
ಉಡುಪಿ (ಡಿ.12): ಈಕೆಯ ಹೆಸರು ಅನ್ನಾ ಅರ್ದೋವಾ, ಈ ಹೆಸರು ಕೇಳಿದರೆ ಸಾಕು, ರಷ್ಯಾ ದೇಶವೇ ಹೊಟ್ಟೆ ಹಿಡಿದು ನಗುತ್ತದೆ. ಆಕೆಯ ಕಾಮಿಡಿ ಪಂಚ್, ಹಾವಭಾವಗಳು ಅಷ್ಟು ಪ್ರಸಿದ್ಧ. ಬಾಲನಟಿಯಾಗಿ ತೆರೆಗೆ ಬಂದ ಈಕೆ ಕಳೆದ 3 ದಶಕಗಳಿಂದ ರಷ್ಯಾ ಮಾತ್ರವಲ್ಲ ಹಾಲಿವುಡ್’ನಲ್ಲಿ ಹಿರಿತೆರೆ - ಕಿರಿತೆರೆಯಲ್ಲಿ ನಗುವನ್ನು – ಸಂತೋಷವನ್ನು ಹಂಚುತ್ತಿದ್ದಾಳೆ. ಹೊರಗೆ ಸಾರ್ವಜನಿಕ ಜೀವನದಲ್ಲಿ ಸೆಲೆಬ್ರಿಟಿಯಾಗಿರುವ ಅನ್ನಾ, ಒಳಗೆ ವೈಯುಕ್ತಿಕ ಜೀವನವನ್ನು ಕಳೆದುಕೊಂಡು, ಜಿಗುಪ್ಸೆಗೊಳಗಾದದ್ದು ಮಾತ್ರ ಆಕೆಯನ್ನು ಕಂಡು ನಗುತ್ತಿದ್ದ ಯಾರ ಅರಿವಿಗೂ ಬರಲಿಲ್ಲ.
ಭಾರತಕ್ಕೆ ಬಂದದ್ದು ಹೀಗೆ: ಕಳೆದ ವರ್ಷ ರಷ್ಯಾದಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ವಿಶೇಷ ಉಪನ್ಯಾಸ ನೀಡಲು ಹೋಗಿದ್ದ ಉಡುಪಿಯ ಆಯುರ್ವೇದ ವೈದ್ಯ ಡಾ. ತನ್ಮಯ ಗೋಸ್ವಾಮಿ ಅವರು ಹೇಳಿದ್ದ, ಸುಖ ಮತ್ತು ದುಃಖಗಳೆರಡೂ ನಮ್ಮೊಳಗೆ ಇವೆ ಎಂದ ಮಾತು ಆಕೆ ಭಾರತಕ್ಕೆ ಬರುವಂತೆ ಮಾಡಿತು. 12 ದಿನಗಳ ಹಿಂದೆ ಉಡುಪಿ ಸಮೀಪದ ಕಾಪುವಿನಲ್ಲಿರುವ ಡಾ. ತನ್ಮಯ ಗೋಸ್ವಾಮಿ ಅವರ ಚಿಕಿತ್ಸಾಲಯಕ್ಕೆ ಬಂದ ಆಕೆ, ಇಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದು, ಸರಳ ಯೋಗವನ್ನು ಕಲಿತಿದ್ದಾರೆ.
ಇದೀಗ ಹಿಂದಕ್ಕೆ ಹೋಗುವಾಗ ನೋವು - ದುಃಖವನ್ನು ಮರೆತು, ಮೈ ಮನ ಹಗುರವಾಗಿ, ಸಂಪೂರ್ಣ ಹೊಸ ಅನ್ನಾ ಅರ್ದೋವಾ ಆಗಿ ಹೊರಟಿದ್ದರು. ಈ ಸಂದರ್ಭದಲ್ಲಿ ಆಕೆಯನ್ನು ಭೇಟಿಯಾದ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಆಕೆ, ಸಂತೋಷ ಮತ್ತು ದುಃಖ ಇರೋದು ನಮ್ಮೊಳಗೆಯೇ ಹೊರತು ಹೊರಗಲ್ಲ ಅನ್ನುವ ಭಾರತೀಯ ಆಧ್ಯಾತ್ಮದ ಸೆಳೆತ ನನ್ನನ್ನು ಇಲ್ಲಿಗೆ ಕರೆತಂದಿದೆ. ಇನ್ನು ಭಾರತ ನನ್ನ ಎರಡನೇ ತವರು. ಮತ್ತೊಮ್ಮೆ ಬರುತ್ತೇನೆ, ಆಗ ಇನ್ನೂ ಒಂದಷ್ಟು ದಿನ ಇದ್ದು ಪೂರ್ತಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತೇನೆ ಎಂದರು ಅನ್ನಾ.
ರಾಜ್ ಕಪೂರ್ ಸಿನಿಮಾ ಪ್ರಾಣ: ಹಿಂದೆ ಭಾರತದ ಸಿನಿಮಾಗಳನ್ನು ತುಂಬಾ ನೋಡುತ್ತಿದ್ದೆ, ಅದರಲ್ಲೂ ಎಲ್ಲಾ ರಷಿಯನ್ನರಂತೆ ಬಾಲಿವುಡ್ ದಂತ ಕಥೆ ರಾಜ್ ಕಪೂರ್ ಅವರು ನಟಿಸಿದ್ದ ಸಿನೆಮಾಗಳಂದರೆ ನನಗೆ ಪಂಚಪ್ರಾಣ. ಎಲ್ಲಾ ಸಿನೆಮಾಗಳನ್ನು 2-3 ಬಾರಿ ನೋಡಿದ್ದೇನೆ. ಸೀತಾ ಔರ್ ಗೀತಾ ಸಿನಿಮಾವನ್ನು ಏಳೆಂಟು ಬಾರಿ ನೋಡಿದ್ದೇನೆ. ಆದರೆ ಇತ್ತೀಚಿನ ಭಾರತೀಯ ಸಿನೆಮಾ ನೋಡುತ್ತಿಲ್ಲ, ಅವು ಅಷ್ಟು ಖುಷಿ ಕೊಡುತ್ತಿಲ್ಲ ಎಂದರು. ಅನ್ನಾ ಕೇವಲ ಟಿವಿ ರಿಯಾಲಿಟಿ ಶೋಗಳನ್ನು ಮಾತ್ರ ಮಾಡುವುದಲ್ಲ, ಹಾಲಿವುಡ್ ನಲ್ಲಿ ಪ್ರಶಸ್ತಿ ಗಳಿಸಿದ ವಾಸ್ತೋಹ್ಕಿ, ಥ್ಯಾಂಕ್ ಗಾಡ್ ಐ ಯಾಮ್ ಅಲೈವ್, ಸ್ನೋ ಕ್ವೀನ್ ನಂತಹಾ ಜನಪ್ರಿಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.