
ದಾವಣಗೆರೆ: ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದೇ ನನ್ನ ಕಡೇ ಚುನಾವಣೆಯೆಂದು ಘೋಷಿಸಿದ್ದೇನೆ. 2024ಕ್ಕೆ ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು, ಪರ್ಟಿಲೈಸರ್ ಫ್ಯಾಕ್ಟರಿ, ಸೆಕೆಂಡ್ ಜನರೇಷನ್ ಎಥೆನಾಲ್ ಘಟಕ ಸ್ಥಾಪನೆ, ದಾವಣಗೆರೆ ರೈಲ್ವೆ ನಿಲ್ದಾಣ ಅಭಿವೃದ್ಧಿ, 2 ರೈಲ್ವೇ ಗೇಟ್ಗಳ ಸಮಸ್ಯೆಗೆ ಮುಕ್ತಿ, ಇಎಸ್ ಐ ಆಸ್ಪತ್ರೆ ಕಟ್ಟಡ ನಿರ್ಮಾಣ, ಜಿಲ್ಲಾಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ, 11 ಕೋಟಿ ವೆಚ್ಚದಲ್ಲಿ ಹಳೆ ಹೆರಿಗೆ ಆಸ್ಪತ್ರೆಯ ಅಭಿವೃದ್ಧಿ ನನ್ನ ಗುರಿಯಾಗಿವೆ ಎಂದರು.
ಇಲ್ಲಿನ ಅಶೋಕ ಗೇಟ್ ಸಮಸ್ಯೆ ಪರಿಹರಿಸಲು ಕೇಂದ್ರದಿಂದ ಹಣ ಮಂಜೂರು ಮಾಡಿಸಿದ್ದೇನೆ. ಇಲ್ಲಿನ ಪಾಲಿಕೆ, ಜಿಲ್ಲಾಡಳಿತ ಜಾಗ ನೀಡುತ್ತಿಲ್ಲ. ಸ್ಥಳೀಯ ಆಡಳಿತ ಜಾಗ ನೀಡದಿದ್ದರೆ ಅಂತರದಲ್ಲಿ ಫ್ಲೈಓವರ್ ನಿರ್ಮಿಸಲಾಗುತ್ತದೆಯೇ? ಕೈಗಾರಿಕೆ ತರಲು 5-19 ಸಾವಿರ ಎಕರೆ ಭೂಮಿ ಸ್ವಾಧೀನವಾಗಬೇಕು. ಅದರಲ್ಲಿ 500 ಎಕರೆ ವಿಮಾನ ನಿಲ್ದಾಣಕ್ಕೆ, ಉಳಿದದ್ದಕ್ಕೆ ಕೈಗಾರಿಕೆ ತರುತ್ತೇನೆ. ಮೊದಲು ರಾಜ್ಯ ಸರ್ಕಾರ ಭೂಮಿ ಒದಗಿಸಲಿ ಎಂದು ಆಗ್ರಹಿಸಿದರು.
ಯಾವುದೇ ಕೈಗಾರಿಕೆ ಸ್ಥಾಪಿಸಲು ವಿಮಾನ ನಿಲ್ದಾಣ, ಭೂಮಿಯ ಅಗತ್ಯತೆ ಇರುತ್ತದೆ. ರೈಲ್ವೆ ಮಾರ್ಗ, ರಸ್ತೆ ಮಾರ್ಗವಿದ್ದು, ವಿಮಾನ ನಿಲ್ದಾಣವೂ ಆದಲ್ಲಿ ಸಾಕಷ್ಟುಅನುಕೂಲವಾಗುತ್ತದೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗಕ್ಕೆ 996 ಕೋಟಿ ಮಂಜೂರು ಮಾಡಿಸಿದ್ದು, 100 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಆದರೆ, ರಾಜ್ಯ ಸರ್ಕಾರ ಮಾತ್ರ ಭೂಮಿಯನ್ನೇ ಕೊಟ್ಟಿಲ್ಲ. ಜಿಲ್ಲಾ ಮಂತ್ರಿಯಾದವರಾದರೂ ಗಮನ ಹರಿಸಿ, ಅಭಿವೃದ್ಧಿ ಕೈಗೊಳ್ಳಲಿ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಇಳೀತು ಎನ್ನುವಂತಾಗಬಾರದಷ್ಟೇ ಎಂದರು. ಮೇ 23ರ ಹೊತ್ತಿಗೆ ಮೈತ್ರಿ ಸರ್ಕಾರ ಇರುವುದಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ರಮೇಶ್ ಜಾರಕಿಹೊಳಿ ಸಹ ಇದೇ ಮಾತು ಆಡುತ್ತಿದ್ದಾರೆ. ನೋಡೋಣ ಏನು ಆಗುತ್ತದೆಯೋ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.