ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ

By Suvarna Web DeskFirst Published Jan 30, 2018, 9:08 AM IST
Highlights

ಮುಂದಿನ ಹಣಕಾಸು ವರ್ಷದ ಮುನ್ನೋಟ ಎಂದೇ ಬಣ್ಣಿಸಲಾದ ಈ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ. ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಆಶಾದಾಯಕ ಅಂಶಗಳನ್ನು ಒಳಗೊಂಡಿರುವ ಸಮೀಕ್ಷೆ ಅನ್ವಯ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶ ಶೇ.7- ಶೇ.7.5ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಲಿದೆ ಎಂದು ಹೇಳಲಾಗಿದೆ.

ನವದೆಹಲಿ: ಮುಂದಿನ ಹಣಕಾಸು ವರ್ಷದ ಮುನ್ನೋಟ ಎಂದೇ ಬಣ್ಣಿಸಲಾದ ಈ ವರ್ಷದ ಆರ್ಥಿಕ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ. ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಆಶಾದಾಯಕ ಅಂಶಗಳನ್ನು ಒಳಗೊಂಡಿರುವ ಸಮೀಕ್ಷೆ ಅನ್ವಯ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶ ಶೇ.7- ಶೇ.7.5ರಷ್ಟು ಜಿಡಿಪಿ ಬೆಳವಣಿಗೆ ದಾಖಲಾಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ಭಾರತ ಮತ್ತೊಮ್ಮೆ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ಹೊಂದಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಆದರೆ ಕಚ್ಚಾ ತೈಲ ಬೆಲೆ, ಷೇರು ಬೆಲೆ ಕುಸಿತ ಕಾಣುವ ಭೀತಿಯು ದೇಶದ ಆರ್ಥಿಕತೆಗೆ ಸವಾಲಾಗುವ ಸಾಧ್ಯತೆಗಳೂ ಇವೆ ಎಂದು ವರದಿ ಹೇಳಿದೆ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಿದ್ಧಪಡಿಸಿರುವ, ಬಜೆಟ್’ಗೂ ಎರಡು ದಿನ ಮೊದಲು ಮಂಡನೆಯಾಗಿರುವ ವರದಿ ಅನ್ವಯ, ಜಿಎಸ್‌ಟಿ ಮತ್ತು ಅಪನಗದೀಕರಣದ ಅಲ್ಪಕಾಲೀನ ಹೊಡೆತವನ್ನು ಮೀತಿ, ಆರ್ಥಿಕತೆ ಹಂತಹಂತವಾಗಿಯಾದರೂ, ತ್ವರಿತವಾಗಿ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದಿದೆ.

ಗುಲಾಬಿ ಬಣ್ಣದ ವರದಿ!

ಆರ್ಥಿಕ ಸಮೀಕ್ಷೆಯ ಮುಖಪುಟವು ಗುಲಾಬಿ ಬಣ್ಣದಿಂದ ಕೂಡಿತ್ತು. ಮಹಿಳೆಯರ ವಿರುದ್ಧದ ದೌರ್ಜನ್ಯ ಹಾಗೂ ಹೆಣ್ಣು ಭ್ರೂಣ ಜತ್ಯೆ ವಿರುದ್ಧ ದನಿ ಎತ್ತಲೆಂದು ಸಾಂಕೇತಿಕವಾಗಿ ಈ ಬಣ್ಣ ಆಯ್ಕೆ ಮಾಡಿಕೊಳ್ಳಲಾಗಿತ್ತು

ಮೂಲಸೌಕರ್ಯಕ್ಕೆ ಬೇಕು 295 ಲಕ್ಷ  ಕೋಟಿ

ಭಾರತಕ್ಕೆ ಮುಂದಿನ 25 ವರ್ಷದಲ್ಲಿ 4.5 ಲಕ್ಷ ಕೋಟಿ ಡಾಲರ್ ಹಣವು ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಬೇಕು. ಈ ಪೈಕಿ ಭಾರತ ಸ್ವಂತ ಬಲದ ಮೇಲೆ 3.9 ಲಕ್ಷ ಕೋಟಿ ರು. ಬಂಡವಾಳ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ಸಮೀಕ್ಷೆ ಹೇಳಿದೆ

ಕೃಷಿ ತ್ಯಾಜ್ಯ ಸುಟ್ಟರೆ ಭಾರಿ ದಂಡ: ಶಿಫಾರಸು

ಕೃಷಿ ತ್ಯಾಜ್ಯ ಸುಟ್ಟರೆ ಭಾರಿ ದಂಡ ಹೇರಬೇಕು. ಮಾಲಿನ್ಯ ನಿಯಂತ್ರಣ, ಸಾರ್ವಜನಿಕ ಬಸ್ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಮೀಕ್ಷೆ ಹೇಳಿದೆ. ಕೃಷಿ ತ್ಯಾಜ್ಯ ಸುಟ್ಟಿದ್ದರಿಂದಾಗಿ ದೆಹಲಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿನ ವಾಯು ಮಾಲಿನ್ಯಕ್ಕೆ ಕಾರಣವಾಗಿತ್ತು.

ಜಿಎಸ್‌ಟಿ: ಪರೋಕ್ಷ ತೆರಿಗೆ ಶೇ.50 ಹೆಚ್ಚಳ

ಜಿಎಸ್‌ಟಿಯಿಂದಾಗಿ ಪರೋಕ್ಷ ತೆರಿಗೆ ಸಂಗ್ರಹ ಶೇ.50ರಷ್ಟು ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆ ಸಂತಸ ವ್ಯಕ್ತಪಡಿಸಿದೆ. ಹೊಸದಾಗಿ 34 ಲಕ್ಷ ವ್ಯಾಪಾರಗಳು ಜಿಎಸ್‌ಟಿ ಅಧೀನಕ್ಕೆ ಬಂದಿವೆ. ಹೀಗಾಗಿ ಪರೋಕ್ಷ ತೆರಿಗೆ ಸಂಗ್ರಹ ಶೇ.40ರಷ್ಟು ಹೆಚ್ಚಾಗಿದೆ.

ನೋಟು ರದ್ದತಿ: ತೆರಿಗೆದಾರರ ಸಂಖ್ಯೆ ಹೆಚ್ಚಳ

ನೋಟು ರದ್ದತಿಯಿಂದ ತೆರಿಗೆದಾರರ ಸಂಖ್ಯೆ ಶೇ.10ರಷ್ಟು ಹೆಚ್ಚಳವಾಗಿದೆ. ಅಂದರೆ ಸುಮಾರು 18 ಲಕ್ಷ ಹೊಸ ತೆರಿಗೆದಾರರು ಸೇರಿ ಕೊಂಡಿದ್ದಾರೆ. ಇದಲ್ಲದೆ ಮನೆಗಳಲ್ಲಿನ ಉಳಿತಾಯದ ಹಣವೂ ವೃದ್ಧಿಯಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಸಮೀಕ್ಷೆ ಯಲ್ಲಿ ಬಾಲಿವುಡ್ ಡೈಲಾಗ್!

ಸಮೀಕ್ಷೆಯಲ್ಲಿ ಬಾಲಿವುಡ್‌ನ ಸಂಭಾಷಣೆಗಳು ಗಮನ ಸೆಳೆದವು. ‘ತಾರೀಖ್ ಪರ್ ತಾರೀಖ್, ತಾರೀಖ್ ಪರ್ ತಾರೀಖ್’ (ಚಿತ್ರ: ದಾಮಿನಿ) ಎಂಬ ಸನ್ನಿ ಡಿಯೋಲ್ ಅವರ ಸಂಭಾಷಣೆಯೊಂದನ್ನು ಜೇಟ್ಲಿ ಸಂದರ್ಭೋಚಿತವಾಗಿ ಉಲ್ಲೇಖಿಸಿದರು.

ಗಂಡು ಮಕ್ಕಳ ಪಡೆಯುವ ಗೀಳು ಇನ್ನೂ ಇದೆ

ಭಾರತದಲ್ಲಿ ಗಂಡು ಮಕ್ಕಳ ಹೊಂದುವ ಗೀಳು ಇನ್ನೂ ಕಡಿಮೆಯಾಗಿಲ್ಲ. ಗಂಡು ಮಕ್ಕಳು ಹುಟ್ಟುವವರೆಗೂ ಮಕ್ಕಳನ್ನು ಹೆರುವುದನ್ನು ಭಾರತೀಯರು ಮುಂದುವರೆಸಿದ್ದಾರೆ. ಪರಿಣಾಮ ಮಹಿಳೆಯರ ಲಿಂಗಾನುಪಾತ ಪ್ರತಿಕೂಲ ಸ್ಥಿತಿಯಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ಹವಮಾನ: ಶೇ.25 ಕೃಷಿ ಆದಾಯ ನಷ್ಟ ಹವಾಮಾನ ಬದಲಾವಣೆಯಿಂದ ಶೇ.೨೦-೨೫ರಷ್ಟು ಕೃಷಿ ಆದಾಯ ಖೋತಾ ಆಗಲಿದೆ ಎಂದು ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ. ಮಳೆ ಕೊರತೆ ಅಥವಾ ಅತಿವೃಷ್ಟಿ ಉಂಟಾಗುವ ಸಾಧ್ಯತೆ ಇದೆ. ಇದು ಕೃಷಿ ಆದಾಯದ ನಷ್ಟಕ್ಕೆ ಕಾರಣವಾಗಲಿದೆ ಎಂದು ಸಮೀಕ್ಷೆ ಹೇಳಿದೆ. 

click me!