
ನವದೆಹಲಿ(ಜೂನ್ 30): 1962ರ ಯುದ್ಧ ನೆನಪಿಸಿ ಎಚ್ಚರಿಕೆ ನೀಡಿದ್ದ ಚೀನಾ ದೇಶಕ್ಕೆ ಭಾರತ ತಿರುಗೇಟು ನೀಡಿದೆ. ತನ್ನ ಗಡಿಯೊಳಗೆ ರಸ್ತೆ ನಿರ್ಮಿಸಿಕೊಳ್ಳುತ್ತಿದ್ದೇವೆ. ಬೇರಾರ ಗಡಿ ಪ್ರವೇಶಿಸಿಲ್ಲ ಎಂದು ಹೇಳುತ್ತಿರುವ ಚೀನಾದ ವಾದವನ್ನು ಭಾರತ ತಳ್ಳಿಹಾಕಿದೆ. ಸಿಕ್ಕಿಂ ಸೆಕ್ಟರ್'ನಲ್ಲಿರುವ ಡೋಕ್ಲಾಮ್'ನಲ್ಲಿ ರಸ್ತೆ ನಿರ್ಮಿಸುವ ಮೂಲಕ ಚೀನಾ ದೇಶವು ಗಡಿ ಕ್ಯಾತೆ ತೆಗೆಯುತ್ತಿದೆ. ಇದು ಸರಿಯಲ್ಲ ಎಂಬ ತನ್ನ ವಾದವನ್ನು ಭಾರತ ಪುನರುಚ್ಚರಿಸಿದೆ.
ಚೀನಾ ಕ್ಯಾತೆ:
ಡೋಕ್ಲಾಮ್ ಸೆಕ್ಟರ್'ನಲ್ಲಿ ಚೀನಾ ರಸ್ತೆ ನಿರ್ಮಿಸುವ ವೇಳೆ ಭಾರತೀಯ ಸೈನಿಕರು ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಚೀನಾದ ಕೆಂಗಣ್ಣಿಗೆ ಕಾರಣವಾಯಿತು. ತನ್ನ ಗಡಿಯೊಳಗೆಯೇ ರಸ್ತೆ ನಿರ್ಮಿಸುತ್ತಿದ್ದೇವೆ. ಭಾರತೀಯ ಸೈನಿಕರಿಗೆ ಇಲ್ಲಿ ಏನು ಕೆಲಸ? ಗಡಿದಾಟಿ ಬಂದ ಭಾರತೀಯರಿಗೆ ಸರಿಯಾಗಿ ಪಾಠ ಕಲಿಸಿ ಮರಳಿಸಿದ್ದೇವೆ ಎಂದು ಚೀನಾ ದೇಶ ಆರ್ಭಟಿಸಿತ್ತು. ಅಲ್ಲದೇ, ತನ್ನನ್ನು ಕೆಣಕುವ ಮುನ್ನ ಭಾರತ 1962ರ ಯುದ್ಧವನ್ನು ನೆನಪಿಸಿಕೊಳ್ಳುವುದು ಒಳಿತು ಎಂದೂ ಚೀನಾ ಎಚ್ಚರಿಕೆ ನೀಡಿದೆ.
ಭಾರತದ ವಾದವೇನು?
ಚೀನಾ ದೇಶವು ರಸ್ತೆ ನಿರ್ಮಿಸುತ್ತಿರುವ ಡೋಕ್ಲಾಮ್ ಒಂದು ವಿವಾದಿತ ಪ್ರದೇಶವಾಗಿದೆ. ಭಾರತ, ಭೂತಾನ್ ಮತ್ತು ಚೀನಾ ಗಡಿ ಸಂಗಮಕ್ಕೆ ಸಮೀಪದಲ್ಲಿದೆ. ಚೀನಾ ಮತ್ತು ಭೂತಾನ್ ನಡುವೆ ಡೋಕ್ಲಾಮ್ ವಿಚಾರದಲ್ಲಿ ಗಡಿವಿವಾದವಿದೆ. ಈ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳಿಲ್ಲ. ಹೀಗಾಗಿ, ಭಾರತದಲ್ಲಿರುವ ಭೂತಾನ್ ರಾಯಭಾರಿಯು ಡೋಕ್ಲಾನ್'ನಲ್ಲಿ ಚೀನಾ ನಡೆಸುತ್ತಿರುವ ರಸ್ತೆ ನಿರ್ಮಾಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಭಾರತವು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿತ್ತು.
ಮೇಲಾಗಿ, ಡೋಕ್ಲಾಮ್ ಸೆಕ್ಟರ್'ನಲ್ಲಿ ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿಗಳನ್ನು ಅಂತಿಮಗೊಳಿಸುವ ಮುನ್ನ ಎಲ್ಲರೊಂದಿಗೆ ಸಮಾಲೋಚನೆಯಾಗಬೇಕು ಎಂದು ಭಾರತ ಮತ್ತು ಚೀನಾ ದೇಶಗಳು 2012ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ಹೀಗಾಗಿ, ವಿವಾದಿತ ಪ್ರದೇಶದಲ್ಲಿ ಚಟುವಟಿಕೆ ನಡೆಸಿದರೆ ಅದು ಈ ಒಪ್ಪಂದದ ಆಶಯವನ್ನು ಮುರಿದಂತಾಗುತ್ತದೆ. ಇದನ್ನು ಆಕ್ಷೇಪಿಸುವ ಹಕ್ಕು ತನಗಿದೆ ಎಂಬುದು ಭಾರತದ ವಾದವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.