
ವಿಧಾನಪರಿಷತ್: "ಮನೆಯಲ್ಲಿ ‘ಜಯ' ನಿಮ್ಮದೇ... ನಿಮ್ಮ ಹೆಸರಲ್ಲಿಯೇ ‘ಜಯ' ಇದೆ" ಎಂದು ಕಾಂಗ್ರೆಸ್ ಸದಸ್ಯರಾದ ಜಯಮಾಲಾ ಮತ್ತು ಜಯಮ್ಮ ಅವರನ್ನು ಮೇಲ್ಮನೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಕೆಣಕಿದ ಪ್ರಸಂಗ ಜರುಗಿತು. ಗುರುವಾರ ಬರದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯೆ ತಾರಾ ಅವರು ಮಾತನಾಡಲು ಆರಂಭಿಸಿದಾಗ ಪರಿಷತ್'ನಲ್ಲಿ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿದ್ದು, ತಮಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಬೇಕು ಎಂದು ಸಭಾಪತಿ ಸ್ಥಾನದಲ್ಲಿ ಕುಳಿತಿದ್ದ ಮರಿತಿಬ್ಬೇಗೌಡ ಅವರಲ್ಲಿ ಮನವಿ ಮಾಡಿದರು. ಈ ವೇಳೆ ಮಧ್ಯೆಪ್ರವೇಶಿಸಿದ ಈಶ್ವರಪ್ಪ, "ನಾವೆಲ್ಲಾ ಮನೆಯಲ್ಲಿ ಹೆಂಡತಿಯರ ಮಾತು ಕೇಳುತ್ತೇವೆ. ನಾನು ಕೇಳುತ್ತೇವೆ, ನೀವು (ಸಭಾಪತಿಗೆ) ಕೇಳುತ್ತೀರಾ. ಹೀಗಾಗಿ ಸದನದಲ್ಲಿ ಅವರಿಗೆ ಹೆಚ್ಚಿನ ಅವಕಾಶ ನೀಡಬೇಕು" ಎಂದು ಹೇಳಿದಾಗ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಸದನದಲ್ಲಿರುವ ಜಯಮಾಲಾ, ಜಯಮ್ಮ, ಮೋಟಮ್ಮ ಅವರಿಗೆ ಸಮಯ ನೀಡಬೇಕು ಎಂದಾಗ, ಜಯಮಾಲಾ ಅವರು ತಕ್ಷಣ ಎದ್ದು ನಿಂತು, ರೈತರ, ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕು ಎಂದು ಪ್ರಸ್ತಾಪಿಸಿದರು. ಅಲ್ಲದೇ, ಜಯಮ್ಮ ಅವರು ಗಂಡ-ಹೆಂಡತಿ ಜೋಡತ್ತಿನ ಗಾಡಿ ಇದ್ದಂತೆ. ಜತೆಯಲ್ಲಿ ಇಬ್ಬರು ನಡೆಯಬೇಕು ಎಂದರು. ಈ ವೇಳೆ ಈಶ್ವರಪ್ಪ ಅವರು "ಮನೆಯಲ್ಲಿ ‘ಜಯ' ನಿಮ್ಮದೇ... ನಿಮ್ಮ ಹೆಸರಲ್ಲಿಯೇ ‘ಜಯ' ಇದೆ" ಎಂದು ಕೆಣಕಿದಾಗ ಸದನವು ನಗೆಗಡಲಲ್ಲಿ ತೇಲಿತು.
ಹಲವು ಸದಸ್ಯರು ಈಶ್ವರಪ್ಪ ಬೆಂಬಲಕ್ಕೆ ನಿಂತು, ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂಬುದಾಗಿ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದು ನುಡಿದರು. ಸದಸ್ಯ ಪ್ರಾಣೇಶ್ ಮಧ್ಯಪ್ರವೇಶಿಸಿ ಕಥೆಯೊಂದನ್ನು ಹೇಳಿದರು. "ಸಭೆಯೊಂದರಲ್ಲಿ ವೇದಿಕೆಯಲ್ಲಿರುವವರು ಹೆಂಡತಿಯ ಮಾತುಗಳನ್ನು ಕೇಳುವವರು ಕೈ ಎತ್ತಿ ಎಂದು ಹೇಳಿದಾಗ ಕೆಲವರು ಬಿಟ್ಟು ಇನ್ನುಳಿದೆಲ್ಲರು ಕೈ ಎತ್ತಿದರು. ಕೈ ಎತ್ತದವರನ್ನು ಪತ್ನಿಯ ಮಾತನ್ನು ನೀವು ಕೇಳುವುದಿಲ್ಲವಾ ಎಂದು ಪ್ರಶ್ನಿಸಿದಾಗ ಹೆಂಡತಿಯನ್ನು ಕೇಳಿ ಕೈ ಎತ್ತುತ್ತೇವೆ ಎಂದರು" ಎಂದು ಕಥೆಯ ಪ್ರಸಂಗ ಹೇಳಿದಾಗ ಮತ್ತೊಮ್ಮೆ ಸದನದಲ್ಲಿ ನಗೆ ಮೂಡಿತು.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.