ಅಜ್ಞಾತ ಸ್ಥಳಕ್ಕೆ ಬಿಎಸ್‌ವೈ, ಅನರ್ಹ ಶಾಸಕರ ಭೇಟಿ?

By Web DeskFirst Published Aug 24, 2019, 10:08 AM IST
Highlights

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಬೆಂಗಾವಲು ವಾಹನವನ್ನು ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಈ ವೇಳೆ ಅವರು ಅನರ್ಹ ಶಾಸಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ನವದೆಹಲಿ [ಆ.24]:  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗುವ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ತಮ್ಮ ಬೆಂಗಾವಲು ವಾಹನವನ್ನು ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಈ ವೇಳೆ ಅವರು ಅನರ್ಹ ಶಾಸಕರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿರುವ ತಮ್ಮ ಅನರ್ಹತೆಯ ಪ್ರಕರಣದ ವಿಚಾರವಾಗಿ ವಕೀಲರ ಜತೆ ಮಾತುಕತೆ ನಡೆಸಲು ಅನರ್ಹ ಶಾಸಕರು ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ. ಬೆಳಗ್ಗೆ ಸಚಿವ ಅಶ್ವತ್ಥ ನಾರಾಯಣ ಮತ್ತು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಅನರ್ಹ ಶಾಸಕರನ್ನು ಭೇಟಿಯಾದ್ದು, ಈ ವೇಳೆ ಅನರ್ಹ ಶಾಸಕರು ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿಯಾಗಲು ಸಮಯಾವಕಾಶ ಕಲ್ಪಿಸಿ ಎಂದು ಕೋರಿದ್ದಾಗಿ ತಿಳಿದು ಬಂದಿದೆ. 

ಆದರೆ ಅಮಿತ್‌ ಶಾ ಭೇಟಿಗೆ ಸಮಯಾವಕಾಶ ಕೋರುವುದು ಸದ್ಯದ ಮಟ್ಟಿಗೆ ಸರಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿರುವ ಅಶ್ವತ್ಥನಾರಾಯಣ ಮತ್ತು ವಿಜಯೇಂದ್ರ ಅವರು ಅನರ್ಹ ಶಾಸಕರಿಗೆ ಯಡಿಯೂರಪ್ಪ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಬೆಂಗಾವಲು ಪಡೆಯನ್ನು ಬಿಟ್ಟು ಅಜ್ಞಾತ ಸ್ಥಳವೊಂದರಲ್ಲಿ ಯಡಿಯೂರಪ್ಪ ಅವರು ಅನರ್ಹ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ರಾಜೀನಾಮೆ ನೀಡುವಾಗ ತಮಗೆ ಯಾವ ಭರವಸೆ ನೀಡಲಾಗಿತ್ತೋ ಅದನ್ನು ಈಡೇರಿಸಬೇಕು ಎಂದು ಈ ಅನರ್ಹ ಶಾಸಕರು ಯಡಿಯೂರಪ್ಪ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.

ನಂತರ ಯಡಿಯೂರಪ್ಪ ಅವರು ಬಿಜೆಪಿಯ ಕಾರ್ಯಾಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು.

click me!