'ಓವೈಸಿಗೆ ತೆಲಂಗಾಣದಿಂದ ಗೇಟ್ ಪಾಸ್'

By Web DeskFirst Published Dec 3, 2018, 12:15 PM IST
Highlights

ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದ್ದು, ಇದೇ ವೇಳೆ ಪಕ್ಷಗಳ ನಡುವಿನ ವಾಕ್ಸಮರಗಳು ಜೋರಾಗಿದೆ. ತೆಲಂಗಾಣದಲ್ಲಿಯೂ ಚುನಾವಣೆ ಸಮೀಪಿಸಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಓವೈಸಿ ಓಡಿಹೋಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

ಹೈದ್ರಾಬಾದ್ :  ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ಕಾವು ಜೋರಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ನಡುವೆ ಕೆಸರೆರಚಾಟ ಮುಂದುವರಿದಿದೆ. 

ತೆಲಂಗಾಣದಲ್ಲಿಯೂ ಕೂಡ ಚುನಾವಣಾ ಅಬ್ಬರ ಜೋರಾಗಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿ,  ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಓವೈಸಿ ರಾಜ್ಯದಿಂದ ನಿಜಾಮರ ರೀತಿ ಓಡಿಹೋಗಬೇಕು ಎಂದು ಹೇಳಿದ್ದಾರೆ. 

ಬಿಜೆಪಿ   ಶಾಂತಿಯನ್ನು ಬಯಸುತ್ತದೆ. ಭದ್ರತೆ, ಸುರಕ್ಷಿತತೆಗೆ ನಮ್ಮ ಮೊದಲ ಆದ್ಯತೆಯಾಗಿದ್ದು, ಶಾಂತಿ ಕದಡುವವರಿಗೆ ಇಲ್ಲಿ ಅವಕಾಶವಿಲ್ಲ. ಧರ್ಮ, ಜಾರಿ, ಸಮುದಾಯದ ಆಧಾರದಲ್ಲಿ ಭಿನ್ನತೆ  ಮಾಡುವವರಿಗೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸಿನಂತಹ ಅನೇಕ ಪಕ್ಷಗಳು ಮುಸ್ಲಿಮರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿವೆ. ಆದರೆ ಬಿಜೆಪಿ ಇಂತಹ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಲ್ಲದೇ ಇದೇ ವೇಳೆ ರಾಮಮಂದಿರ ನಿರ್ಮಾಣ ವಿಚಾರವನ್ನು ಪಸ್ತಾಪಿಸಿದ ಯೋಗಿ ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದೆ. ಬಿಜೆಪಿ ಸರ್ಕಾರ ಮಾತ್ರವೇ ರಾಮಮಂದಿರ ನಿರ್ಮಾಣ ಮಾಡಲು ಆಸಕ್ತಿ ವಹಿಸುತ್ತಿದೆ ಎಂದಿದ್ದಾರೆ. 

ರಾಜ್ಯದಲ್ಲಿ ಟಿಆರ್ ಎಸ್ ಹಾಗೂ ಕಾಂಗ್ರೆಸ್ ನಿಜಾಮರ ಆಡಳಿತವನ್ನೇ ಮರಳಿ ತರುತ್ತಿವೆ. ಆದರೆ ಬಿಜೆಪಿ ಈ ರೀತಿಯ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಇದೇ ಡಿಸೆಂಬರ್ 7 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, 11 ರಂದು ಪಕ್ಷಗಳ ಭವಿಷ್ಯವನ್ನು ನಿರ್ಧಾರವಾಗಲಿದೆ.

click me!