ಚುನಾವಣೆಗೆ ತುದಿಗಾಲಲ್ಲಿ ನಿಂತ ಸಿಎಂ : ಶೀಘ್ರ ಸಂಪುಟ ವಿಸರ್ಜನೆ ?

By Web DeskFirst Published Sep 6, 2018, 8:22 AM IST
Highlights

ಅವಧಿಪೂರ್ವ ಚುನಾವಣೆಗಾಗಿ ತುದಿ ಗಾಲಲ್ಲಿ ನಿಂತಿರುವ ಮುಖ್ಯಮಂತ್ರಿ ಸಂಪುಟ ವಿಸ್ತರಣೆ ಮಾಡುವ ಸಂಬಂಧ ಗುರುವಾರ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ. 

ಹೈದರಾಬಾದ್‌: ಅವಧಿಪೂರ್ವ ಚುನಾವಣೆಗೆ ಹೋಗಲು ತುದಿಗಾಲಿನಲ್ಲಿ ನಿಂತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್‌ ಅವರು ಗುರುವಾರ ವಿಧಾನಸಭೆ ವಿಸರ್ಜನೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ತೆಲಂಗಾಣದ ಸಚಿವ ಸಂಪುಟ ಸಭೆ ಗುರುವಾರ ನಿಗದಿಯಾಗಿದ್ದು, ವಿಧಾನಸಭೆ ವಿಸರ್ಜನೆ ನಿರ್ಧಾರ ಕೈಗೊಳ್ಳುವ ಸಂಭವವಿದೆ. ಬಳಿಕ ಚಂದ್ರಶೇಖರ ರಾವ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮಂತ್ರಿಮಂಡಲ ವಿಸರ್ಜನೆ ಕುರಿತಂತೆ ಸಂಪುಟ ಕೈಗೊಂಡಿರುವ ನಿರ್ಧಾರದ ಪ್ರತಿಯನ್ನು ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತೆಲಂಗಾಣ ವಿಧಾನಸಭೆ ವಿಸರ್ಜನೆ ಬಹುತೇಕ ಪಕ್ಕಾ ಆದಂತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಇ.ಎಸ್‌.ಎಲ್‌. ನರಸಿಂಹನ್‌ ಅವರು ಮುಖ್ಯ ಕಾರ್ಯದರ್ಶಿ ಎಸ್‌.ಕೆ. ಜೋಶಿ ಹಾಗೂ ಇನ್ನಿತರೆ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ವಿಧಾನಸಭೆ ವಿಸರ್ಜನೆಯಾದರೆ ಯಾವೆಲ್ಲಾ ಸಾಂವಿಧಾನಿಕ ಪ್ರಕ್ರಿಯೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಸದ್ಯ, ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಪರ ಅಲೆ ಇದೆ ಎಂಬ ಸಮೀಕ್ಷಾ ವರದಿಗಳನ್ನು ಆಧರಿಸಿ, ಶೀಘ್ರ ಚುನಾವಣೆಗೆ ಹೋಗಲು ರಾವ್‌ ನಿರ್ಧರಿಸಿದ್ದಾರೆ ಎನ್ನಲಾಗಿದೆ. ತಕ್ಷಣವೇ ವಿಸರ್ಜನೆ ವಿಸರ್ಜಿಸಿದರೆ, ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ಚುನಾವಣೆ ಜೊತೆಗೆ ರಾಜ್ಯದಲ್ಲೂ ಚುನಾವಣೆ ಸಾಧ್ಯವಾಗಲಿದೆ ಎಂಬುದು ರಾವ್‌ ಲೆಕ್ಕಾಚಾರ. ಹೀಗೆಂದೇ ಅವರು ಇತ್ತೀಚೆಗೆ ವಿವಿಧ ಸಮುದಾಯ, ಉದ್ಯೋಗಸ್ಥರ ಮತ ಆಕರ್ಷಿಸಲು ಹಲವು ಬಂಪರ್‌ ಯೋಜನೆ ಘೋಷಿಸಿದ್ದರು. ಸೆ.6ರಂದು ವಿಧಾನಸಭೆ ವಿಸರ್ಜಿಸಿದರೆ ಮುಂದೆ ಒಳ್ಳೆಯದಾಗಲಿದೆ ಎಂಬ ಜ್ಯೋತಿಷಿಗಳ ಮಾತು ನಂಬಿ ಸಿಎಂ ರಾವ್‌, ಗುರುವಾರ ರಾಜ್ಯ ವಿಧಾನಸಭೆ ವಿಸರ್ಜನೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

click me!