ಗೆಳೆಯ, ಗುರು ಅನಂತ್ ಕುಮಾರ್‌ಗೆ ರಾಜೀವ್ ಚಂದ್ರಶೇಖರ್ ನುಡಿ ನಮನ

Published : Nov 12, 2018, 06:38 PM ISTUpdated : Nov 13, 2018, 01:16 PM IST
ಗೆಳೆಯ, ಗುರು ಅನಂತ್ ಕುಮಾರ್‌ಗೆ ರಾಜೀವ್ ಚಂದ್ರಶೇಖರ್ ನುಡಿ ನಮನ

ಸಾರಾಂಶ

ಅನಂತ್ ಕುಮಾರ್ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೂ ಅವಿನಾಭಾವ ಸಂಬಂಧ. ರಾಜಕೀಯ ಗುರು, ಸ್ನೇಹಿತನೆಂದು ಭಾವಿಸಿದ್ದ ಅನಂತ್ ನಿಧನಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಸಂತಾಪ ಸೂಚಿಸಿದ್ದು ಹೀಗೆ.

- ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ರಾಜಕೀಯದಲ್ಲಿ ನನ್ನ ಸ್ನೇಹಿತರು ಯಾರೆಂದು ಕೆಲವು ದಿನಗಳ ಹಿಂದೆ ಒಬ್ಬರು ಕೇಳಿದ್ದರು. ಹಿಂದೂ ಮುಂದು ನೋಡದೇ ಅನಂತ್ ಕುಮಾರ್ ಎಂದೆ. ರಾಜಕೀಯ ಪ್ರಪಂಚದಲ್ಲಿ ಸ್ನೇಹಿತರೆಂದು ಪರಿಗಣಿಸುವ ಇಬ್ಬರಲ್ಲಿ ಒಬ್ಬರು ಅನಂತ್ ಕುಮಾರ್.  ಜೀವನ ಪಯಣದಲ್ಲಿ ಅನಂತ್ ಅವರಂಥ ಸ್ನೇಹಿತರನ್ನು ಪಡೆಯಲು ಪುಣ್ಯ ಮಾಡಿರಬೇಕು.

ನಾನು ಮೊದಲು ಅನಂತ್ ಅವರನ್ನು ಭೇಟಿಯಾಗಿದ್ದು 1994ರಲ್ಲಿ. ಯುವ ಎಬಿವಿಪಿ ಹಾಗೂ ಉತ್ಸಾಹಿ ಬಿಜೆಪಿ ಮುಖಂಡರಾಗಿದ್ದ ಅವರನ್ನು ಭೇಟಿಯಾದಾಗ, ನಾನು ಆಗ ತಾನೇ ಅಮೆರಿಕದಿಂದ ಮರಳಿದ್ದ ನವೋದ್ಯಮಿಯಾಗಿದ್ದೆ. ನನ್ನ ಹಾಗೂ ಅವರ ವಿಶ್ವವೇ ವಿಭಿನ್ನವಾಗಿತ್ತು. ಆದರೂ, ಹತ್ತಿರವಾದೆವು. ಅವರು ರಾಜಕಾರಣದ ಬಗ್ಗೆ ಮಾತನಾಡಿದರೆ, ತಂತ್ರಜ್ಞಾನ ಮತ್ತು ದೂರ ಸಂಪರ್ಕದ ಬಗ್ಗೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೆ. ಕ್ರಮೇಣ ನಾನೂ ರಾಜಕೀಯ ಹಾಗೂ ಆಡಳಿತದ ಬಗ್ಗೆ ಮಾತನಾಡಲು ಶುರು ಮಾಡಿದೆ. ಸಾಮಾನ್ಯ ರಾಜಕಾರಣಿಗಿಂತ ವಿಭಿನ್ನವಾಗಿ ಅವರು ನನ್ನ ಚಿಂತನೆಗಳನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಜೋಳಿಗೆಯಂಥ ಚೀಲವನ್ನು ಏರಿಸಿಕೊಂಡು ನನ್ನ ಆಫೀಸ್‌ಗೆ ಬರುತ್ತಿದ್ದ ದಿನಗಳು ಇನ್ನೂ ನೆನಪಿದೆ.

"

ಕಿರಿಯ ಸಚಿವರಾದ ಅನಂತ್..
ನೋಡ ನೋಡುತ್ತಿದ್ದಂತೆ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಕಿರಿಯ ಕ್ಯಾಬಿನೆಟ್ ಸಚಿವರಾಗಿಯೂ ಅನಂತ್ ಅಧಿಕಾರ ವಹಿಸಿಕೊಂಡರು. ಆದರೆ, ಸಚಿವರಾದ ಕೂಡಲೇ ಸಾಮಾನ್ಯವಾಗಿ ಎರಡು ಕೋಡು ಬಂದಂತೆ ಮಾಡುವ ಕಾರಕಾರಣಿಗಳಲ್ಲಿ ಅಪರೂಪವೆಂಬಂತೆ ಅನಂತ್ ತಮ್ಮ ಸರಳತೆ ಬಿಡಲಿಲ್ಲ. ಅದರಿಂದಲೇ ನಮ್ಮ ಸ್ನೇಹವೂ ನಿರಾತಂಕವಾಗಿಯೇ ಮುಂದುವರಿಯಿತು.

ಆಗಿನ್ನೂ ಬೆಳೆಯುತ್ತಿದ್ದ ಸೈದ್ಧಾಂತಿಕ, ಸುಸಂಸ್ಕೃತ ಪಕ್ಷವಾಗಿತ್ತು ಬಿಜೆಪಿ. ಯುವಕನಾಗಿದ್ದ ನನ್ನ ಆಸಕ್ತಿಯನ್ನೂ ಅವರು ಪ್ರೋತ್ಸಾಹಿಸಿದರು. ಅವರ ಪ್ರೋತ್ಸಾಹದಿಂದಲೇ  ಕರ್ನಾಟಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚುನಾವಣೆಗಳಲ್ಲಿ ನಾನು ಪಾಲ್ಗೊಳ್ಳುವಂತಾಯಿತು.  

ರಾಜ್ಯದಲ್ಲಿ ಬಿಜೆಪಿ ಬೆಳೆಸಿದ ಅನಂತ್...
ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಅವರ ಟೀಂನ ಶ್ರಮದ ಫಲವಾಗಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಮೊದಲು ಬಿಜೆಪಿ ತನ್ನ ಬೇರನ್ನು ಬಲವಾಗಿ ಊರಲು ಸಾಧ್ಯವಾಗಿದ್ದು. ತಮಗೆ ನೀಡಿದ ಕೆಲಸಗಳನ್ನು ಸವಾಲಾಗಿ ಸ್ವೀಕರಿಸುತ್ತಿದ್ದ ಅನಂತ್ ಕುಮಾರ್, ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಿದ್ದಿದ್ದು ಅದ್ಭುತ. ರಾಜ್ಯ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿದಾಗ ಅನೇಕ ಬಾರಿ ನಾನೇ ಸರಿಪಡಿಸಲು ಯತ್ನಿಸುತ್ತಿದ್ದೆ. ಇಲ್ಲವೇ ಮುಖಂಡರಾದ ಆಡ್ವಾಣಿಜೀ, ಅಟಲ್‌ಜೀ ಹಾಗೂ ಕರ್ನಾಟಕದ ಪ್ರಭಾರಿ ವೇದ್ ಪ್ರಕಾಶ್ ಗೋಯಲ್ ನೆರವಿನಿಂದ ತಿಳಿಗೊಳಿಸಲಾಗುತ್ತಿತ್ತು. ಅನಂತ್ ಕುಮಾರ್ ಮಾತ್ರ ಯಾವತ್ತೂ ಪಕ್ಷದ ಮುಂದೆ ತಮ್ಮ ಅಹಂಕಾರವನ್ನು ಪ್ರದರ್ಶಿಸಿಯೇ ಇರಲಿಲ್ಲ.

ಏಳು ಬೀಳುಗಳನ್ನು ಕಂಡಿದ್ದ ಅಪರಾಜಿತ
ಸಹಜವೆಂಬಂತೆ ಅನಂತ್ ಕುಮಾರ್ ರಾಜಕೀಯ ಜೀವನದಲ್ಲಿಯೂ ಏಳು ಬೀಳುಗಳಿದ್ದವು. ಆದರೂ ಸದಾ ಉತ್ಸಾಹಿ ಆಗಿದ್ದರು. ನನ್ನ ರಾಜಕೀಯ ಜೀವನದಲ್ಲಿ ಸದಾ ನನಗೆ ಮಾರ್ಗದರ್ಶಕರಾಗಿಯೇ ಇದ್ದರು. ನನ್ನ ಹಾಗೂ ಅವರ ರಾಜಕೀಯ ತತ್ವಗಳಲ್ಲಿ ಸಾಮ್ಯತೆ ಇತ್ತು. ಬೆಂಗಳೂರಿಗಾಗಿ ನಾನು ಹೋರಾಡುತ್ತಿದ್ದ ಶೈಲಿಯನ್ನು ಪ್ರೋತ್ಸಾಹಿಸುತ್ತಿದ್ದರು. ಈ ವರ್ಷದ ಆದಿಯಲ್ಲಿ ನಾನು ಬಿಜೆಪಿಗೆ ಸೇರಿದಾಗ ಅವರು ಮರಳಿ ಗೂಡಿಗೆ ಬಂದಿದ್ದಾಗಿ ಸಂತೋಷಿಸಿದ್ದರು. ನನ್ನ ಕುಟುಂಬ, ಪೋಷಕರು ಹಾಗೂ ಮಕ್ಕಳೊಂದಿಗೂ ಸಂಪರ್ಕದಲ್ಲಿದ್ದ ಏಕೈಕ ರಾಜಕಾರಣಿ ಅನಂತ್ ಅವರಾಗಿದ್ದರು.

ನನಗೆ ರಾಜಕೀಯ ಜೀವನ ಆರಂಭಿಸಲು 2006ರಲ್ಲಿ ದೇವೇಗೌಡರು ಸಲಹೆ ನೀಡಿದರು. ಇದಕ್ಕೆ ಕರ್ನಾಟಕದಲ್ಲಿ ಮೊದಲು ಪ್ರೋತ್ಸಾಹಿಸಿದವರು ಅನಂತ್ ಕುಮಾರ್. 

ತಮ್ಮ ಆರೋಗ್ಯಕ್ಕಿಂತಲೂ ದೇಶವೇ ಮುಖ್ಯವಾಗಿತ್ತು
ಕಳೆದ ಮೇನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಬಿಡುವಿರದ ಪ್ರಚಾರದಲ್ಲಿ ಅನಂತ್ ಕುಮಾರ್ ಆಯಾಸಗೊಂಡಿದ್ದು  ನನ್ನ ಅರಿವಿಗೆ ಬಂದಿತ್ತು. ವಿಶ್ರಾಂತಿ ಪಡೆಯಲು ಹೇಳಿದರೂ, ಸಂಸತ್ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರಿಗೆ ಸದಾ ಪಕ್ಷ, ಸರಕಾರವೇ ಮೊದಲಾಗಿತ್ತು. ಅನಾರೋಗ್ಯ ಕಾಡುತ್ತಿದ್ದರೂ ಲೋಕಸಭೆಯಿಂದ ರಾಜ್ಯಸಭೆಗೆ ಮುಗಿಸಬೇಕಾದ ಕೆಲಸಗಳನ್ನು ಮುಗಿಸಲು ಓಡಾಡುತ್ತಿದ್ದರು. 

ಅನಂತ್ ಸೈದ್ಧಾಂತಿಕ ಮೌಲ್ಯಗಳ ನೆಲೆಗಟ್ಟಿನಲ್ಲಿಯೇ ಅವರು ಕುಟುಂಬವೂ ಇತ್ತು. ಅವರ ಪತ್ನಿ ತೇಜಸ್ವಿನಿ ಹಾಗೂ ಕುಟುಂಬದ ಇತರೆ ಸದಸ್ಯರು ಆಗಾಗ ಅವರ ಮನೆಗೆ ಆಹ್ವಾನಿಸುತ್ತಿದ್ದರು. ಯಾವುದೇ ಸರಕಾರದ ಸಹಾಯವಿಲ್ಲದೇ ಚಿಕಿತ್ಸೆಗಾಗಿ ಪತಿಯೊಂದಿಗೆ ತೇಜಸ್ವಿನಿ ಓಡಾಡಿದ್ದಾರೆ. ಜೀವನದ ಕಡೇವರೆಗೂ ಸರಳವಾಗಿಯೇ ಅನಂತ್ ಬದುಕಿದರು.

ಅವರೊಂದಿಗಿನ ಸ್ನೇಹ ಅಮರ
ಹಸನ್ಮುಖಿಯಾಗಿದ್ದ ಅವರು ನನಗೆ ಸದಾ ಆತ್ಮೀಯ ಸ್ನೇಹಿತ. ಅನೇಕಾನೇಕ ಜೋಕ್ಸ್ ಕಳುಹಿಸಿ ಮಕ್ಕಳೊಂದಿಗೆ ಶೇರ್ ಮಾಡಿಕೊಳ್ಳಲು ಹೇಳುತ್ತಿದ್ದರು. ರಾಜಕಾರಣದಲ್ಲಿರೋ ಕೆಲವೇ ಕೆಲವು ಪ್ರಾಮಾಣಿಕ ಹಾಗೂ ಸಜ್ಜನರಲ್ಲಿ ಅನಂತ್‌ ಕುಮಾರ್ ಅವರನ್ನು ಹೆಚ್ಚು ಗೌರವಿಸುತ್ತಿದ್ದೆ. ಅವರು ಹಾಗೂ ಅವರ ಸ್ನೇಹವನ್ನು ನಾನು ಸದಾ ಮಿಸ್ ಮಾಡಿಕೊಳ್ಳುತ್ತೇನೆ. 

 

ಅನಂತ್ ನಿಧನಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು