
ನವದೆಹಲಿ: ದಶಕಗಳ ಹಿಂದೆ ತನ್ನನ್ನು ‘ಹಾವಾಡಿಗರ ದೇಶ’ ಎಂದು ಹೀಯಾಳಿಸುತ್ತಿದ್ದ ಜಗತ್ತಿನ ಹಲವು ದೇಶಗಳನ್ನೇ ಶ್ರೀಮಂತಿಕೆಯಲ್ಲಿ ಭಾರತ ಹಿಂದಿಕ್ಕಿದೆ.
ಭಾರತದಲ್ಲಿ ಸದ್ಯ 2.45 ಲಕ್ಷ ‘ಮಿಲಿಯನೇರ್’ (ರುಪಾಯಿ ಲೆಕ್ಕದಲ್ಲಾದರೆ, 6.5 ಕೋಟಿಗಿಂತ ಅಧಿಕ ಆಸ್ತಿ ಹೊಂದಿದವರು)ಗಳು ಇದ್ದಾರೆ. ಭಾರತೀಯರು ಒಟ್ಟಾರೆ 325 ಲಕ್ಷ ಕೋಟಿ ರು.ನಷ್ಟು ಆಸ್ತಿ ಹೊಂದಿದ್ದಾರೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದರ ವರದಿ ತಿಳಿಸಿದೆ.
ವಾರ್ಷಿಕ ಶೇ.7.5ರ ಪ್ರಗತಿ ದರದೊಂದಿಗೆ 2022ರ ವೇಳೆಗೆ ಭಾರತೀಯರ ಒಟ್ಟಾರೆ ಆಸ್ತಿ ಮೌಲ್ಯ 461 ಲಕ್ಷ ಕೋಟಿ ರು.ಗೆ ತಲುಪಬಹುದು. ಮಿಲಿಯನೇರ್‌ಗಳ ಸಂಖ್ಯೆ 3.72 ಲಕ್ಷಕ್ಕೆ ಮುಟ್ಟಬಹುದು ಎಂದು ಕ್ರೆಡಿಟ್ ಸುಯಿಸ್ ಸಂಸ್ಥೆಯ ಜಾಗತಿಕ ಸಿರಿವಂತಿಕೆ ವರದಿ ತಿಳಿಸಿದೆ.
2000ನೇ ಇಸ್ವಿಯಿಂದ ಜಾಗತಿಕವಾಗಿ ಶ್ರೀಮಂತಿಕೆಯ ಏರಿಕೆ ದರ ಸರಾಸರಿ ಶೇ.6ರಷ್ಟಿದ್ದರೆ, ಭಾರತದಲ್ಲಿ ಅದು ಶೇ.9.9ರ ವೇಗದಲ್ಲಿದೆ. ಶ್ರೀಮಂತಿಕೆ ಹೆಚ್ಚಿಸಿಕೊಳ್ಳುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ. ಭಾರತ ಶ್ರೀಮಂತವಾಗುತ್ತಿದೆಯಾದರೂ, ಅದರ ಲಾಭ ಪ್ರತಿಯೊಬ್ಬರಿಗೂ ಸಿಗುತ್ತಿಲ್ಲ. ದೇಶದ ಶೇ.92ರಷ್ಟು ವಯಸ್ಕರ ಸಂಪತ್ತು ಇನ್ನೂ 10 ಸಾವಿರ ಡಾಲರ್ (6.5 ಲಕ್ಷ ರು.)ಗಿಂತ ಕೆಳಗಿದೆ ಎಂದು ವರದಿ ಹೇಳುತ್ತದೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.0.5ರಷ್ಟು ವಯಸ್ಕರು ಮಾತ್ರ 65 ಲಕ್ಷ ಕೋಟಿ ರು.ಗಿಂತ ಅಧಿಕ ಆಸ್ತಿ ಹೊಂದಿದ್ದಾರೆ. ಅಂಥವರ ಸಂಖ್ಯೆ 42 ಲಕ್ಷ. ಭಾರತೀಯರು ತಮ್ಮ ಸಂಪತ್ತನ್ನು ರಿಯಲ್ ಎಸ್ಟೇಟ್ ಹಾಗೂ ಆಸ್ತಿಯಂತಹ ಕ್ಷೇತ್ರಗಳಲ್ಲಿ ತೊಡಗಿಸಿದ್ದಾರೆ. ಎಂದು ವರದಿ ಹೇಳಿದೆ.
ಜಾಗತಿಕವಾಗಿ ಪ್ರತಿ ವಯಸ್ಕನ ಆಸ್ತಿ ಸಿರಿವಂತಿಕೆಯಲ್ಲಿ ಸ್ವಿಜರ್ಲೆಂಡ್ ಮೊದಲ ಸ್ಥಾನದಲ್ಲೇ ಇದೆ. ಅಲ್ಲಿ ಈ ಪ್ರಮಾಣ 3.5 ಕೋಟಿ ರು. ಇದೆ. ಆಸ್ಟ್ರೇಲಿಯಾ (2.6 ಕೋಟಿ ರು.) ಹಾಗೂ ಅಮೆರಿಕ (2.53 ಕೋಟಿ ರು.) ಇದೆ ಎಂದು ವರದಿ ಹೇಳುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.