ನಾನಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ನೋಡಿಲ್ಲ: ಸಿದ್ದರಾಮಯ್ಯ

First Published Jun 13, 2018, 8:02 AM IST
Highlights

ನಾನಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ನೋಡಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಣ್ಣಿಗೇನಾದರೂ ಬಿದ್ದರೆ ನಿಯಂತ್ರಿಸಲಿ. ಅಧಿಕಾರ ಅವರ ಕೈಯಲ್ಲೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು (ಜೂ. 13): ನಾನಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ನೋಡಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಣ್ಣಿಗೇನಾದರೂ ಬಿದ್ದರೆ ನಿಯಂತ್ರಿಸಲಿ. ಅಧಿಕಾರ ಅವರ ಕೈಯಲ್ಲೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

‘ವಿಧಾನೌಧದಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಒಂದು ವರ್ಗಾವಣೆಗೆ .5ರಿಂದ .10 ಲಕ್ಷ ಲಂಚ ಪಡೆಯಲಾಗುತ್ತದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ  ಮೈಸೂರಿನಲ್ಲಿ ಸಿದ್ದರಾಮಯ್ಯ  ಪ್ರತಿಕ್ರಿಯಿಸಿದ್ದಾರೆ. 

‘ನನಗಂತೂ ವಿಧಾನಸೌಧದಲ್ಲಿ ಭ್ರಷ್ಟಾಚಾರ ಕಣ್ಣಿಗೆ ಬಿದ್ದಿಲ್ಲ. ಕುಮಾರಸ್ವಾಮಿ ತಮ್ಮ ಕಣ್ಣಿಗೆ ಬಿದ್ದಿದೆ ಅಂತಿದ್ದಾರೆ. ಅವರ ಬಳಿ ಅಧಿಕಾರವಿದೆ. ಭ್ರಷ್ಟಾಚಾರ ಕಣ್ಣಿಗೆ ಕಂಡರೆ ನಿಯಂತ್ರಿಸಲಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ನನಗೆ ಮುಖ್ಯಮಂತ್ರಿ ಹುದ್ದೆ ಬೇಕಿರಲಿಲ್ಲ. ಕಾಂಗ್ರೆಸ್ಸಿನವರೇ ಬೇಡ ಎಂದರೂ ಕೊಟ್ಟಿದ್ದಾರೆ ಎಂಬ ಕುಮಾರಸ್ವಾಮಿ ಮತ್ತೊಂದು ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ನಾನು ಯಾವತ್ತೂ ಅವರ ಜತೆ ಆ ಬಗ್ಗೆ ಮಾತಾಡಿಲ್ಲ. ಅದು ನನಗೆ ಸಂಬಂಧಪಡದ ವಿಚಾರ’ ಎಂದರು.

ನನಗೆ ಸೋಲು ಶಾಕಿಂಗ್‌ ಅಲ್ಲ:

ಚಾಮುಂಡೇಶ್ವರಿ ಕ್ಷೇತ್ರದ ತೀರ್ಪು ಮಾಧ್ಯಮಗಳಿಗೆ ಶಾಕಿಂಗ್‌ ಆಗಿರಬಹುದು. ನನಗಲ್ಲ. ಅದು ನಿರೀಕ್ಷಿತ. ಆದರೆ, ಸೋಲು ಹೇಗಾಯಿತು ಎಂದು ಪರಾಮರ್ಶಿಸಲು ಹೋಗುವುದಿಲ್ಲ. ಬಾದಾಮಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ, ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆಯೇ ಹೊರತು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು. ಜತೆಗೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದರು.

ಐದು ವರ್ಷ ಪೂರೈಸಲಿ: ಜನರ ತೀರ್ಪಿನ ಅನ್ವಯ ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಬೇಕು. ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ. ಈ ಸರ್ಕಾರ ಐದು ವರ್ಷ ಪೂರೈಸಲಿ ಎಂದೇ ಜನ ಆಶೀರ್ವಾದ ಮಾಡಿದ್ದಾರೆ ಎಂದರು.

ಇದೇ ವೇಳೆ, ಅತೃಪ್ತರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಕಾಂಗ್ರೆಸ್‌ನ ಅತೃಪ್ತರು ನಮ್ಮೊಂದಿಗಿದ್ದಾರೆ ಎಂಬ ಅವರ ಹೇಳಿಕೆಗೆ ಅಷ್ಟುಮನ್ನಣೆ ನೀಡಬೇಕಿಲ್ಲ ಎಂದು ತಿಳಿಸಿದರು.

ಕರ್ನಾಟಕದ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಬಿಜೆಪಿಯವರು ಕರುಣೆ ತೋರುತ್ತಿದ್ದಾರೆ. ಅವರಿಗೂ ಧನ್ಯವಾದ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. 

click me!