
ಬೆಂಗಳೂರು : ಎಡಪಂಥೀಯ ಬುದ್ಧಿಜೀವಿಗಳಿಗೆ ಕೇಂದ್ರ ಸರ್ಕಾರ ನಗರ ನಕ್ಸಲರು ಎಂಬ ಹಣೆಪಟ್ಟಿಕಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬುದ್ಧಿಜೀವಿಗಳು, ಇದೀಗ ‘ಹೌದು, ನಾನು ನಗರ ನಕ್ಸಲ್’ ಎಂದು ಘೋಷಿಸಿಕೊಳ್ಳುವ ಮೂಲಕ ಪ್ರತಿಭಟಿಸಲು ಮುಂದಾಗಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಬಳಗ ಮತ್ತು ಗೌರಿ ಲಂಕೇಶ್ ಸ್ಮಾರಕ ಟ್ರಸ್ಟ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರಾಜಭವನ ಚಲೋ’ ಹಾಗೂ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ದಲ್ಲಿ ಇಂತಹದೊಂದು ಅಭಿವ್ಯಕ್ತಿ ಪ್ರಬಲವಾಗಿ ಕಂಡುಬಂತು.
ಸಮಾವೇಶದಲ್ಲಿ ಪಾಲ್ಗೊಂಡ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ನಾನು ನಗರ ನಕ್ಸಲ್ ಎಂಬ ಬೋರ್ಡ್ ನೇತುಹಾಕಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಧೋರಣೆಗೆ ಪ್ರತಿರೋಧ ತೋರಿದರು. ಇವರಷ್ಟೇ ಅಲ್ಲದೆ, ಸ್ವಾಮಿ ಅಗ್ನಿವೇಶ್, ಜಿಗ್ನೇಶ್ ಮೇವಾನಿ, ಕನ್ಹಯ್ಯಕುಮಾರ್ ಸೇರಿದಂತೆ ಪ್ರಮುಖ ನಾಯಕರು ಹೌದು, ನಾವು ನಗರ ನಕ್ಸಲರು ಎಂದು ಘೋಷಣೆ ಮಾಡುವ ಮೂಲಕ ನಗರ ನಕ್ಸಲ್ ಎಂಬ ಪದ ಪ್ರಯೋಗವನ್ನು ಪ್ರಥಮ ಬಾರಿ ಮಾಡಿದ್ದರೆನ್ನಲಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆದರು.
ಈ ಹಿಂದೆ ಕೇಂದ್ರ ಸರ್ಕಾರವು ಕೋಮುವಾದಿ ಹಾಗೂ ದ್ವೇಷ ಹುಟ್ಟುಹಾಕುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅದರ ವಿರುದ್ಧ ಪ್ರಶಸ್ತಿ ವಾಪಸ್ ಚಳವಳಿಯನ್ನು ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಬುದ್ಧಿಜೀವಿಗಳು ಈಗ ಅದೇ ಮಾದರಿಯಲ್ಲಿ ನಾನು ನಗರ ನಕ್ಸಲ್ ಎಂದು ಘೋಷಣೆ ಮಾಡಿಕೊಳ್ಳುವ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.