
ಟೊಕಿಯೋ(ಏ.24): ಸಮುದ್ರಯಾನ ಭಾರತೀಯರಿಗೆ ನಿಷಿದ್ಧವಿದ್ದ ಕಾಲವೊಂದಿತ್ತು. ಆದರೆ ಕಾಲಾನಂತರದಲ್ಲಿ ಸಪ್ತ ಸಾಗರಗಳನ್ನು ದಾಟಿ ವಿಭಿನ್ನ ನೆಲೆಗಳಿಗೆ ಕಾಲಿಟ್ಟ ಭಾರತೀಯ ಅಲ್ಲಿಯೂ ತನ್ನ ಸಂಸ್ಕೃತಿ, ಭಾಷೆಯ ಪ್ರಬುದ್ಧತೆಯ ಮೂಲಕ ತನ್ನ ಪ್ರಭಾವ ಬೀರಿದ.
ವಿದೇಶದಲ್ಲಿ ಪ್ರಭಾವ ಬೀರಿದ ಅನೇಕ ಭಾರತೀಯರು ಇತಿಹಾಸದಲ್ಲಿ ಕಾಣ ಸಿಗುತ್ತಾರೆ. ಈಗಲೂ ವಿಶ್ವದ ಬಹುತೇಕ ದೇಶಗಳ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಅಮೆರಿಕ , ಬ್ರಿಟನ್, ಕೆನಡಾ ಹೀಗೆ ವಿಶ್ವದ ಪ್ರಭಾವಿ ರಾಷ್ಟ್ರಗಳ ರಾಜಕೀಯಲ್ಲಿ ಅನೇಕ ಭಾರತೀಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅದರಂತೆ ಜಪಾನ್‌ನ ಚುನಾವಣೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೋರ್ವ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಜಪಾನ್ ರಾಜಧಾನಿ ಟೊಕಿಯೋದ ಎಡೋಗ್ವಾ ವಾರ್ಡ್ ಅಸೆಂಬ್ಲಿ ಚುನಾವಣೆಯಲ್ಲಿ ಭಾರತೀಯ ಮೂಲದ ಪುರಾಣಿಕ್ ಯೋಗೇಂದ್ರ ಜಯ ಗಳಿಸಿದ್ದಾರೆ.
ಯೋಗಿ ಎಂದೇ ಖ್ಯಾತನಾಮರಾಗಿರುವ 41 ವರ್ಷದ ಪುರಾಣಿಕ್ ಯೋಗೇಂದ್ರ, ಒಟ್ಟು 6,477 ಮತಗಳನ್ನು ಪಡೆಯುವ ಮೂಲಕ ಎಡೋಗ್ವಾ ವಾರ್ಡ್ ಅಸೆಂಬ್ಲಿ ಚುನಾವಣೆಯಲ್ಲಿ ಜಯ ದಾಖಲಿಸಿದ್ದಾರೆ.
ಜಪಾನ್ ಸಾಂವಿಧಾನಿಕ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯೋಗಿ, ಭಾರತೀಯರೇ ಅಧಿಕವಾಗಿರುವ ವಾರ್ಡ್ ನಲ್ಲಿ ಜಯಭೇರಿ ಬಾರಿಸಿದ್ದಾರೆ. ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗಿ, ವಿದೇಶಿಯರು ಮತ್ತು ಜಪಾನಿಯರ ನಡುವೆ ಸೌಹಾರ್ದ ಸೇತುವೆಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.