
ಬೆಂಗಳೂರು(ಡಿ.7): ಕಳೆದ ಆಗಸ್ಟ್’ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಿಂದಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬಗ್ಗೆ ಜನರ ಮನಸ್ಸಿನಲ್ಲಿ ಬೇರೆಯದೇ ಭಾವನೆ ಬೆಳೆದಿರುವಂತಿದೆ. ಅದು ಸಮೀಕ್ಷೆಯಲ್ಲೂ ನಿರೂಪಿತವಾಗಿದೆ. ಸರ್ಕಾರಕ್ಕೆ ಯಾವ ಸಚಿವರಿಂದ ಕೆಟ್ಟ ಹೆಸರು ಬಂದಿದೆ ಎಂಬ ಪ್ರಶ್ನೆಗೆ ಸಾಕಷ್ಟು ಸಂಖ್ಯೆಯ ಜನರು ಶಿವಕುಮಾರ್ ಹೆಸರು ಹೇಳಿದ್ದಾರೆ. ಗುಜರಾತ್’ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯಲು ಪ್ರಯತ್ನಿಸಿತ್ತು. ಇದನ್ನು ತಪ್ಪಿಸಲು ಕಾಂಗ್ರೆಸ್ ಹೈಕಮಾಂಡ್ 44 ಶಾಸಕರನ್ನು ಬೆಂಗಳೂರಿಗೆ ರವಾನಿಸಿತ್ತು. ಈ ಶಾಸಕರು ಬಿಜೆಪಿ ಪಾಲಾಗದಂತೆ ನೋಡಿಕೊಳ್ಳುವ ಹೊಣೆ ಹೊತ್ತುಕೊಳ್ಳಲು ಹಲವಾರು ಸಚಿವರಿಗೆ ಸೂಚನೆ ನೀಡಿತ್ತು.
ಆದರೆ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕೆಂಬ ಭೀತಿಯಿಂದ ಆ ಹೊಣೆ ನಿರ್ವಹಿಸಲು ಹಲವು ಸಚಿವರು ಹಿಂದೇಟು ಹಾಕಿದರು. ಆದರೆ ಡಿ.ಕೆ. ಶಿವಕುಮಾರ್ ಅವರು ಆ ಜವಾಬ್ದಾರಿ ಹೊತ್ತುಕೊಂಡರು. ವಿದೇಶ ಪ್ರವಾಸ ಮೊಟಕುಗೊಳಿಸಿ, ರಾತ್ರೋರಾತ್ರಿ ಬೆಂಗಳೂರಿಗೆ ಆಗಮಿಸಿದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರ ಮೇಲೆ ತೆರಿಗೆ ದಾಳಿ ನಡೆದಿತ್ತು. ತೆರಿಗೆ ದಾಳಿಯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದವರ ವಿಭಾಗದಲ್ಲಿ ಅವರ ಹೆಸರೇ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಉಳಿದಂತೆ, ರಾಸಲೀಲೆ ಸಿ.ಡಿ. ಪ್ರಕರಣದಲ್ಲಿ ಸಿಲುಕಿದ್ದ ಮಾಜಿ ಸಚಿವ ಎಚ್.ವೈ. ಮೇಟಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೆಸರೂ ಪ್ರಮುಖವಾಗಿ ಪ್ರಸ್ತಾಪಗೊಂಡಿದೆ. ಬೆಂಗಳೂರು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಹಳೇ ಮೈಸೂರಿನಲ್ಲಿ ಡಿಕೆಶಿ ಹೆಸರು ಕೇಳಿಬಂದಿದ್ದರೆ, ಕೇಂದ್ರ ಕರ್ನಾಟಕದಲ್ಲಿ ಜಾರ್ಜ್, ಕರಾವಳಿ ಕರ್ನಾಟಕದಲ್ಲಿ ಮೇಟಿ ಹೆಸರನ್ನು ಜನರು ಹೇಳಿದ್ದಾರೆ. ನಗರ ಹಾಗೂ ಗ್ರಾಮೀಣ ಎರಡೂ ಭಾಗದಲ್ಲಿ ಡಿಕೆಶಿಯೇ ಪ್ರಥಮ ಸ್ಥಾನ ಪಡೆದಿದ್ದಾರೆ. ಒಕ್ಕಲಿಗರು, ಕುರುಬರು, ಒಬಿಸಿ, ಎಸ್ಸಿ/ಎಸ್ಟಿ, ಮುಸ್ಲಿಮರು ಕೂಡ ಡಿಕೆಶಿ ಹೆಸರು ಹೇಳಿದ್ದರೆ, ಲಿಂಗಾಯತರು ಮಾತ್ರ ಎಚ್.ವೈ. ಮೇಟಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಡಿಕೆಶಿಯಷ್ಟೇ ಜಾರ್ಜ್ ರಿಂದಲೂ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.