ಡಿವೈಎಸ್ಪಿ ಗಣಪತಿ ಸಾವಿನ ಸಾಕ್ಷ್ಯ ಹೇಳಲು ಯಾರೂ ಬರುತ್ತಿಲ್ಲವಾ?

By Suvarna Web DeskFirst Published Jun 15, 2017, 7:54 PM IST
Highlights

ಮಂಗಳೂರು ಐಜಿ (ಪಶ್ಚಿಮ ವಲಯ) ಕಚೇರಿಯಲ್ಲಿ ಡಿವೈಎಸ್‌'ಪಿ ಆಗಿದ್ದ ಎಂ.ಕೆ.ಗಣಪತಿ ಅವರು ಕಳೆದ ವರ್ಷ ಜುಲೈ 7 ರಾತ್ರಿ ಮಡಿಕೇರಿಯ ಲಾಡ್ಜ್‌'ವೊಂದರಲ್ಲಿ ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಬಿ' ರಿಪೋರ್ಟ್‌ ಸಲ್ಲಿಸಿದ್ದರು.

ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಅನೇಕರ ವಿರುದ್ಧ ಆರೋಪ ಕೇಳಿಬಂದಿದ್ದ ಮಂಗಳೂರು ಡಿವೈಎಸ್‌'ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯಲು ಅವರ ಸಂಬಂಧಿಕರು ಮುಂದಾಗುತ್ತಿಲ್ಲ. ಇದರಿಂದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾ. ಕೇಶವನಾರಾಯಣ ನೇತೃತ್ವದ ವಿಚಾರಣಾ ಆಯೋಗಕ್ಕೆ ಘಟನೆಗೆ ಸೂಕ್ತ ಕಾರಣಗಳನ್ನು ಕಲೆಹಾಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಸಲ್ಲಿಸಿರುವ ವರದಿಯಲ್ಲಿನ 38 ಮಂದಿ ಸಾಕ್ಷಿಗಳಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಈ ಎಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ, ಘಟನೆ ನಡೆದ ಮಡಿಕೇರಿಯ ವಿನಾಯಕ ಲಾಡ್ಜ್‌'ನ ಸಿಬ್ಬಂದಿ, ಕೆಲ ಪೊಲೀಸ್‌ ಅಧಿಕಾರಿಗಳು, ಎಂ.ಕೆ. ಗಣಪತಿ ಸೋದರ ತಮ್ಮಯ್ಯರಿಂದ ಮಾಹಿತಿ ಕಲೆ ಹಾಕಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗುವಂತೆ ಗಣಪತಿ ತಂದೆ, ಕಿರಿಯ ಸಹೋದರ ಹಾಗೂ ಪತ್ನಿಗೆ ಸಮನ್ಸ್‌ ಜಾರಿ ಮಾಡಿದ್ದರೂ, ಸಮನ್ಸ್‌ ಸ್ವೀಕರಿಸದ ಪರಿಣಾಮವಾಗಿ ಎಲ್ಲ ಸಮನ್ಸ್‌'ಗಳು ಆಯೋಗದ ಕಚೇರಿಗೆ ವಾಪಸ್‌ ಬಂದಿವೆ. 

ಗಣಪತಿ ತಂದೆ ಕುಶಾಲಪ್ಪ ಹಾಗೂ ಮತ್ತೊಬ್ಬ ಸೋದರ ಸಹೋದರ ಮಾಚಯ್ಯ ನೆಲೆಸಿರುವ ಕೊಡಗು ಜಿಲ್ಲೆ ರಂಗ ಸಮುದ್ರದ ಮನೆ ವಿಳಾಸಕ್ಕೆ ಅಂಚೆ ಮೂಲಕ ಸಮನ್ಸ್‌ ಕಳುಹಿಸಲಾಗಿತ್ತು. ಸಮನ್ಸ್‌ ನೀಡಲು ಸ್ಥಳೀಯ ಪೋಸ್ಟ್‌'ಮ್ಯಾನ್‌ ಸತತ ಐದು ಬಾರಿ ಭೇಟಿ ನೀಡಿದರೂ ಮನೆಯಲ್ಲಿ ಯಾರೂ ಇರಲಿಲ್ಲ. ಕೊನೆಗೆ ನೆರೆ ಮನೆಯವರಿಗೆ ಫೋನ್‌ ನಂಬರ್‌ ಕೊಟ್ಟು ಸಂಪರ್ಕಿಸಲು ತಿಳಿಸಲಾಗಿತ್ತು. ಆದರೂ, ಸಮನ್ಸ್‌ ಪಡೆಯುವುದಕ್ಕೆ ಮುಂದಾಗಿಲ್ಲ ಎಂಬುದಾಗಿ ತಿಳಿಸಿ ಸಮನ್ಸನ್ನು ಹಿಂದಿರುಗಿಸಿದ್ದಾರೆ. ಇದರಿಂದಾಗಿ ಪ್ರಕರಣದ ಸಂಬಂಧ ಸೂಕ್ತ ಸಾಕ್ಷ್ಯಗಳ ಸಂಗ್ರಹಕ್ಕೆ ತೊಂದರೆಯಾಗುತ್ತದೆ ಎಂದು ಅಯೋಗದ ಮೂಲಗಳು ತಿಳಿಸಿವೆ.

ಗಣಪತಿ ಪತ್ನಿ ಪಾವನಾ ಮತ್ತು ಪುತ್ರ ನೇಹಾಲ್‌ ನೆಲೆಸಿರುವ ಮಂಗಳೂರು ವಿಳಾಸಕ್ಕೂ ಸಮನ್ಸ್‌ ಕಳುಹಿಸಲಾಗಿದೆ. ಸಮನ್ಸ್‌ ಕಳುಹಿಸಿರುವ ವಿಳಾಸದಲ್ಲಿ ಅವರು ಇಲ್ಲ ಎಂದು ತಿಳಿಸಿ ಸಮನ್ಸ್‌ ವಾಪಸ್‌ ಬಂದಿದೆ. ಮೃತರ ಸಂಬಂಧಿಕರು ವಿಚಾರಣೆಗೆ ಅಗತ್ಯ ಮಾಹಿತಿ ನೀಡದಿದ್ದಲ್ಲಿ ತಪ್ಪಿತಸ್ಥರನ್ನು ಗುರುತಿಸಲು ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ವಕೀಲರೊಬ್ಬರು ತಿಳಿಸಿದ್ದಾರೆ. 

ಮಂಗಳೂರು ಐಜಿ (ಪಶ್ಚಿಮ ವಲಯ) ಕಚೇರಿಯಲ್ಲಿ ಡಿವೈಎಸ್‌'ಪಿ ಆಗಿದ್ದ ಎಂ.ಕೆ.ಗಣಪತಿ ಅವರು ಕಳೆದ ವರ್ಷ ಜುಲೈ 7 ರಾತ್ರಿ ಮಡಿಕೇರಿಯ ಲಾಡ್ಜ್‌'ವೊಂದರಲ್ಲಿ ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ‘ಬಿ' ರಿಪೋರ್ಟ್‌ ಸಲ್ಲಿಸಿದ್ದರು.

ಗಣಪತಿ ಅವರ ಹತ್ಯೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿ, ಸಚಿವ ಕೆ.ಜೆ. ಜಾರ್ಜ್ ಮೇಲೆ ಸಂದೇಹದ ಕತ್ತಿ ತೂಗಿತ್ತು.

ಘಟನೆ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಸಿಐಡಿ ವರದಿಯಲ್ಲಿನ ಎಲ್ಲಾ ಸಾಕ್ಷಿಗಳಿಗೂ ಸಮನ್ಸ್‌ ಜಾರಿ ಮಾಡಲಾಗಿತ್ತು. ಇಲ್ಲಿಯವರೆಗೂ 38 ಸಾಕ್ಷಿಗಳು ಬಂದು ಘಟನೆ ಸಂಬಂಧ ಮಾಹಿತಿ ನೀಡಿದ್ದಾರೆ. ಆದರೆ, ಗಣಪತಿ ತಂದೆ, ಸಹೋದರ, ಹೆಂಡತಿ ಮತ್ತು ಮಗನಿಗೆ ಕಳುಹಿಸಿದ್ದ ಸಮನ್ಸ್‌ ವಾಪಸ್‌ ಆಗಿವೆ. 
- ಶಿವಲಿಂಗೇಗೌಡ, ನ್ಯಾ.ಕೇಶವನಾರಾಯಣ ಆಯೋಗದ ಕಾರ್ಯದರ್ಶಿ

ಅಣ್ಣನನ್ನು ಕಳೆದುಕೊಂಡು ತಂದೆ ಆಸ್ಪತ್ರೆ ಸೇರಿದ್ದಾರೆ. ಅವರನ್ನು ನೋಡಿಕೊಳ್ಳಬೇಕು. ಘಟನೆ ಸಂಬಂಧ ಈಗಾಗಲೇ ಸಿಐಡಿ ಮುಂದೆ ಹಾಜರಾಗಿ ಸಾಕ್ಷ್ಯಗಳನ್ನು ನುಡಿದಿದ್ದೇನೆ. ಆದರೂ ನಮಗೆ ನ್ಯಾಯ ಸಿಕ್ಕಿಲ್ಲ. ಅಲ್ಲದೆ, ಈ ಸಂಬಂಧ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಸಾಕ್ಷಿ ನುಡಿದ ತಕ್ಷಣ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ. 
- ಮಾಚಯ್ಯ, ಗಣಪತಿ ಸಹೋದರ

ವರದಿ: ರಮೇಶ್ ಬನ್ನಿಕುಪ್ಪೆ, ಕನ್ನಡಪ್ರಭ
epaper.kannadaprabha.in

click me!