಮಾಡುವುದು
ಚಿನ್ನದ ಹೂಡಿಕೆ: ನೋಟು ಅಮಾನ್ಯ ಘೋಷಣೆಯ ಬಳಿಕ ಚಿನ್ನದ ಬೆಲೆ ಏಕಾಏಕಿ ಇಳಿಮುಖಗೊಂಡಿದೆ. ನ.9ರಂದು 10 ಗ್ರಾಂಗೆ .31,500 ಇದ್ದ ಚಿನ್ನದ ದರ, ಡಿಸೆಂಬರ್ ಮಧ್ಯದಲ್ಲಿ .27,500ಕ್ಕೆ ತಲುಪಿತ್ತು. ಆದಾಯ ತೆರಿಗೆ ಇಲಾಖೆಯು ಚಿನ್ನದ ಖರೀದಿಯ ಮೇಲೆ ನಿಗಾ ಇಟ್ಟಿರುವುದೇ ಇದಕ್ಕೆ ಕಾರಣ. ಚಿನ್ನದಲ್ಲಿ ಹೂಡಿಕೆ ಮಾಡಬಯಸುವವರು ಹೀಗೆ ಮಾಡಿ.
* ಗೋಲ್ಡ್ ಬಾಂಡ್‌ಗಳು ಅಥವಾ ಇಟಿಎಫ್ ಮೇಲೆ ಹಣವನ್ನು ಹೂಡಿರಿ. ಇದು ಅಗ್ಗ, ಸುರಕ್ಷಿತ ಮಾತ್ರವಲ್ಲದೇ, ಇದರ ದಾಖಲೆಗಳ ನಿರ್ವಹಣೆಯೂ ಸುಲಭ. ಅಷ್ಟೇ ಅಲ್ಲ, ನಿಮಗೆ ಹಣ ಬೇಕೆಂದಿದ್ದಾಗ, ಬಾಂಡ್ ಅಥವಾ ಇಟಿಎಫ್ ಅನ್ನು ಮಾರಾಟ ಮಾಡಿದರೆ ಮುಗೀತು.
* ಒಂದು ವೇಳೆ ಆಭರಣ ಅಥವಾ ನಾಣ್ಯಗಳನ್ನು ಖರೀದಿಸುವುದಿದ್ದರೆ, ಇನ್‌ವಾಯ್‌್ಸ ಸೇರಿದಂತೆ ಎಲ್ಲ ದಾಖಲೆಗಳನ್ನೂ ಭವಿಷ್ಯದ ಉದ್ದೇಶದಿಂದ ಸುರಕ್ಷಿತವಾಗಿ ತೆಗೆದಿಡಿ. ಆ ಚಿನ್ನವನ್ನು ಮಾರಾಟ ಮಾಡುವಾಗ ನೀವು ಸೂಕ್ತ ಬಂಡವಾಳ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ರಿಯಲ್ ಎಸ್ಟೇಟ್: ಅಕ್ರಮ ಅಥವಾ ಲೆಕ್ಕ ನೀಡದ ಹಣವನ್ನು ಮುಚ್ಚಿಡುವ ಸಲುವಾಗಿ ಅನೇಕರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಭವಿಷ್ಯದಲ್ಲಿ ಭೂಮಿಯನ್ನು ಖರೀದಿಸಬೇಕೆಂದು ಬಯಸಿದ್ದಲ್ಲಿ ಅದನ್ನು ಮಾಡಿ. ಆದರೆ, ಈಗಾಗಲೇ ಹೂಡಿಕೆ ಮಾಡಿದ್ದರೆ ಈ ಯೋಚನೆ ಬೇಡ. ರಿಯಲ್ ಎಸ್ಟೇಟ್ ಎನ್ನುವುದು ಒಳ್ಳೆಯ ಹೂಡಿಕೆ ಯೋಜನೆಯಲ್ಲ.
- ದಾವೂದ್'ಸಾಬ್ ನದಾಫ್, ಹನುಮಸಾಗರ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.