
ದುಬೈ(ಜೂ.07): ಇರಾನ್'ನೊಂದಿಗೆ ಸಂಬಂಧ ವೃದ್ಧಿ ಮತ್ತು ಐಸಿಸ್ ಉಗ್ರರಿಗೆ ನೀಡುತ್ತಿರುವ ನೆರವಿನ ಹಿನ್ನೆಲೆಯಲ್ಲಿ ಕತಾರ್ ಮೇಲೆ ಅರಬ್ ದೇಶಗಳು ಬಹಿಷ್ಕಾರ ಹಾಕಿದ ಬೆನ್ನಲ್ಲೇ, ಈ ಬಿಕ್ಕಟ್ಟು ಶಮನಕ್ಕೆ ಕುವೈತ್ ಮಧ್ಯಸ್ಥಿಕೆ ವಹಿಸಲು ಯತ್ನಿಸುತ್ತಿದೆ ಎಂದು ಕತಾರ್ ವಿದೇಶಾಂಗ ಸಚಿವ ಹೇಳಿದ್ದಾರೆ.
ಸೋಮವಾರವಷ್ಟೇ 7 ದೇಶಗಳು ಕತಾರ್ ಮೇಲೆ ಬಹಿಷ್ಕಾರ ಹೇರಿದ್ದವು. ಅಲ್ಲದೆ, ತಮ್ಮ ಭೂ ಪ್ರದೇಶ, ಸಮುದ್ರ ಮತ್ತು ವಿಮಾನ ಸೇವೆಗಳನ್ನು ಕತಾರ್‌ಗೆ ನೀಡದಂತೆ ಆದೇಶ ಹೊರಡಿಸಿದ್ದವು. ಇದು ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ದುಬೈ: ಸೌದಿ ಅರೇಬಿಯಾ ಸೇರಿ 7 ದೇಶಗಳು, ಕತಾರ್ ಜೊತೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವು ದರಿಂದಾಗಿ ಭಾರತೀಯ ವಲಸಿಗರು ಮತ್ತು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಅಪಾಯ ಎದುರಾಗಿದೆ.
ಕತಾರ್‌ನಲ್ಲಿ ಸುಮಾರು 7 ಲಕ್ಷ ಭಾರತೀಯರು ವಾಸಿಸುತ್ತಿದ್ದು, ಪ್ರತಿ ವರ್ಷ ಸುಮಾರು 25870 ಕೋಟಿ ರು.ಗಳನ್ನು ಭಾರತಕ್ಕೆ ರವಾನಿಸುತ್ತಿದ್ದಾರೆ.
ಆದರೆ ಇದೀಗ ನೆರೆಯ ಕೊಲ್ಲಿ ರಾಷ್ಟ್ರಗಳು ಕತಾರ್‌ಗೆ ಎಲ್ಲಾ ವಿಮಾನಯಾನ ಮತ್ತು ಸಮುದ್ರಯಾನ ಮಾರ್ಗ ಬಂದ್ ಮಾಡುವುದಾಗಿ ಹೇಳಿರುವುದರಿಂದಾಗಿ, ಆ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಭಾರತೀಯರ ಉದ್ಯೋಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಭೀತಿ ಎದುರಾಗಿದೆ.
ಆದರೆ ತಕ್ಷಣಕ್ಕೆ ರಾಜತಾಂತ್ರಿಕ ನಿರ್ಬಂಧದಿಂದ ಭಾರತೀಯ ಸಮುದಾಯ ಆತಂಕಕ್ಕೆ ಒಳಗಾಗಿಲ್ಲ. ಜನರು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿ ದ್ದಾರೆ. ಪರಿಸ್ಥಿತಿಯ ಕುರಿತು ಭಾರತೀಯರು ವಿಚಾರಣೆ ನಡೆಸುತ್ತಿರುವುದರಿಂದ ಭಾರತದ ಅಧಿಕಾರಿಗಳು ಆಹಾರ ಪೂರೈಕೆಯ ಬಗ್ಗೆ, ದೋಹಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಹೋಗುವ ವಿಮಾನಗಳ ಮೇಲೆ ನಿಗಾವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕತಾರ್‌ನಲ್ಲಿ ಭಾರತೀಯರ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳು ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ಅವಲೋಕಿಸುತ್ತಿದೆ. ಹೀಗಾಗಿ ಈಗಲೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆದರೆ, ಅಲ್ಲಿರುವ ಭಾರತೀಯರ ಬಗ್ಗೆ ನಮ್ಮ ಕಾಳಜಿ ಇದೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.