'ಮೋದಿ ಸಾಬ್'ಗೆ ಪತ್ರ ಬರೆದ ಇಮ್ರಾನ್: 'ಏನೋ' ಕೇಳ್ತಿದ್ದಾರಂತೆ!

By Web DeskFirst Published Sep 20, 2018, 4:03 PM IST
Highlights

ಪ್ರಧಾನಿ ಮೋದಿಗೆ ಪತ್ರ ಬರೆದ ಇಮ್ರಾನ್ ಖಾನ್! ದ್ವಿಪಕ್ಷೀಯ ಮಾತುಕತೆ ಪುನಾರಂಭಿಸುವ ಪ್ರಸ್ತಾವನೆ! ಭಾರತದೊಂದಿಗೆ ಮಾತುಕತೆಗೆ ಮುಂದಾದ ಪಾಕ್ ಪ್ರಧಾನಿ! 2015ರಿಂದ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕೆತೆ ನಡೆದಿಲ್ಲ

ನವದೆಹಲಿ(ಸೆ.20): ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆ ಪುನಾರಂಭಿಸುವ ಪ್ರಸ್ತಾವನೆ ಇಟ್ಟಿದ್ದಾರೆ.

ಅಮೆರಿಕದ ನ್ಯೂಯಾರ್ಕ್ ನಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​, ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹ್ಮೂದ್​ ಖುರೇಶಿ ನಡುವೆ ಸಭೆ ನಡೆಸುವ ಬಗ್ಗೆ ಪರಿಶೀಲಿಸುವಂತೆ ಪತ್ರದಲ್ಲಿ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ.

ಎರಡು ದೇಶಗಳ ನಡುವೆ ಅರ್ಥಪೂರ್ಣ ಹಾಗೂ ರಚನಾತ್ಮಕ ಮೈತ್ರಿಯಾಗುವುದನ್ನು ಬಯಸುತ್ತೇನೆ ಎಂಬ ಮೋದಿಯವರ ಮಾತಿಗೆ ಪ್ರತಿಕ್ರಿಯೆಯಾಗಿ ಇಮ್ರಾನ್​ ಖಾನ್​ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಇನ್ನು ಈ ಹಿಂದೆ ತಾವು ಪಾಕ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಇಮ್ರಾನ್ ಖಾನ್ ವಿವಾದಗಳನ್ನು ಬಗೆಹರಿಸಲು ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡುವುದಾಗಿ  ತಿಳಿಸಿದ್ದರು.

ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಮಗ್ರ ಮಾತುಕತೆ ನಡೆಸಲು 2015ರಲ್ಲಿ ಪ್ರಯತ್ನಿಸಲಾಗಿತ್ತು. ಆದರೆ ಪಠಾಣ್ ಕೋಟ್​ ದಾಳಿ ಹಿನ್ನೆಲೆಯಲ್ಲಿ ಮಾತುಕತೆ ಸ್ಥಗಿತಗೊಂಡಿತ್ತು.

click me!