ಬಾಬ್ರಿ ಮಸೀದಿ ಧ್ವಂಸ ತಡೆಗೆ ಯತ್ನಿಸಿದ್ದೆ: ಪೇಜಾವರ ಶ್ರೀ

By Suvarna Web DeskFirst Published Dec 7, 2017, 1:47 PM IST
Highlights

ನನ್ನ ಎದುರೇ ಸಂಭ್ರಮಾಚರಿಸಿದ ಯುವಕನ ಕಪಾಳಕ್ಕೆ ಬಾರಿಸಿದ್ದೆ | ಆದರೂ ನನ್ನ ವಿರುದ್ಧ ಮಸೀದಿ ಒಡೆಸಿದ ಆರೋಪ ಮಾಡಲಾಗುತ್ತಿದೆ

ಉಡುಪಿ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ. ಅದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದೆ. ಆದರೂ ಬಾಬರಿ ಮಸೀದಿಯನ್ನು ಕೆಡವಿದರಲ್ಲಿ ನನ್ನ ಪಾತ್ರ ಇದೆ ಎಂದು ಆರೋಪಿಸುತ್ತಾರೆ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಸುವರ್ಣ ನ್ಯೂಸ್’ ಜತೆ ಮಾತನಾಡಿದ ಅವರು, ಘಟನೆ ನಡೆದ ಹಿಂದಿನ ದಿನ ಮಸೀದಿ ಧ್ವಂಸಗೊಳಿಸುವ ಯಾವುದೇ ಪ್ರಸ್ತಾಪ ಇರಲಿಲ್ಲ. ‘ಕೇವಲ ಸಾಂಕೇತಿಕವಾಗಿ ಕರಸೇವೆ ನಡೆಯುತ್ತದೆ. ಅದನ್ನು ಹೊರತುಪಡಿಸಿ ರಾಮಮಂದಿರದ ಶಿಲಾನ್ಯಾಸ ನಡೆಯುವುದಿಲ್ಲ. ಮಸೀದಿಗೂ ಯಾವುದೇ ಹಾನಿ ಮಾಡುವುದಿಲ್ಲ’ ಎಂದು ಅಶೋಕ್ ಸಿಂಘಾಲ್ ಪೂರ್ವಭಾವಿ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

ಆದರೆ, ಮರುದಿನ ಬೆಳಗ್ಗೆ ಕೆಲವರು ಮಸೀದಿಗೆ ಕಲ್ಲು ಎಸೆಯಲಾರಂಭಿಸಿದರು. ನಾನು ಅದನ್ನು ತಡೆಯುವ ಪ್ರಯತ್ನ ಮಾಡಿದೆ. ಕಲ್ಲು ಎಸೆಯದಂತೆ ಧ್ವನಿವರ್ಧಕದಲ್ಲಿ 3 ಬಾರಿ ಜೋರಾಗಿ ಹೇಳಿದೆ. ಆದರೂ ನಿಲ್ಲಿಸಲಿಲ್ಲ. ಆಗ ನಾನೇ ವೇದಿಕೆಯಿಂದ ಇಳಿದು ಅಲ್ಲಿಗೆ ಓಡಲಾರಂಭಿಸಿದೆ. ಆಗ ಕೆಲವರು ನನ್ನನ್ನು ಎಳೆದು ಹಿಡಿದರು, ಅಲ್ಲಿ ಪೊಲೀಸರು ಗುಂಡು ಹಾರಿಸುತ್ತಿದ್ದಾರೆ, ಅಲ್ಲಿಗೆ ಹೋಗಬೇಡಿ ಎಂದರು ಎಂದು ಶ್ರೀಗಳು ತಿಳಿಸಿದರು.

‘ಅಷ್ಟರಲ್ಲಿ ಮಸೀದಿಯ ಒಂದು ಗುಂಬಜ್ ಬಿತ್ತು. ಆಗ ನನ್ನ ಹಿಂದೆ ಇದ್ದ ಕರಸೇವಕನೊಬ್ಬ ಹೋ ಎಂದು ಕೂಗುತ್ತಾ ಸಂತಸ ವ್ಯಕ್ತಪಡಿಸಿದ. ನನಗೆ ಸಿಟ್ಟು ಬಂದು, ಆತನ ಕಪಾಳಕ್ಕೆ ಬಾರಿಸಿದೆ. ನನ್ನ ಜೀವನದಲ್ಲಿ ಪ್ರಥಮ ಬಾರಿಗೆ ನಾನು ಹೀಗೆ ವರ್ತಿಸಿದ್ದೆ. ನಾನು ಮಸೀದಿಯನ್ನು ಉಳಿಸುವ ಪ್ರಯತ್ನ ಮಾಡಿದ್ದೆ. ಒಡೆಯುವ ಪ್ರಯತ್ನ ಮಾಡಿರಲಿಲ್ಲ. ಆದರೂ ಕೆಲವರು ಮಸೀದಿಯನ್ನು ನಾನೇ ಒಡೆಸಿದ್ದು ಎಂಬಂತೆ ನನ್ನ ಮೇಲೆ ಆರೋಪ ಮಾಡುತ್ತಾರೆ’ ಎಂದು ವಿಷಾದಿಸಿದರು.

click me!