ಡಿಸೆಂಬರ್'ಗೆ ಓಕಳಿಪುರ ಕಾರಿಡಾರ್ ಮುಕ್ತ: ಜಾರ್ಜ್

By Suvarna Web DeskFirst Published Jun 7, 2017, 9:17 AM IST
Highlights

ಒಂದು ಮಾರ್ಗದ ಅಂಡರ್‌ ಪಾಸ್‌ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ಭಾಗದ ಕಾಮಗಾರಿ ಆರಂಭಕ್ಕೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಒಂದು ಭಾಗದ ಅಂಡರ್‌ ಪಾಸ್‌ಗೆ ಚಾಲನೆ ನೀಡಿರುವುದರಿಂದ ಉಳಿದ ಕಾಮಗಾರಿ ತ್ವರಿತಗೊಳಿಸಲು ಸಹಕಾರಿಯಾಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. 

ಬೆಂಗಳೂರು(ಜೂನ್ 07): ಓಕಳೀಪುರದ ಬಳಿ ರು.102 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ 8 ಪಥದ ಸಿಗ್ನಲ್‌ ಫ್ರೀ ಕಾರಿಡಾರ್‌ ಡಿಸೆಂಬರ್‌ ವೇಳೆಗೆ ಜನರ ಬಳಕೆಗೆ ಮುಕ್ತವಾಗಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು. 

ರಾಜಾಜಿನಗರದಿಂದ ಮಲ್ಲೇಶ್ವರ ಹಾಗೂ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಅಂಡರ್‌ ಪಾಸ್‌ಗೆ ಮಂಗಳವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜಾಜಿನಗರದಿಂದ ಮಲ್ಲೇಶ್ವರ , ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಸಿಗ್ನಲ್‌ ಫ್ರೀ ಕಾರಿಡಾರ್‌ ನಿರ್ಮಾಣದಿಂದ ಸಂಚಾರ ದಟ್ಟಣೆ ನಿಯಂತ್ರಣವಾಗಲಿದೆ ಎಂದು ಹೇಳಿದರು.

ಒಂದು ಮಾರ್ಗದ ಅಂಡರ್‌ ಪಾಸ್‌ ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ಭಾಗದ ಕಾಮಗಾರಿ ಆರಂಭಕ್ಕೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಒಂದು ಭಾಗದ ಅಂಡರ್‌ ಪಾಸ್‌ಗೆ ಚಾಲನೆ ನೀಡಿರುವುದರಿಂದ ಉಳಿದ ಕಾಮಗಾರಿ ತ್ವರಿತಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಗ್ನಲ್‌ ಫ್ರೀ ಕಾರಿಡಾರ್‌ ಬಗ್ಗೆ ಕಾಳಜಿ ವಹಿಸಿ ಕಾಲಕಾಲಕ್ಕೆ ಕಾಮಗಾರಿಯ ಪ್ರಗತಿಯ ಬಗ್ಗೆ ಮಾಹಿತಿ ತರಿಸಿಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಆದ್ದರಿಂದ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ನಗರ ಪ್ರದರ್ಶನ ವೇಳೆಯಲ್ಲಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಎಂದು ತಿಳಿಸಿದರು. 

ಮೇಯರ್‌ ಜಿ. ಪದ್ಮಾವತಿ ಮಾತನಾಡಿ, ಅನೇಕ ವರ್ಷಗಳಿಂದ ಓಕಳೀಪುರ ಬಳಿ ಸಂಚಾರ ದಟ್ಟಣೆಯಾಗುತ್ತಿದ್ದು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಸಿಗ್ನಲ್‌ ಫ್ರೀ ಕಾರಿಡಾರ್‌ ಪೂರ್ಣವಾಗಿದ್ದು, ಸಂಚಾರ ದಟ್ಟಣೆ ಸಂಪೂರ್ಣ ನಿವಾರಣೆಯಾಗಲಿದೆ. ಈ ಕಾಮಗಾರಿಗೆ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃದ್ಧಿ ಸಚಿವರು ವಿಶೇಷ ಕಾಳಜಿ ವಹಿಸಿರುವುದರಿಂದ ಕಾಮಗಾರಿ ತ್ವರಿಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ರಮೇಶ್‌ ಸೇರಿ ದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

ಕಾಮಗಾರಿ ಸಂಬಂಧ ರೈಲ್ವೆ ಇಲಾಖೆಗೆ ಸೇರಿದ ಭೂಸ್ವಾಧೀನಕ್ಕೆ .250 ಕೋಟಿ ನೀಡಲಾಗಿದೆ. ಕಾಮಗಾರಿ ಅಭಿವೃದ್ಧಿಗಾಗಿ .102 ಕೋಟಿ ವೆಚ್ಚ ಮಾಡಲಾಗುತ್ತಿದೆ. ಡಿಸೆಂಬರ್‌ ವೇಳೆಗೆ ಜನರ ಬಳಕೆಗೆ ಮುಕ್ತವಾಗಲಿದೆ. 
- ಕೆ.ಟಿ. ನಾಗರಾಜ್‌, ಮುಖ್ಯ ಎಂಜಿನಿಯರ್‌, ಮೂಲಸೌಕರ್ಯ ಮತ್ತು ಯೋಜನೆ ವಿಭಾಗ

ಕನ್ನಡಪ್ರಭ ವಾರ್ತೆ
eaper.kannadaprabha.in

click me!