ಸ್ವಂತ ವೆಬ್‌ಸೈಟ್ ಪ್ರಾರಂಭಿಸಿದ ಮೊದಲ ರಾಜಕಾರಣಿ ಅನಂತ್ ಕುಮಾರ್!

By Web DeskFirst Published Nov 12, 2018, 8:39 PM IST
Highlights

ಅಂತರ್ಜಾಲದ ಬಳಕೆ ದೂರವಿದ್ದ ಕಾಲದಲ್ಲೇ ಅನಂತ್ ಮುಂದಾಲೋಚನೆ ಮಾಡಿ ವೆಬ್‌ಸೈಟನ್ನು ಆರಂಭಿಸಿದ್ದರು. ಅದನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಯಶಸ್ವಿಯಾಗಿದ್ದರು. 

ಬೆಂಗಳೂರು (ನ. 11): ಬಿಜೆಪಿಯ ಮೆದುಳು ಎಂಬಂತಿದ್ದ ಸರಳ, ಸಜ್ಜನ ರಾಜಕಾರಣಿ ಅನಂತ್ ಕುಮಾರ್ ಅಸ್ತಂಗತರಾಗಿದ್ದಾರೆ. ಸತತ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅನಂತಕುಮಾರ್ ಕೇಂದ್ರದಲ್ಲಿ ಹಲವು ಮಹತ್ತರ ಖಾತೆಗಳನ್ನು ನಿಭಾಯಿಸಿದವರು. ಈಗ ಅವರ ನಿಧನದಿಂದ ದೆಹಲಿಯಲ್ಲಿದ್ದ ರಾಜ್ಯದ ಗಟ್ಟಿ ಧ್ವನಿಯೊಂದನ್ನು ಕಳೆದುಕೊಂಡಂತಾಗಿದೆ. 

ಕಳೆದ ಕೆಲವು ತಿಂಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬೆಂಗಳೂರು ಸೇರಿದಂತೆ ವಿದೇಶದಲ್ಲೂ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.  

ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಎಬಿವಿಪಿ ಸಂಘಟನೆ ಮೂಲಕ ನಾಯಕತ್ವದ ಗುಣಗಳನ್ನು ಬೆಳಸಿಕೊಂಡವರು. ಕರ್ನಾಟಕದಲ್ಲಿ  ಅನಂತಕುಮಾರ್ ಅವರು ಪಕ್ಷದ ಹಿರಿಯ ನಾಯಕ  ಯಡಿಯೂರಪ್ಪನವರ ಜೊತೆಗೂಡಿ ತಳಮಟ್ಟದಲ್ಲಿ ಬಿಜೆಪಿ ಪಕ್ಷದ ಸಂಘಟನೆಗಾಗಿ ರಾಜ್ಯದಲ್ಲಿ ಶ್ರಮಿಸಿದ್ದರು.ಇದರ ಭಾಗವಾಗಿ ಇಡೀ ದಕ್ಷಿಣ ಭಾರತದಲ್ಲಿ  ಮೊದಲ ಬಾರಿಗೆ ರಾಜ್ಯವೊಂದರಲ್ಲಿ ಬಿಜೆಪಿ ಪಕ್ಷವು  ಅಧಿಕಾರಕ್ಕೆ ಬರುವಂತಾಯಿತು.'

ಮೊದಲ ಬಾರಿಗೆ 1996ರಲ್ಲಿ  ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಅವರು ನಂತರ 1998ರ ಸಾರ್ವತ್ರಿಕ ಚುನಾವಣೆಯಲ್ಲಿ  www.dataindia.com ಮತ್ತು www.ananth.org  ವೆಬ್ ಸೈಟ್ ಗಳನ್ನು  ಪ್ರಾರಂಭಿಸುವ ಮೂಲಕ  ಸ್ವಂತ ವೆಬ್ ಸೈಟ್ ನ್ನು ಪ್ರಾರಂಭಿಸಿದ ಮೊದಲ ರಾಜಕಾರಣಿ ಎನ್ನುವ ಖ್ಯಾತಿಗೆ ಅನಂತ್ ಕುಮಾರ್ ಪಾತ್ರರಾಗಿದ್ದರು. 

ವಿಶೇಷವೆಂದರೆ ಆಗ ಅಧಿಕಾರಕ್ಕೆ ಬಂದಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮೊದಲ ಬಾರಿಗೆ ನಾಗರಿಕ ವಿಮಾನಯಾನ ಕೇಂದ್ರ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು. ಅಂದಿನಿಂದ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ.ಸತತ ಆರು ಭಾರಿ ಲೋಕಸಭಾ ಚುನಾವಣೆಯನ್ನು ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನ್ನುವ ಶ್ರೇಯ ಪಡೆದರು. ಪ್ರವಾಸ ಇಲಾಖೆ,ನಗರಾಭಿವೃದ್ದಿ ಸಂಸದೀಯ ವ್ಯವಹಾರಗಳ ಖಾತೆ,ರಸಗೊಬ್ಬರ  ಖಾತೆಯಂತಹ ಪ್ರಮುಖ ಹುದ್ದೆಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದರು.

ಬಿಜೆಪಿ ಪ್ರಮುಖ ಸಂಘಟನಾಕಾರರಾಗಿದ್ದ ಅನಂತಕುಮಾರ್ ಅವರು ಮಧ್ಯಪ್ರದೇಶ,ಬಿಹಾರ್ ,ಛತ್ತೀಸ್ ಘಡ್ ನಂತಹ ಪ್ರಮುಖ ರಾಜ್ಯಗಳ ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡು ಪಕ್ಷವು ಆಯಾ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವಹಾಗೆ ಮಾಡಿದ್ದರು. 

click me!