
ನವದೆಹಲಿ: 7ನೇ ವೇತನ ಆಯೋಗದ ಅನುಸಾರ ವೇತನ ಏರಿಕೆ ಜಾರಿಯಾಗುವ ಖುಷಿಯಲ್ಲಿದ್ದ ನೌಕರರಿಗೆ ಕೇಂದ್ರ ಸರ್ಕಾರ ಶಾಕ್ ನೀಡುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒಪ್ಪಿದೆ ಯಾದರೂ, ಅದನ್ನು ಎಂದಿನಿಂದ ನೀಡಲಾಗುವುದು ಎಂದು ಘೋಷಿಸಿಲ್ಲ. ಮೂಲಗಳ ಪ್ರಕಾರ 2018ರ ಏಪ್ರಿಲ್‌ನಿಂದ ಹೊಸ ವೇತನ ನೀತಿ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೀಗಾದಲ್ಲಿ ಶಿಫಾರಸು ಅಂಗೀಕರಿಸಿದ 2016ರಿಂದ ನೀಡಬೇಕಾದ ಹಿಂಬಾಕಿ (ಅರಿಯರ್ಸ್) ನೌಕರರಿಗೆ ಸಿಗುವುದಿಲ್ಲ. ಇಂಥದ್ದೊಂದು ಪ್ರಸ್ತಾಪವನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸಿದ್ದು, ಇದನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಸಚಿವ ಸಂಪುಟದ ಮುಂದೆ ಮಂಡಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ.
ಆದರೆ ಕೇಂದ್ರ ನೌಕರರ ಕನಿಷ್ಠ ವೇತನವನ್ನು ಆಯೋಗ ಶಿಫಾರಸು ಮಾಡಿದ 18 000 ರು.ಗಿಂತ ಹೆಚ್ಚಿಗೆ ಮಾಡಬೇಕೆಂಬ ಪ್ರಸ್ತಾಪವನ್ನು ಸರ್ಕಾರ ಒಪ್ಪಿಕೊಳ್ಳಬಹುದು. ಹೀಗಾದಲ್ಲಿ ಹೊಸದಾಗಿ ಸೇವೆಗೆ ಸೇರುವವರಿಗೆ ಲಾಭವಾಗಲಿದೆ. ಆಯೋಗದ ಶಿಫಾರಸಿನ ಅನ್ವಯ ಕನಿಷ್ಠ ವೇತನ 7,000ರು.ಯಿಂದ 18,000 ಮತ್ತು ಗರಿಷ್ಠ 90,000 ರು.ಯಿಂದ 2.5 ಲಕ್ಷದ ವರೆಗೆ ಏರಿಕೆ ಮಾಡಲು ನಿರ್ಧರಿಸಲಾಗಿತ್ತು.
ಈ ಸಂಬಂಧದ ಶಿಫಾರಸ್ಸುಗಳಿಗೆ 2016 ಜೂನ್ 29ರಂದು ಸಚಿವ ಸಂಪುಟ ಅನುಮೋದನೆ ದೊರಕಿತ್ತು. ಆದರೆ ಕನಿಷ್ಠ ವೇತನ 18,000 ದಿಂದ 26,000ಕ್ಕೆ ಏರಿಕೆ ಮಾಡುವಂತೆ ಸರ್ಕಾರಿ ನೌಕರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ನೌಕರರ ಸಂಘಟನೆಗಳು ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ್ದವು. ಆದರೆ, ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ, 2016, ಜೂ.30ರಂದು ಪ್ರತಿಭಟನೆ ಹಿಂಪಡೆಯಲಾಗಿತ್ತು. ಬೇಡಿಕೆ ಕುರಿತು ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.