ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೆ ಬೇಕು| ಇಲ್ಲಿ ನನ್ನ ಧ್ವನಿ ಹುದುಗಿ ಹೋಗಿದೆ| ಐಎಎಸ್ ಸೇವೆಗೆ ರಾಜೀನಾಮೆ ನೀಡಿದ ಮತ್ತೊಬ್ಬ ಅಧಿಕಾರಿ| ಕೇರಳ ಪ್ರವಾಹದ ವೇಳೆ ಸದ್ದಿಲ್ಲದೇ ಜನರ ಸೇವೆಗೆ ಮುಂದಾಗಿದ್ದ ಕನ್ನನ್ ಗೋಪಿನಾಥನ್
ನವದೆಹಲಿ[ಆ.24]: 2018ರ ಸಪ್ಟೆಂಬರ್ ನಲ್ಲಿ ಕೇರಳದಲ್ಲುಂಟಾದ ಪ್ರವಾಹದ ಸಂದರ್ಭದಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದಲೇ ಗುರುತಿಸಿಕೊಂಡಿದ್ದ ಐಎಎಸ್ ಆಫೀಸರ್ ಕನ್ನನ್ ಗೋಪಿನಾಥನ್ ತಮ್ಮ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
AGMUT ಕೇಡರ್ ನ 2012ನೇ ಸಾಲಿನ IAS ಅಧಿಕಾರಿ ಕನ್ನನ್ ಗೋಪಿನಾಥನ್ ಕೇರಳದಲ್ಲುಂಟಾದ ಪ್ರವಾಹದ ವೇಳೆ ಕೇಂದ್ರಾಡಳಿತ ಪ್ರದೇಶ ದಾದ್ರಾ ಹಾಗೂ ನಗರ ಹವೇಲಿಯಲ್ಲಿ ಡಿಸಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕೇರಳದ ಪರಿಸ್ಥಿತಿ ಗಮನಿಸಿದ ಅವರು ಸಂತ್ರಸ್ತರ ರಕ್ಷಣೆಗಾಗಿ ಧಾವಿಸಿದ್ದರು. ತಾವೊಬ್ಬ ಜಿಲ್ಲಾಧಿಕಾರಿ ಎಂದು ತಿಳಿಸದೆ ಸಾಮಾನ್ಯರಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಗೋಪಿನಾಥನ್ ರನ್ನು ಮತ್ತೊಬ್ಬ ಅಧಿಕಾರಿ ಗುರುತಿಸಿದ್ದರು. ಬಳಿಕವಷ್ಟೇ ಅವರೊಬ್ಬ IAS ಅಧಿಕಾರಿ ಎಂಬ ವಿಚಾರ ಬಯಲಾಗಿತ್ತು. ಆದರೀಗ ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ ರಾಜೀನಾಮೆ ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಅವರು ರಾಜೀನಾಮೆ ನೀಡಿದ್ದೇಕೆ? ಇಲ್ಲಿದೆ ವಿವರ
ಆಗಸ್ಟ್ 21ರಂದು ಗೃಹ ಸಚಿವರಿಗೆ ಪತ್ರವೊಂದನ್ನು ಬರೆದಿರುವ ಕನ್ನನ್ ತಾನು ಭಾರತೀಯ ಆಡಳಿತ ಸೇವೆ[IAS] ನಿಂದ ರಾಜೀನಾಮೆ ಪಡೆಯಲು ಇಚ್ಛಿಸುವುದಾಗಿ ತಿಳಿಸಿದ್ದಾರೆ.
ರಾಜೀನಾಮೆ ಬಳಿಕ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಗೋಪಿನಾಥನ್ 'ನನಗೆ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ನಾನು ಇತರರ ಧ್ವನಿಯಾಬಹುದೆಂಬ ನಂಬಿಕೆಯಿಂದ ನಾಗರೀಕ ಸೇವೆಗೆ ಸೇರ್ಪಡೆಯಾದೆ. ಆದರೀಗ ಇಲ್ಲಿ ನನ್ನ ಧ್ವನಿಯೇ ಹುದುಗಿ ಹೋಗಿದೆ. ನನ್ನ ರಾಜೀನಾಮೆ ನಾನು ಕಳೆದುಕೊಂಡ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮರಳಿಸಲಿದೆ. ನನಗೆ ಗೊತ್ತು ಇದು ಯಾವುದೇ ಬದಲಾವಣೆಯನ್ನು ತರುವುದಿಲ್ಲ, ಹೆಚ್ಚೆಂದರೆ ಅರ್ಧ ದಿನ ಸುದ್ದಿಯಾಗಬಹುದು. ಆದರೆ ನಾನು ನನ್ನ ಸ್ವಂತ ಇಚ್ಛೆಯಿಂದ ಬದಲಾವಣೆ ತರಲು ಶ್ರಮಿಸುತ್ತೇನೆ' ಎಂದಿದ್ದಾರೆ.
ಇನ್ನು 2019ರ ಫೆಬ್ರವರಿಯಲ್ಲಿ ಕಾಶ್ಮೀರದ ಐಎಎಸ್ ಅಧಿಕಾರಿ ಫರೂಕ್ ಅಹ್ಮದ್ ಶಾ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂಬುವುದು ಉಲ್ಲೇಖನೀಯ. ಅಲ್ಲದೇ ಶಾ ಫೈಸಲ್ ಹೆಸರಿನ IAS ಅಧಿಕಾರಿ ಕೂಡಾ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಧ್ವನಿ ಎತ್ತುವ ಸಲುವಾಗಿ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು. ಇತ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ IPS ಅಧಿಕಾರಿ ಅಣ್ಣಾಮಲೈ ಕೂಡಾ ಕೆಲ ತಿಂಗಳ ಹಿಂದಷ್ಟೇ ರಾಜೀನಾಮೆ ಸಲ್ಲಿಸಿದ್ದರು.