ವರ್ಷದ ಮಗುವಿನೊಂದಿಗೆ ಮನೆ ಮಂದಿ ರಕ್ಷಿಸಿದ ಗಟ್ಟಿಗಿತ್ತಿ!

By Web Desk  |  First Published Aug 16, 2019, 11:49 AM IST

ಭೀಕರ ಶಬ್ದ ಕೇಳಿಸಿತ್ತು. ಏನೆಂದು ಹೊರಗೆ ಬಂದು ನೋಡುವಾಗ ಹಳ್ಳದಲ್ಲಿ ಪ್ರವಾಹ ನೀರು ರಭಸದಿಂದ ಬರುತ್ತಿತ್ತು. ಒಂದೇ ಸಮನೆ ಕೂಗಿಕೊಂಡು ಮನೆಯಲ್ಲಿದ್ದವರನ್ನು ಎಚ್ಚರಿಸಿ ಓಡುವಂತೆ ಹೇಳಿದೆ, ನಾನು ಕೂಡ ಮಗುವನ್ನು ಎತ್ತಿಕೊಂಡು ಹೊರಗೋಡಿ ಜೀವ ಉಳಿಸಿಕೊಂಡೆ...’ಇದು ವೇದಾವತಿ ಗದ್ಗತಿತರಾಗಿ ಹೇಳುವ ಮಾತಿದು.


ಬೆಳ್ತಂಗಡಿ (ಆ. 16):  ‘ಭೀಕರ ಶಬ್ದ ಕೇಳಿಸಿತ್ತು. ಏನೆಂದು ಹೊರಗೆ ಬಂದು ನೋಡುವಾಗ ಹಳ್ಳದಲ್ಲಿ ಪ್ರವಾಹ ನೀರು ರಭಸದಿಂದ ಬರುತ್ತಿತ್ತು. ಒಂದೇ ಸಮನೆ ಕೂಗಿಕೊಂಡು ಮನೆಯಲ್ಲಿದ್ದವರನ್ನು ಎಚ್ಚರಿಸಿ ಓಡುವಂತೆ ಹೇಳಿದೆ, ನಾನು ಕೂಡ ಮಗುವನ್ನು ಎತ್ತಿಕೊಂಡು ಹೊರಗೋಡಿ ಜೀವ ಉಳಿಸಿಕೊಂಡೆ...’

ಮಲೆನಾಡಲ್ಲಿ ಮುಂದುವರಿದ ಭೂ ಕುಸಿತ : ಹಲವು ಪ್ರದೇಶಗಳ ಸಂಪರ್ಕ ಕಡಿತ

Tap to resize

Latest Videos

-ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಸಮೀಪದ ಮಾಪಲ್‌ದಡಿ ಎಂಬಲ್ಲಿ ಪ್ರವಾಹ ನೀರಿನಿಂದ ತನ್ನ ಒಂದು ವರ್ಷದ ಮಗುವಿನ ಜೊತೆಗೆ ಮನೆ ಮಂದಿಯನ್ನು ರಕ್ಷಿಸಿದ ವೇದಾವತಿ ಗದ್ಗತಿರಾಗಿ ಹೇಳುವ ಮಾತಿದು.

ಮಾಪಲ್‌ದಡಿಯ ಹಳ್ಳದ ಕಿನಾರೆಯಲ್ಲಿರುವ ಈ ಮನೆಯಲ್ಲಿ ವೇದಾವತಿ, ಪುಟ್ಟಮಗು, ಅತ್ತೆ, ಮಾವ, ಭಾವ, ಅಕ್ಕ, ಮಕ್ಕಳು ಸೇರಿದಂತೆ ಎಂಟು ಮಂದಿ ಇದ್ದರು. ಪತಿ ಕೂಲಿ ಕೆಲಸಕ್ಕೆ ಹೋಗಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯ ಮೇಲ್ಭಾಗದಿಂದ ನೀರು ಭೋರ್ಗರೆಯುವ ವಿಚಿತ್ರ ಸದ್ದು ಕೇಳಿಸಿತ್ತು.

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

ಹೊರಗೆ ಬಂದು ನೋಡಿದಾಗ ಮನೆಯತ್ತಲೇ ಹಳ್ಳದ ನೀರು ನೀರು ಉಕ್ಕೇರಿ ಹರಿಯುತ್ತಿತ್ತು. ಕೂಡಲೇ ಮನೆಯಲ್ಲಿದ್ದ ಇತರರನ್ನು ಹೊರಗೋಡುವಂತೆ ಕೂಗಿದ ವೇದಾವತಿ, ತಾನು ಕೂಡ ಮಗುವನ್ನು ಎತ್ತಿಕೊಂಡು ಪಲಾಯನ ಮಾಡಿದರು. ಅಷ್ಟರಲ್ಲಿ ಮೊಣಕಾಲವರೆಗೆ ಪ್ರವಾಹ ನೀರು ಬಂದಾಗಿತ್ತು.

ಈಕೆ ಹಾಗೂ ಮನೆ ಮಂದಿ ಸುಲಭದಲ್ಲಿ ಓಡಿ ಪಾರಾಗಲು ಎತ್ತರದ ಪ್ರದೇಶ ಇಲ್ಲ. ಓಡುವುದಿದ್ದರೆ, ಮನೆಯ ಕೆಳಭಾಗದಲ್ಲಿ ತೋಟದ ಮೂಲಕ ಪಾರಾಗಬೇಕು. ಆದರೆ ಅಲ್ಲಿಗೂ ಪ್ರವಾಹ ನೀರು ನುಗ್ಗಿತ್ತು. ಆದರೂ ಧೃತಿಗೆಡದ ವೇದಾವತಿ, ತಾನು, ತನ್ನ ಮಗು ಹಾಗೂ ಉಳಿದ ಮನೆ ಮಂದಿಯನ್ನು ಬಚಾವ್‌ ಮಾಡುವಲ್ಲಿ ಯಶಸ್ವಿಯಾದರು.

45 ಸೆಂಟ್ಸ್‌ ಜಾಗದಲ್ಲಿ ತೋಡಿನ ಬದಿ ಹೆಂಚಿನ ಮನೆ ನಿರ್ಮಿಸಿದ್ದು, ಸುಮಾರು 50ರಷ್ಟುಅಡಕೆ ಮರಗಳಿವೆ. ಜೀವನೋಪಾಯಕ್ಕೆ ಕೂಲಿ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಮನೆಯ ಹಟ್ಟಿಯಲ್ಲಿದ್ದ ಜಾನುವಾರನ್ನು ಸ್ಥಳೀಯರು ಬಂದು ಹಗ್ಗಕಡಿದು ಪಾರು ಮಾಡಿದ್ದಾರೆ.

ಮನೆ ಮಂದಿ ಈಗ ಕಕ್ಕಾವು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಕುಟುಂಬಕ್ಕೆ ಮತ್ತೆ ಅದೇ ಜಾಗದಲ್ಲಿ ಮನೆ ನಿರ್ಮಿಸುವಂತಿಲ್ಲ. ಹಾಗಾಗಿ ಪರ್ಯಾಯ ವ್ಯವಸ್ಥೆ ಆಗುವವರೆಗೆ ಪರಿಹಾರ ಕೇಂದ್ರದಲ್ಲಿದ್ದಾರೆ. ಹಳ್ಳದಲ್ಲಿ ರಭಸದಿಂದ ನೀರು ಹರಿಯುತ್ತಿರುವುದರಿಂದ ನಾಶಗೊಂಡ ಮನೆಯ ಕಡೆಗೆ ಹೋಗಲಾಗುತ್ತಿಲ್ಲ.

- ಆತ್ಮಭೂಷಣ್ 

 

click me!