
ಬೆಂಗಳೂರು(ಮಾ.23): ಬೇಲೇಕೇರಿ ಬಂದರು ಮೂಲಕ ಲಕ್ಷಾಂತರ ಮೆಟ್ರಿಕ್ ಟನ್ ಅದಿರನ್ನ ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಕ್ಕೆ ಲೋಕಾಯುಕ್ತ ಎಸ್ಐಟಿ ಎಳ್ಳು ನೀರು ಬಿಟ್ಟಿದೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಐಎಫ್ಎಸ್ ಅಧಿಕಾರಿ ಯುವಿ ಸಿಂಗ್ ಕೊಟ್ಟ ವರದಿಯನ್ನ ಸಾಭೀತು ಪಡಿಸಲು ಎಸ್ಐಟಿ ವಿಫಲವಾಗಿದ್ದು 18 ಕಂಪನಿಗಳ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ವಿಶೇಷ ತನಿಖಾ ತಂಡ ಸಲ್ಲಿಸಿರುವ ಬಿ ರಿಪೋರ್ಟ್ಗಳನ್ನು ನ್ಯಾಯಾಲಯ ಅಂಗೀಕರಿಸಿದೆ ಎಂದು ತಿಳಿದು ಬಂದಿದೆ.
ಶಾಸಕ ಅನಿಲ್ ಲಾಡ್ ಮತ್ತು ಆನಂದ್ಸಿಂಗ್ ನಿರ್ದೇಶಕರಾಗಿರುವ ಕಂಪನಿಗಳೂ ಈ ಪಟ್ಟಿಯಲ್ಲಿವೆ. 18 ಕಂಪನಿಗಳು ಅಕ್ರಮವಾಗಿ ಒಟ್ಟು 2,59,021 ಮೆಟ್ರಿಕ್ ಟನ್ ಪ್ರಮಾಣದಲ್ಲಿ ಅದಿರನ್ನು ಸಾಗಿಸಿತ್ತು.
50,000 ಮೆಟ್ರಿಕ್ ಟನ್ಗೂ ಅಧಿಕ ಪ್ರಮಾಣದ ಅದಿರನ್ನು ಅಕ್ರಮವಾಗಿ ಸಾಗಿಸಿರುವ ಪ್ರಕರಣಗಳನ್ನು ಸಿಬಿಐ ತನೀಖೆ ನಡೆಸುತ್ತಿದೆ. 50,000 ಮೆಟ್ರಿಕ್ ಟನ್ಗಿಂತಲೂ ಕಡಿಮೆ ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಿಸಿರುವ ಪ್ರಕರಣಗಳನ್ನು ಲೋಕಾಯುಕ್ತ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿತ್ತು. ಇದರಲ್ಲಿ 18 ಕಂಪನಿಗಳ ವಿರುದ್ಧದ ಅಕ್ರಮಗಳನ್ನು ಎಸ್ಐಟಿ ಸಾಬೀತುಪಡಿಸುವಲ್ಲಿ ವಿಫಲವಾಗಿದೆ.
ಬೇಲೇಕೇರಿ ಬಂದರು ಮೂಲಕ ಅಕ್ರಮವಾಗಿ ಕಬ್ಬಿಣ ಅದಿರು ಸಾಗಿಸಿರುವುದನ್ನು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಮತ್ತು ತನಿಖಾ ತಂಡ ಯು.ವಿ.ಸಿಂಗ್ ಮತ್ತವರ ತಂಡ ತನಿಖೆ ವೇಳೆಯಲ್ಲಿ ಪತ್ತೆ ಹಚ್ಚಿತ್ತು. 2011-12ರಲ್ಲಿ ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಲೋಕಾಯುಕ್ತ ವರದಿ ಆಧರಿಸಿ ಕ್ರಮ ಕೈಗೊಳ್ಳುವ ಬಗ್ಗೆ ಮತ್ತು ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ಸ್ಥಾಪನೆಯಾಗಿತ್ತು. ಆದರೆ, ಇದೇ ತಂಡ ಈಗ 18 ಕಂಪನಿಗಳ ಅಕ್ರಮಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೇಲೇಕೇರಿ ಅದಿರು ಪ್ರಕರಣದಲ್ಲಿ ಶಾಸಕ ಅನಿಲ್ ಲಾಡ್ ಮತ್ತು ಆನಂದ್ ಸಿಂಗ್ ನ್ಯಾಯಾಂಗ ಬಂಧನದಲ್ಲಿದ್ದರು.
1. ಅನಿಲ್ ಲಾಡ್, ನಿರ್ದೇಶಕ. ವಿಎಸ್ಎಲ್ ಮೈನಿಂಗ್, 16,970 ಮೆಟ್ರಿಕ್ ಟನ್ ರಫ್ತು
2. ಆನಂದ್ ಸಿಂಗ್, ವೈಷ್ಣವಿ ಮಿನರಲ್ಸ್ ಪಾರ್ಟ್‍ನರ್, 6,600 ಮೆಟ್ರಿಕ್ ಟನ್ ರಫ್ತು
3. ಸೇಸಾ ಗೋವಾ, 18,991 ಮೆಟ್ರಿಕ್ ಟನ್ ಅದಿರು ರಫ್ತು
4. ಸಲಗಾಂವಕರ್ ಮೈನಿಂಗ್ ಇಂಡಸ್ಟ್ರಿಸ್ ಪಣಜಿ, 1,144 ಮೆಟ್ರಿಕ್ ಟನ್ ಅದಿರು ರಫ್ತು
5. ದೊಡ್ಡಪ್ಪ, ಸಂಡೂರು, 4,866 ಮೆಟ್ರಿಕ್ ಟನ್ ಅದಿರು ರಫ್ತು
6. ಶಾಂತದುರ್ಗಾ ಟ್ರಾನ್ಸ್ಪೋರ್ಟ್ ಕಂಪನಿ, ಗೋವಾ, 20,729 ಮೆಟ್ರಿಕ್ ಟನ್ ಅದಿರು ರಫ್ತು
7. ಹಿಲ್ ರಾಕ್ ಮಿನರಲ್ಸ್ ಲಿ., ಹೊಸಪೇಟೆ, 4,941 ಮೆಟ್ರಿಕ್ ಟನ್ ಅದಿರು ರಫ್ತು
8. ಎಸ್ಎಸ್ಟಿಎ ಲಾಜಿಸ್ಟಿಕ್ಸ್ ಪ್ರೈ.ಲಿ., 24,391 ಮೆಟ್ರಿಕ್ ಟನ್ ಅದಿರು ರಫ್ತು
9. ಆರ್.ಬಿ.ಶ್ರೀರಾಮ್ ನರಸಿಂಗ್ದಾಸ್ ಸಂಕಲ್ಪಪುರಂ, 6,688 ಮೆಟ್ರಿಕ್ ಟನ್ ಅದಿರು ರಫ್ತು
10. ತೇರಾಪಂಥ್ ಫುಡ್ ಪ್ರೈ.ಲಿ., 31,065 ಮೆಟ್ರಿಕ್ ಟನ್ ಅದಿರು ರಫ್ತು
11. ಚಗನ್ಮಲ್ ಜೈನ್, ವ್ಯವಸ್ಥಾಪಕ ನಿರ್ದೇಶಕ- ಕಾಂಟಿನೆಂಟ್ ಇಂಪೆಕ್ಸ್ ಪ್ರೈ.ಲಿ., 13,055 ಮೆಟ್ರಿಕ್ ಟನ್ ಅದಿರು ರಫ್ತು
12. ರಾಜೇಂದ್ರ ಸಿಂಗ್, ಕೋಮಿನ್ ಇಂಡಿಯಾ ರಿಸೋರ್ಸ್, 3,527 ಮೆಟ್ರಿಕ್ ಟನ್ ಅದಿರು ರಫ್ತು
13. ಹಬೀಬ್ ಉರ್ ರೆಹಮಾನ್, ಹೊಸಪೇಟೆ ಮೈನ್ಸ್ ಮಿನರಲ್ಸ್, 12,046 ಮೆಟ್ರಿಕ್ ಟನ್ ಅದಿರು ರಫ್ತು
14. ವಿ.ಮಂಜುನಾಥ್, ಸಿದ್ದಿವಿನಾಯಕ ಮಿನರಲ್ಸ್, 10,0008 ಮೆಟ್ರಿಕ್ ಟನ್ ಅದಿರು ರಫ್ತು
15. ಅಬ್ದುಲ್ ಜಹೀದ್, ಎಸ್ಎಂಎಸ್ಕೆ ಮಿನರಲ್ಸ್, 4,000 ಮೆಟ್ರಿಕ್ ಟನ್ ಅದಿರು ರಫ್ತು
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.