ಪ್ರತಿಪಕ್ಷ ಸ್ಥಾನ: ಸಿದ್ದರಾಮಯ್ಯಗೆ ಸಮಾನ ಸ್ಪರ್ಧೆಯೊಡ್ಡಿದ ಮೂಲ ಕಾಂಗ್ರೆಸ್ಸಿಗರು

By Web DeskFirst Published Oct 3, 2019, 5:28 PM IST
Highlights

ರಾಜ್ಯದ ವಿಪಕ್ಷ ನಾಯಕನ ಸ್ಥಾನ ಈಗ ಕಾಂಗ್ರೆಸ್​ನೊಳಗೆ ಪ್ರತಿಷ್ಠೆಯಾಗಿರುವ ಹಿನ್ನೆಲೆಯಲ್ಲಿ  ಪ್ರತಿಪಕ್ಷ  ನಾಯಕನ ಆಯ್ಕೆ ಕಗ್ಗಂಟಾಗಿ ಉಳಿದಿದೆ.   ಸಿದ್ದರಾಮಯ್ಯ ಅವರೇ ವಿಪಕ್ಷ ಸ್ಥಾನಕ್ಕೆ ಸೂಕ್ತ ಎಂದು ಕೆಲ ನಾಯಕರು ಹೇಳಿದ್ರೆ, ಇನ್ನು ಕೆಲವರು ಸಿದ್ದರಾಮಯ್ಯಗೆ ಅಡ್ಡಗಾಲಾಗಿದ್ದಾರೆ. 

ಬೆಂಗಳೂರು,(ಅ. 03):  ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಘಟಾನುಘಟಿಗಳು ಕಣ್ಣಿಟ್ಟಿದ್ದು, ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಪೈಪೋಟಿ ಜೋರಾಗಿದೆ.

ಸಿದ್ದರಾಮಯ್ಯ ಅವರಂತೂ ಶತಾಯಗತಾಯ ಈ ಸ್ಥಾನ ಪಡೆಯಲು ಪಣ ತೊಟ್ಟಿದ್ದಾರೆ. ಇದಕ್ಕೆ ವಿರೋಧಿ ಗುಂಪೊಂದು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯಗೆ ಪ್ರತಿಪಕ್ಷ ಸ್ಥಾನ ಸಿಗದಂತೆ ಒಳಗಿಂದೊಳಗೆ ಮಸಲತ್ತು ಮಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ  ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಇದೀಗ ವಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. 

ಸಿದ್ದರಾಮಯ್ಯ ವಿರೋಧಿಗಳ ಶೀತಲ ಸಮರ : ಹಿಡಿತ ತಪ್ಪಿಸಲು ಒಂದಾದ ನಾಯಕರು

ಇಂದು (ಗುರುವಾರ) ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಕೆ. ಪಾಟೀಲ್, ತಾವು ವಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ಪಕ್ಷದಲ್ಲಿ ತಾನೊಬ್ಬ ಹಿರಿಯ ಮುಖಂಡನಿದ್ಧೇನೆ. ಹಿಂದೆಯೂ ಕೂಡ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ ಅನುಭವ ಇದೆ. ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಬಲ್ಲೆ. ಆದರೆ, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಈ ಮೂಲಕ ಎಚ್.ಕೆ. ಪಾಟೀಲ್ ಅವರು ಸಿದ್ದರಾಮಯ್ಯಗೆ ತೊಡೆತಟ್ಟಿದ್ದಾರೆ. ಪಕ್ಷದಲ್ಲಿ ಸಂಘರ್ಷ ಇರುವುದರಿಂದ  ಪ್ರಮುಖವಾದ ಪ್ರತಿಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಗೆ ಸವಾಲಾಗಿ ಪರಿಣಮಿಸಿದೆ.

ಮತ್ತೊಂದೆಡೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇತ್ತೀಚೆಗೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ವಿಪಕ್ಷ ಸ್ಥಾನಕ್ಕೆ ಲಾಬಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 

ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಹಾಗೂ  ಹೆಚ್.ಕೆ. ಪಾಟೀಲ್ ವಿಪಕ್ಷ ನಾಯಕನ ರೇಸ್​ನಲ್ಲಿ ಸಿದ್ದರಾಮಯ್ಯಗೆ ಸಮಾನ ಸ್ಪರ್ಧಿಯೊಡ್ಡಿದ್ದಾರೆ. ಆದ್ರೆ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

click me!