
ಬೆಂಗಳೂರು: ಉದ್ಯಾನನಗರಿಯ ಬಡವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ಒದಗಿಸಲು ರಾಜ್ಯ ಸರ್ಕಾರ ಪ್ರಾರಂಭಿಸಿರುವ ‘ಇಂದಿರಾ ಕ್ಯಾಂಟೀನ್’ನಲ್ಲಿ ಈಗ ಸಾಂಬಾರ್ ಸಮಸ್ಯೆ ಶುರುವಾಗಿದ್ದು ಇದರ ಪರಿಣಾಮ ಸದ್ಯದಲ್ಲೇ ಕ್ಯಾಂಟೀನ್’ನಲ್ಲಿ ನೀಡುತ್ತಿರುವ ಅನ್ನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.
ಹೌದು, ನಗರದಲ್ಲಿ ಕಳೆದ ಆಗಸ್ಟ್ 16ರಿಂದ ಶುರುವಾಗಿರುವ 101 ಕ್ಯಾಂಟೀನ್’ಗಳಲ್ಲೂ ಸಾಂಬಾರ್ ಕೊರತೆಯಿಂದ ಸಾರ್ವಜನಿಕರು ಅನ್ನವನ್ನು ಪ್ಲೇಟ್’ಗಳಲ್ಲೇ ಬಿಡುತ್ತಿದ್ದಾರೆ. 2ನೇ ಬಾರಿ ಸಾಂಬಾರ್ ಕೇಳಿಕೊಂಡು ಹೋಗುವ ಸಾರ್ವಜನಿಕರಿಗೆ ಕ್ಯಾಂಟೀನ್ ನಿರ್ವಾಹಕರು ಸಾಂಬಾರ್ ಹಾಕುತ್ತಿಲ್ಲ. ಇದರಿಂದ ಪ್ರಸ್ತುತ ನಿಗದಿ ಮಾಡಿರುವ ಪ್ರಮಾಣಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಮಾಣದ ಸಾಂಬಾರ್ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದು ಕ್ಯಾಂಟೀನಲ್ಲಿ ಕ್ಯಾಂಟೀನ್ ನಿರ್ವಾಹಕರು ಹಾಗೂ ಸಾರ್ವಜನಿಕರ ನಡುವೆ ಜಗಳಕ್ಕೂ ಕಾರಣವಾಗುತ್ತಿದೆ. ಹೆಚ್ಚುವರಿ ಸಾಂಬಾರ್ ನೀಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಆಹಾರ ಪೂರೈಸುತ್ತಿರುವ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಗುತ್ತಿಗೆದಾರರು, ಸಾಂಬಾರ್ ನಿಗದಿಗಿಂತ ಹೆಚ್ಚು ನೀಡಿದರೆ ನಷ್ಟ ಭರಿಸಬೇಕಾಗುತ್ತದೆ. ಗುತ್ತಿಗೆಯಲ್ಲಿ ನೀವು ಹೇಳಿರುವ ಆಹಾರ ಪ್ರಮಾಣಕ್ಕೆ ತಕ್ಕಂತೆ ನಾವು ದರ ಕೋಟ್ ಮಾಡಿದ್ದೆವು. ಹೆಚ್ಚುವರಿ ಅನ್ನ ಅಥವಾ ಸಾಂಬಾರ್ ನೀಡ ಬೇಕಾದರೆ ನಮಗೆ ಹೆಚ್ಚುವರಿ ವೆಚ್ಚ ತಗಲುತ್ತದೆ. ಆ ವೆಚ್ಚ ಭರಿಸಲು ನೀವು ಸಿದ್ಧರಿಲ್ಲ. ಹೀಗಾಗಿ 2ನೇ ಬಾರಿ ಸಾಂಬಾರ್ ಹಾಕುವುದಿಲ್ಲ ಎಂದು ಗುತ್ತಿಗೆದಾರರು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಹೀಗಾಗಿ ಬಿಬಿಎಂಪಿಯು ಕ್ಯಾಂಟೀನ್’ಗಳಲ್ಲಿ ಪೂರೈಸುತ್ತಿರುವ ಅನ್ನದ ಪ್ರಮಾಣ ಕಡಿಮೆ ಮಾಡಿ ಸಾಂಬಾರ್ ಪ್ರಮಾಣವನ್ನು ತುಸು ಹೆಚ್ಚಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದು, ಅನ್ನ ಕಡಿಮೆ ಮಾಡಿ ಸಾಂಬಾರ್ ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಿದ್ದೇವೆ. ಎಂದು ಮಾಹಿತಿ ನೀಡಿದ್ದಾರೆ.
ಅನ್ನದ ಪ್ರಮಾಣ 50 ಗ್ರಾಂ ಇಳಿಕೆ?:
ಪ್ರಸ್ತುತ ಮಧ್ಯಾಹ್ನದ ಊಟ ಹಾಗೂ ರಾತ್ರಿ ಊಟಕ್ಕೆ 3೦೦ಗ್ರಾಂ ಅನ್ನ, 150 ಗ್ರಾಂ ಸಾಂಬಾರ್, 100 ಗ್ರಾಂ ಮೊಸರನ್ನ ಸೇರಿದಂತೆ 550 ಗ್ರಾಂ ಆಹಾರ ನೀಡುತ್ತಿದ್ದೇವೆ. ಬಹುತೇಕ ಕಡೆ 2ನೇ ಬಾರಿ ಸಾಂಬಾರ್ ಕೇಳಿದರೆ ಕ್ಯಾಂಟೀನ್ ನಿರ್ವಾಹಕರು ನೀಡುತ್ತಿಲ್ಲ. ಹೀಗಾಗಿ ಖಾಲಿ ಅನ್ನ ಊಟ ಮಾಡಲು ಸಾಧ್ಯವಾಗದೇ ಬಹುತೇಕರು ತಟ್ಟೆಯಲ್ಲೇ ಊಟ ಬಿಡುತ್ತಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸಾರ್ವಜನಿಕರಿಂದ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ. ಜನರು 3೦೦ ಗ್ರಾಂ ಬದಲಿಗೆ 250 ಗ್ರಾಂ ಅನ್ನ ನೀಡಿ 200 ಗ್ರಾಂ ನಷ್ಟು ಸಾಂಬಾರ್ ನೀಡಿ, ಇದರಿಂದ ಹೊಟ್ಟೆ ತುಂಬಾ ಆಹಾರವೂ ದೊರೆತಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿ ದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ. ಈಗಾಗಲೇ ಸಾಂಬಾರ್ ಅನ್ನ ಇಂತಿಷ್ಟೇ ನೀಡ ಬೇಕು ಎಂದು ನಿಗದಿಮಾಡಿ ಟೆಂಡರ್ ಮಾಡಿದ್ದೇವೆ. ಈಗ ಹೆಚ್ಚುವರಿ ಸಾಂಬಾರ್ ನೀಡಬೇಕು ಎಂದರೆ ಟೆಂಡರ್ ದರ ಹೆಚ್ಚಳ ಮಾಡಬೇಕು. ಇದಕ್ಕೆ ಸರ್ಕಾರದ ಅಂಗೀಕಾರ ಪಡೆಯಬೇಕಾದ ಅನಿವಾರ್ಯತೆಯಿದೆ. ಪ್ರಸ್ತುತ ಅನ್ನವನ್ನು ತಟ್ಟೆಗಳಲ್ಲಿ ಬಿಡುತ್ತಿರುವುದರಿಂದ ಅನ್ನದ ಪ್ರಮಾಣ ಕಡಿಮೆಯಾದರೆ ಸಮಸ್ಯೆಯಾಗದು, ಮುಂದಿನ ವಾರ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದರು.
ಅಂತಿಮ ಹಂತದಲ್ಲಿ 11 ಅಡುಗೆ ಮನೆ
ಅಡುಗೆ ಮನೆ ಸಿದ್ಧವಾಗುವ ಮೊದಲೇ ಕ್ಯಾಂಟೀನ್’ಗಳ ಕಾರ್ಯಾರಂಭ ಮಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿಯು ಕೊನೆಗೂ ಅಡುಗೆ ಮನೆ ಸಿದ್ಧಗೊಳಿಸುವ ಪ್ರಕ್ರಿಯೆಗೆ ವೇಗ ನೀಡಿದೆ. ಈಗಾಗಲೇ 11 ಅಡುಗೆ ಮನೆ ಕಾಮಗಾರಿ ಪೂರ್ಣಗೊಳ್ಳುತ್ತಿದು, ಒಂದು ವಾರದಲ್ಲಿ ಅಡುಗ ಮನೆಗಳು ಕಾರ್ಯಾರಂಭ ಮಾಡಲಿವೆ ಎಂದು ಆಯುಕ್ತ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.