
ಕೋಲ್ಕತಾ : ಈಗಾಲೇ ಕೆಲ ರಾಜ್ಯಗಳಲ್ಲಿ ಮದ್ಯ ನಿಷೇದ ಮಾಡಲಾಗಿದ್ದು, ಪಶ್ಚಿಮ ಬಂಗಾಳದಲ್ಲಿಯೂ ಕೂಡ ಇದೀಗ ಮದ್ಯ ನಿಷೇಧಿಸಲು ಆಗ್ರಹ ಕೇಳಿ ಬಂದಿದೆ.
ರಾಜ್ಯದಲ್ಲಿ ಮದ್ಯ ಮಾರಾಟದಿಂದ ಆಡಳಿತ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಹಣ ಮಾಡಿಕೊಳ್ಳುತ್ತಿದೆ. ಕಳ್ಳಭಟ್ಟಿ ಸೇವನೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಕೈಲಾಸ್ ವಿಜಯ್ ವರ್ಗಿಯಾ ಆಗ್ರಹಿಸಿದ್ದಾರೆ.
ಅಕ್ರಮ ಮದ್ಯ ಸೇವಿಸಿ ಮೃತಪಟ್ಟ ಕುಟುಂಬಸ್ಥರನ್ನು ಭೇಟಿ ಮಾಡಿ ಮಾಧ್ಯಮಗಳೊಂದಿಗೆ ಬಳಿಕ ಮಾತನಾಡಿದ ವಿಜಯ್, ಕಳೆದ ಬುಧವಾರದಿಂದ ರಾಜ್ಯದ ಶಾಂತಿಪುರದಲ್ಲಿ ಕಳ್ಳಭಟ್ಟಿ ಸೇವಿಸಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 35 ಮಂದಿ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಇವರೆಲ್ಲರೂ ಕೂಡ ಕೂಲಿ ಕಾರ್ಮಿಕರೇ ಆಗಿದ್ದಾರೆ. ಇಂತಹ ಅನಾಹುತ ತಪ್ಪಿಸುವ ಸಲುವಾಗಿ ರಾಜ್ಯದಲ್ಲಿ ಮದ್ಯ ನಿಷೇಧ ಕ್ರಮ ಜಾರಿ ಮಾಡಬೇಕು ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಕ್ರಮ ಮದ್ಯ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾದವರ ಕುಟುಂಬಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಕೂಡ ಭರವಸೆ ನೀಡಿದ್ದಾರೆ.
ಸಂಪೂರ್ಣವಾಗಿ ರಾಜ್ಯದಲ್ಲಿ ಮದ್ಯ ನಿಷೇದಕ್ಕೆ ಕ್ರಮ ಕೈಗೊಳ್ಳುವುದರಿಂದ ಇಂತಹ ಘಟನೆಗಳನ್ನು ತಪ್ಪಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಟಿಎಂಸಿ ನೇತೃತ್ವದ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಅಕ್ರಮ ಮದ್ಯ ಸೇವನೆಯಿಂದ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಎದುರಾಗುತ್ತಿದೆ. ಹಲವು ಕುಟುಂಬಗಳಲ್ಲಿ ಯುವಕರೇ ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮದ್ಯ ನಿಷೇದ ಮಾಡದ ಸರ್ಕಾರಕ್ಕೆ ಇದರಿಂದ ಲಾಭವಿದೆಯೇ ಎಂದು ಬಿಜೆಪಿ ಮುಖಂಡರು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.