ವಿಧಾನಮಂಡಲ ನೌಕರರಿಗೆ ಹಣವೂ ಇಲ್ಲ, ಸೈಟೂ ಇಲ್ಲ

Published : Jun 15, 2017, 07:40 PM ISTUpdated : Apr 11, 2018, 01:00 PM IST
ವಿಧಾನಮಂಡಲ ನೌಕರರಿಗೆ ಹಣವೂ ಇಲ್ಲ, ಸೈಟೂ ಇಲ್ಲ

ಸಾರಾಂಶ

* ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯೇ ವಜಾ * ನಿವೇಶನ ನೀಡುವವರೂ ಇಲ್ಲ, ಹಣ ವಾಪಸ್‌ ನೀಡುವವರೂ ಇಲ್ಲ * 2 ದಶಕಗಳಿಂದ ಹಣ ಪಾವತಿಸಿ ನಿವೇಶನಕ್ಕೆ ಕಾಯುತ್ತಿರುವ ನೌಕರರು * 2004ರಲ್ಲಿ ಲಗ್ಗರೆ ಬಳಿ 100 ನೌಕರರು, 200 ಹೊರಗಿನವರಿಗೆ ಸೈಟ್‌ ಹಂಚಿಕೆ * ಕೋಗಿಲು ಬಳಿ ಸೈಟ್‌ ಹಂಚಿಕೆಯಲ್ಲಿ ಭಾರೀ ಅಕ್ರಮ, ಪೂರ್ತಿ ಸೈಟ್‌ ಸಹ ಸದಸ್ಯರಿಗೆ ಹಂಚಿಕೆ

ಬೆಂಗಳೂರು: ಕಳೆದ ಎರಡು ದಶಕಗಳಿಂದ ಹಣ ಪಾವತಿಸಿ ನಿವೇಶನಕ್ಕೆ ಕಾಯುತ್ತಿರುವ ರಾಜ್ಯ ವಿಧಾನಮಂಡಲದ ನೌಕರರಿಗೆ ಸದ್ಯಕ್ಕೆ ಹಣವೂ ಇಲ್ಲ, ನಿವೇಶನವೂ ಸಿಗುವ ಲಕ್ಷಣ ಕಾಣುತ್ತಿಲ್ಲ. ಏಕೆಂದರೆ, ಸಂಘದಲ್ಲಿ ಈಗ ಆಡಳಿತ ಮಂಡಳಿಯೇ ಇಲ್ಲ. ಹಣ ಪಾವತಿಸಿದ ನೌಕರರಿಗೆ ನಿವೇಶನ ನೀಡುವವರೂ ಇಲ್ಲ. ಹಣ ವಾಪಸ್‌ ನೀಡುವವರು ಮೊದಲೇ ಇಲ್ಲ. ಸುಮಾರು ರು.50 ಕೋಟಿಗೂ ಹೆಚ್ಚಿನ ಅಕ್ರಮ ಆರೋಪಕ್ಕೆ ಗುರಿಯಾಗಿದ್ದ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯನ್ನು ಸಹಕಾರ ಕಾಯ್ದೆ 1959 ನಿಯಮ ಕಲಂ 29 ಸಿ ಪ್ರಕಾರ ಅಧ್ಯಕ್ಷರೂ ಸೇರಿದಂತೆ ಆರು ಮಂದಿ ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಇದರಿಂದ ಸಂಘಕ್ಕೆ ಚುನಾವಣೆಯೂ ನಡೆಯುತ್ತಿಲ್ಲ.

ಈಗಾಗಲೇ ತಲಾ ರು.8 ಲಕ್ಷದವರೆಗೂ ಹಣ ಪಾವತಿಸಿರುವ ನೌಕರರಿಗೆ ನಿವೇಶನವೂ ಸಿಗುತ್ತಿಲ್ಲ. ಹೋಗಲಿ ರು.50ಕೋಟಿಗಳ ಆರೋಪಿಗಳ ವಿರುದ್ಧ ಶಿಕ್ಷೆಯಾದರೂ ಆಗುತ್ತಿದೆಯೇ ಆದೂ ಇಲ್ಲ. ಹೀಗಾಗಿ ನೌಕರರ ಸಂಘದ ಪದಾಧಿಕಾರಿಗಳು ಹಿರಿಯ ಅಧಿಕಾರಿ ಗಣೇಶ್‌ ಎಂಬುವರ ನೇತೃತ್ವದಲ್ಲಿ ಅಕ್ರಮದ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಈ ಅಧಿಕಾರಿಗಳ ತಂಡ ಆರೋಗ್ಯ ಸಚಿವರ ವಿಶೇಷ ಅಧಿಕಾರಿ ಪರಶಿವಮೂರ್ತಿ, ವಿಧಾನಪರಿಷತ್‌ ಕಾರ್ಯದರ್ಶಿ ಶ್ರೀನಿವಾಸ್‌ ಸೇರಿದಂತೆ 9 ಮಂದಿಯನ್ನು 13 ಮಂದಿ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಲು ಜಂಟಿ ನಿಬಂಧಕರಿಗೆ ಮನವಿ ಸಲ್ಲಿಸಿದ್ದಾರೆ. ಇದರೊಂದಿಗೆ ಸಂಘದ ಅಕ್ರಮಕ್ಕೆ ಮತ್ತೆ ಜೀವ ಬರುವ ಸಾಧ್ಯತೆ ಇದೆ.

ಏನಿದು ಅಕ್ರಮ?: ನೌಕರರಿಗೆ ನಿವೇಶನ ಭಾಗ್ಯ ದೊರಕಿಸಲು ರಾಜ್ಯ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ 1982ರಲ್ಲೇ ಸ್ಥಾಪಿಸಲಾಗಿತ್ತು. ಮೊದಲಿಗೆ ಯಶವಂತಪುರದ ಲಗ್ಗರೆ ಬಳಿ 2004ರಲ್ಲಿ ಬಡಾವಣೆ ನಿರ್ಮಿಸಿ 300 ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಅದರಲ್ಲಿ 100 ನೌಕರರಿಗೂ 200 ಹೊರಗಿನವರಿಗೂ ಹಂಚಿಕೆ ಮಾಡಲಾಗಿತ್ತು. ಅಂದರೆ ಸದಸ್ಯರನ್ನು ಬಿಟ್ಟು ಹೊರಗಿನವರಿಗೇ ಹೆಚ್ಚಿನ ನಿವೇಶನ ನೀಡಿ ಆರಂಭದಲ್ಲೇ ನಿಯಮ ಉಲ್ಲಂಘಿಸಲಾಗಿತ್ತು. 

ನಂತರ 2004ರಲ್ಲಿ ಯಲಹಂಕದ ಕೋಗಿಲು ಬಳಿ 3 ಬಡಾವಣೆ ನಿರ್ಮಿಸಿ 500 ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಲಾಯಿತು. ಇದಕ್ಕಾಗಿ ಭಾರ್ಗವ್‌, ಜಯಸೂರ್ಯ ಎಂಬ ಡೆವಲಪರ್‌'ಗಳ ಜತೆ ಒಪ್ಪಂದ ಆಗಿತ್ತು. ನಂತರ ನಿವೇಶನ ಪಡೆಯಲು ನಿರ್ಧರಿಸಿ, ಅದಕ್ಕಾಗಿ ರು.67ಕೋಟಿ ನೀಡಲು ಒಪ್ಪಿಗೆ ನೀಡಲಾಗಿತ್ತು. 2005ರ ವೇಳೆಗೆ ಒಪ್ಪಂದ ಬದಲಿಸಿ ಡೆವೆಲಪರ್‌ಗಳಿಂದ ಬಿಡಿ ನಿವೇಶನಗಳ ಬದಲು 10 ಲಕ್ಷ ಚದರ ಅಡಿ ಅಳತೆಯ ನಿವೇಶನಗಳ ಜಾಗ ಪಡೆಯಲು ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಡೆವಲಪರ್‌ಗಳಿಗೆ ರು.67ಕೋಟಿ ನೀಡುವ ಬದಲು ರು.85 ಕೋಟಿಗಳನ್ನು ನೀಡಲಾಗಿದೆ. ಆದರೆ, ಡೆವಲಪರ್‌ಗಳು ನೀಡಿರುವುದು ಬರೀ 5,00,000 ಚದರ ಅಡಿ ನಿವೇಶನ ಮಾತ್ರ. ಈ ಬಗ್ಗೆ ಹಿರಿಯ ಅಧಿಕಾರಿ ಗಣೇಶ್‌ ಎಂಬುವರು 2011ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ತನಿಖೆಗೆ ಸೂಚಿಸಿತ್ತು. ನಂತರ ನಡೆದ ತನಿಖೆಯಲ್ಲಿ ಡೆವಲಪರ್‌ಗಳಿಗೆ ಪಾವತಿಸಿರುವ ಹೆಚ್ಚುವರಿ 22 ಕೋಟಿ, 1.7 ಕೋಟಿ ಆದಾಯ ತೆರಿಗೆ ವಂಚನೆ ಸೇರಿದಂತೆ ರು.50 ಕೋಟಿಗಳಷ್ಟು ಅಕ್ರಮ ನಡೆದಿರುವುದು ಪತ್ತೆಯಾಗಿತ್ತು.

ಎಲ್ಲಾ ನಿವೇಶನಗಳೂ ಅನ್ಯರಿಗೆ: ಇತ್ತೀಚಿಗೆ ಬೆಂಗಳೂರು ಉತ್ತರ ತಾಲೂಕು ಯಲಹಂಕ ಹೋಬಳಿಯ ಗಸ್ತಿ ಕೆಂಪನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಮೂರು ಹಂತದ ಬಡಾವಣೆಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ರಚಿಸಲಾಗಿರುವ 118 ನಿವೇಶನಗಳಲ್ಲಿ ಎಲ್ಲವನ್ನೂ ಸಹ ಸದಸ್ಯರಿಗೇ ನೀಡಲಾಗಿದೆ. ನೈಜ ಸದಸ್ಯರಿಗೆ ಒಂದಾದರೂ ನಿವೇಶನ ನೀಡುವ ಪ್ರಯತ್ನವಾಗಿಲ್ಲ. ಸಹಕಾರ ಸಂಘಗಳ ಕಾಯ್ದೆಯ 1959ರ ಕಲಂ ಬಿ ಹಾಗೂ ಸರ್ಕಾರಿ ಆದೇಶದ ಪ್ರಕಾರ ಸಂಘದ ಒಟ್ಟು ಸದಸ್ಯರ ಶೇ. 10ರಷ್ಟು ಮಾತ್ರ ಸಹ ಸದಸ್ಯರ ನೋಂದಣಿಗೆ ಅವಕಾಶವಿದೆ. ಆದರೆ, ಇಲ್ಲಿ ಸದಸ್ಯರಿಗಿಂತ ಸಹ ಸದಸ್ಯರ ಸಂಖ್ಯೆಯೇ ಹೆಚ್ಚಾಗಿದೆ. ಅಷ್ಟೇ ಅಲ್ಲ. ರಚಿಸಿರುವ ನಿವೇಶನಗಳಲ್ಲಿ ಶೇ.10ರಷ್ಟುನಿವೇಶನ ಮಾತ್ರ ಹಂಚಿಕೆ ಮಾಡಬೇಕು. ಆದರೆ, ಈ ಸಂಘದಲ್ಲಿ ಶೇ.100 ನಿವೇಶನಗಳನ್ನು ಸಹ ಸದಸ್ಯರಿಗೇ ನೀಡ ಲಾಗಿದೆ. 2004ರಿಂದ 200ಕ್ಕೂ ಹೆಚ್ಚು ಸದಸ್ಯರು ತಲಾ 7.5 ಲಕ್ಷ ರು. ಪಾವತಿಸಿದ್ದಾರೆ. ಅವರಲ್ಲಿ ಯಾರಿಗೂ ನಿವೇಶನ ಸಿಕ್ಕಿಲ್ಲ. ಹೀಗೆ ಹಣ ಪಾವತಿಸಿದವರಲ್ಲಿ ನಾಗೇಶ್‌ ಮತ್ತು ದಿನೇಶ್‌ ಎಂಬ ಇಬ್ಬರು ನೌಕರರು ಸತ್ತೇ ಹೋಗಿದ್ದಾರೆ. ಆದರೆ, ಅವರ ಕುಟುಂಬಕ್ಕಾದರೂ ನಿವೇಶನ ನೀಡುವ ಪ್ರಯತ್ನ ಆಗಿಲ್ಲ. 

ಸದಸ್ಯರಿಗಿಂತ ಸಹ ಸದಸ್ಯರಿಗೆ ನಿವೇಶನ ನೀಡಿರುವುದು ನಿಜ. ಏಕೆಂದರೆ, ಅವರಿಗೆ ಜೇಷ್ಠತೆ ಇದೆ. ಹಾಗೆಯೇ ಹೆಚ್ಚು ಹಣ ಪಾವತಿಸಿದ್ದಾರೆ. ಇನ್ನು ಹಿಂದಿನ ಆಡಳಿತ ಮಂಡಳಿ ಮಾಡಿದ ತಪ್ಪಿನಿಂದಾಗಿ ಈಗಿನ ಮಂಡಳಿ ಏನೂ ಮಾಡಲಾಗದಂತಾಗಿದೆ. ಸದ್ಯದಲ್ಲೇ ಚುನಾವಣೆ ನಡೆಯಬಹುದು. ಆಗ ನಿವೇಶನ ನೀಡಲಾಗುತ್ತದೆ.
- ಎನ್‌.ನರಸಿಂಹಮೂರ್ತಿ, ರಾಜ್ಯ ವಿಧಾನಮಂಡಲ ನೌಕರರ ಸಹಕಾರ ಸಂಘದ ಅಧ್ಯಕ್ಷ

ವರದಿ: ಶಿವಕುಮಾರ್ ಬೆಳ್ಳಿತಟ್ಟೆ, ಕನ್ನಡಪ್ರಭ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
ಜಿ ರಾಮ್‌ ಜಿಗೆ ರಾಜ್ಯ ಶೇ.40ರಷ್ಟು ಪಾಲು ನೀಡಲಾಗದು : ಡಿಕೆಶಿ